ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರ ಕಿತ್ತೊಗೆಯಲು ಆಗ್ರಹಿಸಿ ಏ. 22ರಂದು ಮನವಿ ಸಲ್ಲಿಕೆ: ಮುತಾಲಿಕ್

Published 20 ಏಪ್ರಿಲ್ 2024, 12:10 IST
Last Updated 20 ಏಪ್ರಿಲ್ 2024, 12:10 IST
ಅಕ್ಷರ ಗಾತ್ರ

ಕೊಪ್ಪಳ: ‘ಕಳೆದ ಎರಡ್ಮೂರು ದಿನಗಳಲ್ಲಿ ಅನೇಕ ಹಿಂದೂಗಳ ಕೊಲೆಗಳಾಗಿದ್ದು, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿ ಏಪ್ರಿಲ್ 22ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಶ್ರೀರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ ಅವರು ’ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಡೆದಿದೆ. ಗದುಗಿನಲ್ಲಿ ನಾಲ್ಕು ಜನರ ಕೊಲೆಗಳಾಗಿವೆ. ನಮ್ಮ ದೇಶದಲ್ಲಿ ಜನರು ಜೈ ಹನುಮ, ಜೈ ಶ್ರೀರಾಮ್‌ ಎನ್ನುವಂತಿಲ್ಲ. ಅಲ್ಲಾ ಹು ಅಕ್ಬರ್‌ ಹೇಳಬೇಕು. ರಾಜ್ಯ ಸರ್ಕಾರ ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡುತ್ತಿದೆ. ಆದ್ದರಿಂದ ಆಯಾ ಜಿಲ್ಲೆಗಳಲ್ಲಿ ಸಂಘಟನೆಯಿಂದ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ದೇಶದ ಸುರಕ್ಷತೆ ದೃಷ್ಟಿಯಿಂದ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗುವುದು ಅಗತ್ಯವಿದೆ. ಆದ್ದರಿಂದ ಮೋದಿ ಗೆಲ್ಲಿಸಿ, ದೇಶ ಗೆಲ್ಲಿಸಿ ಅಭಿಯಾನ ಮಾಡುತ್ತಿದ್ದೇವೆ. ಮೋದಿ ಹೆಸರಿನಲ್ಲಿ ಗೆದ್ದು ಬಂದವರು ಸುಮ್ಮನೆ ಕಾಲಹರಣ ಮಾಡುವ ಬದಲು ಅವರ ಅರ್ಧದಷ್ಟಾದರೂ ಶ್ರಮ ಪಟ್ಟು ಕೆಲಸ ಮಾಡಬೇಕು. ಹಿಂದೂಗಳ ರಕ್ಷಣೆಗೆ ನೆರವಾಗಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಸಂಘಟನೆ ಮೋದಿ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ. ಗೆದ್ದ ಬಳಿಕ ಆ ಪಕ್ಷದ ಸಂಸದರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಈ ಕುರಿತು ಗೆಲ್ಲುವ ಮೊದಲೇ ಬಿಜೆಪಿ ಅಭ್ಯರ್ಥಿಗಳಿಗೆ ಷರತ್ತು ವಿಧಿಸಲಾಗುತ್ತಿದೆ. ಸಂಸತ್ತಿನಲ್ಲಿ ಸಮಾನ ನಾಗರಿಕ ಹಕ್ಕುಗಳ ಕಾಯ್ದೆ, ಗೋ ರಕ್ಷಣಾ ಕಾನೂನು ಜಾರಿಗೆ ತರಬೇಕು, ವಕ್ಫ್‌ ಬೋರ್ಡ್‌ ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

‘ಅಂಜನಾದ್ರಿಯಿಂದ ಆಯೋಧ್ಯೆಗೆ ನೇರ ರೈಲು ಸೌಲಭ್ಯ ಕಲ್ಪಿಸಬೇಕು. ಅಂಜನಾದ್ರಿ ಅಭಿವೃದ್ಧಿಗೆ ತುರ್ತು ಕ್ರಮ ವಹಿಸಬೇಕು. ನಿಮ್ಮ ಕ್ಷೇತ್ರದಲ್ಲಿ ಹಿಂದುತ್ವಕ್ಕಾಗಿ ಹೋರಾಟ ಮಾಡಿದವರ ಮೇಲೆ ಹಾಕಿರುವ ಕೇಸ್ ಹಿಂದಕ್ಕೆ ತೆಗೆಸಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT