ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿ.ವಿ. ವಿಜ್ಞಾನಿಗಳಿಂದ ‘ಸಹ್ಯಾದ್ರಿ ಕೆಂಪು ಮುಕ್ತಿ’ ಭತ್ತದ ತಳಿ ಅಭಿವೃದ್ಧಿ

Last Updated 19 ನವೆಂಬರ್ 2022, 20:45 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಂಕಿ ರೋಗನಿರೋಧಕ ‘ಸಹ್ಯಾದ್ರಿ ಕೆಂಪು ಮುಕ್ತಿ’ ಹೆಸರಿನ ಕೆಂಪಕ್ಕಿಯ ಭತ್ತದ ತಳಿಯನ್ನು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಸದ್ಯ ರಾಜ್ಯದ 1.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಾರರು, ಕೇರಳ ಮೂಲದ ‘ಜ್ಯೋತಿ’ ತಳಿಯ ಕೆಂಪಕ್ಕಿಯ ಭತ್ತ ಬೆಳೆಯುತ್ತಿದ್ದಾರೆ. ಅದಕ್ಕೆ ಬೆಂಕಿ ರೋಗ ಬಾಧಿಸಲಿದೆ. ಪರಿಹಾರ ಹುಡುಕಲು ವಿಶ್ವವಿದ್ಯಾಲಯ ಮುಂದಾಗಿದೆ. ಭತ್ತ ತಳಿ ಸಂಶೋಧನಾ ವಿಭಾಗದ ಡೀನ್ ಡಾ.ಬಿ.ಎಂ.ದುಷ್ಯಂತ್‌ಕುಮಾರ್ ನೇತೃತ್ವದ ತಂಡ ಹೊಸ ತಳಿ ಅಭಿವೃದ್ಧಿಪಡಿಸಿದೆ.

ನೂತನ ತಳಿ ಭತ್ತವನ್ನು ವಲಯ, ರಾಷ್ಟ್ರೀಯ ಮಟ್ಟದಲ್ಲಿ ‍ಪ್ರಾಯೋಗಿಕ ಹಂತದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಹೆಕ್ಟೇರ್‌ಗೆ 60 ಕ್ವಿಂಟಲ್‌ ಇಳುವರಿ ಬಂದಿದೆ. ದೇಶದ ವಿವಿಧ ಭಾಗಗಳ 60 ಕಡೆ ಕ್ಷೇತ್ರ ಪ್ರಯೋಗ ನಡೆದಿದೆ. ಉಳಿದ ತಳಿಗಳಿಗಿಂತ ಶೇ 21.30ರಷ್ಟು ಹೆಚ್ಚು ಇಳುವರಿ ದೊರೆತಿದೆ ಎಂದು ಡಾ.ಬಿ.ಎಂ.ದುಷ್ಯಂತ್‌ ಕುಮಾರ್ ಹೇಳುತ್ತಾರೆ.

ಭಾರತೀಯ ಭತ್ತ ತಳಿ ಸಂಶೋಧನಾ ಸಂಸ್ಥೆ ನಡೆಸಿದ ಇಳುವರಿ ಪರೀಕ್ಷೆಯಲ್ಲಿ ‘ಸಹ್ಯಾದ್ರಿ ಕೆಂಪು ಮುಕ್ತಿ’ ತಳಿ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ. 69 ವಿವಿಧ ತಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೇಂದ್ರೀಯ ತಳಿ ಬಿಡುಗಡೆ ಸಮಿತಿ (ಸಿವಿಆರ್‌ಸಿ) ಕೂಡ ರಾಜ್ಯದ ತಳಿಗೆ ಬೆಳೆಯಲು ಶಿಫಾರಸು ಮಾಡಿ ಅಧಿಸೂಚನೆ ಹೊರಡಿಸಿದೆ.

‘ಇದು ಜ್ಯೋತಿ ಭತ್ತಕ್ಕೆ ಪರ್ಯಾಯ. ಬೆಂಕಿ ರೋಗಕ್ಕೆ ಬಹಳಷ್ಟು ಪ್ರತಿರೋಧ ಗುಣಹೊಂದಿದೆ. 2021–22ರಲ್ಲಿ ರಾಜ್ಯದಲ್ಲಿ 5,000 ಎಕರೆಯಲ್ಲಿ ‘ಸಹ್ಯಾದ್ರಿ ಕೆಂಪು ಮುಕ್ತಿ’ ತಳಿಯ ಭತ್ತ ಬೆಳೆಯಲಾಗಿದೆ.

ಹೆಕ್ಟೇರ್‌ಗೆ 7,000ದಿಂದ 7,500 ಕೆ.ಜಿ ಹೆಚ್ಚು ಇಳುವರಿ ನೀಡಿದೆ. ಈ ತಳಿಯ ಭತ್ತದ ಸಸಿ 10 ದಿನನೀರಿನಲ್ಲಿದ್ದರೂ ತಾಳಿಕೆಯ ಶಕ್ತಿ ಹೊಂದಿದೆ’ ಎಂದು ದುಷ್ಯಂತ್‌ಕುಮಾರ್ ತಿಳಿಸಿದರು.

‘ಮೊದಲು 25 ಎಕರೆಯಲ್ಲಿ ಜ್ಯೋತಿ ತಳಿ ಭತ್ತ ಬೆಳೆಯುತ್ತಿದ್ದೆ. ತಜ್ಞರ ಸಲಹೆ ಮೇರೆಗೆ ಎರಡು ವರ್ಷದಿಂದ ಸಹ್ಯಾದ್ರಿ ಕೆಂಪು ಮುಕ್ತಿ ತಳಿ ಭತ್ತ ಬೆಳೆಯುತ್ತಿದ್ದೇನೆ. ಮೊದಲು ಎಕರೆಗೆ 40 ಕ್ವಿಂಟಲ್ ಇದ್ದ ಇಳುವರಿ ಈಗ 45 ಕ್ವಿಂಟಲ್‌ಗೆ ಹೆಚ್ಚಿದೆ.’ ಎಂದು ಭದ್ರಾವತಿ ತಾಲ್ಲೂಕಿನ ಭತ್ತದ ಬೆಳೆಗಾರ ಹೇಮಂತಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT