‘ಕಾರಣಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ’ ಪತ್ರ ಬರೆದಿರುವ ಅಧಿಕಾರಿಗಳು ತನಿಖೆಯಲ್ಲಿ ಪರಿಣತಿ ಹೊಂದಿರಬಹುದು. ಈ ಕಾರಣಕ್ಕೆ ಅವರನ್ನು ನೇಮಿಸಿರುವ ಸಾಧ್ಯತೆ ಇದೆ. ಆದರೆ ಯಾರನ್ನೇ ಆಗಲಿ ಒತ್ತಾಯ ಪೂರ್ವಕವಾಗಿ ತಂಡದಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಒತ್ತಾಯ ಮಾಡಿ ತಂಡಕ್ಕೆ ಸೇರಿಸಿಕೊಂಡಾಗ ತನಿಖೆಯ ಮೇಲೆ ಪರಿಣಾಮ ಬೀರಬಹುದು. ಇಬ್ಬರು ಅಧಿಕಾರಿಗಳು ವೈಯಕ್ತಿಕ ಕಾರಣ ನೀಡಿ ಹಿಂದೆ ಸರಿದಿರಬಹುದು. ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಎಸ್‌ಪಿ ದರ್ಜೆಯ ಅಧಿಕಾರಿಗಳಿದ್ದಾರೆ. ಅವರಲ್ಲಿ ಯಾರನ್ನಾದರೂ ನೇಮಿಸಿಕೊಳ್ಳಬಹುದು.ಎಸ್.ಟಿ.ರಮೇಶ್ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ
‘ಮಾಹಿತಿ ನೀಡಬೇಕು’ ವೈಯಕ್ತಿಕ ಕಾರಣ ಅಥವಾ ತೊಂದರೆ ಇದ್ದರೆ ಯಾವುದೇ ತನಿಖಾ ತಂಡದಿಂದ ಅಧಿಕಾರಿಗಳಿಗೆ ಹೊರಗೆ ಉಳಿಯಲು ಅವಕಾಶವಿದೆ. ತಂಡದ ಮುಖ್ಯಸ್ಥರು ಅಥವಾ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ನೀಡಬೇಕು. ಅದನ್ನು ಒಪ್ಪುವುದು ಅಥವಾ ಒಪ್ಪದೇ ಇರುವುದು ಸರ್ಕಾರಕ್ಕೆ ಬಿಟ್ಟ ವಿಚಾರ.ಶಂಕರ ಬಿದರಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ
‘ಶಿಸ್ತು ಕ್ರಮಕ್ಕೆ ಅವಕಾಶವಿದೆ’ ಕೆಲವೊಂದು ಪ್ರಕರಣಗಳಲ್ಲಿ ಅನವಶ್ಯವಾಗಿ ಗುರಿ ಆಗಬೇಕಾಗುತ್ತದೆ ಎಂದು ಭಾವಿಸಿ ಎಸ್‌ಐಟಿಯಿಂದ ಅಧಿಕಾರಿಗಳು ಹಿಂದೆ ಸರಿಯುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿ ತನಿಖಾ ತಂಡದಿಂದ ಹೊರಗುಳಿದರೆ ಅಂತಹ ಅಧಿಕಾರಿಯ ವಿರುದ್ಧ ಎಸ್‌ಐಟಿ ಮುಖ್ಯಸ್ಥರು ಡಿಜಿ–ಐಜಿಪಿ ಅವರಿಗೆ ಪತ್ರ ಬರೆಯಬೇಕು. ಆ ಪತ್ರ ಆಧರಿಸಿ ಗೃಹ ಇಲಾಖೆ ಕಾರ್ಯದರ್ಶಿ ಕ್ರಮ ಕೈಗೊಳ್ಳಬಹುದು. ಐಪಿಎಸ್‌ಯೇತರ ಅಧಿಕಾರಿ ಆಗಿದ್ದರೆ ಡಿಜಿ–ಐಜಿಪಿ ಅವರೇ ಶಿಸ್ತು ಕ್ರಮ ಕೈಗೊಳ್ಳಬಹುದು.ಬಸವರಾಜ ಮಾಲಗತ್ತಿ, ನಿವೃತ್ತ ಪೊಲೀಸ್ ಅಧಿಕಾರಿ
ಬಹುಮಟ್ಟಿನ ಸಕಾರಣ ಅಗತ್ಯ ಸರ್ಕಾರಿ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯ ನಿರ್ವಹಣೆಯಿಂದ ಹಿಂದೆ ಸರಿಯಬೇಕಾದರೆ ಅದಕ್ಕೆ ಸೂಕ್ತ ಮತ್ತು ಸಮರ್ಥನೀಯ ಕಾರಣಗಳಿರಬೇಕು. ಕರ್ತವ್ಯ ಮಾಡಲೇಬೇಕೆಂಬುದು ಕಾನೂನಿಗೆ ಸಮ್ಮತವಾದ ವಿಚಾರ. ಆದರೆ ಅವರು ನಿರ್ವಹಿಸಬೇಕಾದ ಕರ್ತವ್ಯ ಅಥವಾ ನಿಗದಿತ ಜವಾಬ್ದಾರಿ ಅವರಿಗೆ ಮುಜುಗರ ಉಂಟು ಮಾಡುವಂತಿದ್ದರೆ ಅಂತಹ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಯ ಕರ್ತವ್ಯ ನಿರ್ವಹಣಾ ಜವಾಬ್ದಾರಿಯನ್ನು ಮುಂದುವರಿಸದಿರಬಹುದು. ತಮಗೆ ಈ ಜವಾಬ್ದಾರಿ ಬೇಡ ಎನ್ನುವ ಅಧಿಕಾರಿಯ ಕಾರಣಗಳನ್ನು ಇಂತಹ ಸಂದರ್ಭಗಳಲ್ಲಿ ಒಪ್ಪಬೇಕಾಗುತ್ತದೆ. ಅವರ ಕಾರಣಗಳನ್ನು ಉಪೇಕ್ಷಿಸಿ ತನಿಖೆಯಲ್ಲಿ ತೊಡಗಿಸಿದರೆ ತನಿಖೆ ಭಂಗಗೊಂಡು ಶಿಥಿಲಗೊಳ್ಳುವ ಎಲ್ಲಾ ಸಾಧ್ಯತೆಗಳಿರುತ್ತವೆ.ಸಿ.ಎಚ್.ಹನುಮಂತರಾಯ ಹೈಕೋರ್ಟ್ ಹಿರಿಯ ವಕೀಲರು
ಸಾರ್ವಜನಿಕ ಹಿತಾಸಕ್ತಿ ಬಳಲಬಾರದು ಅಧಿಕಾರಿಗಳು ತಮಗೆ ನಿರ್ವಹಿಸಿದ ಜವಾಬ್ದಾರಿಯಿಂದ ಹಿಂದೆ ಸರಿಯುತ್ತೇವೆ ಎಂದು ಸಾಮಾನ್ಯವಾಗಿ ಕೇಳುವಂತಿಲ್ಲ ಇಲ್ಲವೇ ಮನವಿ ಮಾಡುವಂತಿಲ್ಲ. ಒಂದು ವೇಳೆ ಅಧಿಕಾರಿ ಸ್ಥಳೀಯರೇ ಆಗಿದ್ದರೆ ಆ ನಿರ್ದಿಷ್ಟ ಜವಾಬ್ದಾರಿ ಮುಜುಗರ ಉಂಟು ಮಾಡುವಂತಿದ್ದರೆ ಅಥವಾ ಕಷ್ಟದಾಯಕವಾಗಿ ಇದೆ ಎಂದಾದರೆ ಕೇಳಬಹುದು. ಸರಿಯಾದ ಕಾರಣ ಇಲ್ಲದೆ ತನಿಖೆ ಜವಾಬ್ದಾರಿ ತನಗೆ ಬೇಡ ಎಂದರೆ ಒಪ್ಪಲು ಆಗದು. ಆದಾಗ್ಯೂ ಬೇಡ ಎಂದವರನ್ನು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಆದೇಶಿಸಿದರೆ ಸಾರ್ವಜನಿಕ ಹಿತಾಸಕ್ತಿ ಬಳಲುತ್ತದೆ.ಪಿ.ಎಸ್.ರಾಜಗೋಪಾಲ್ ಪದಾಂಕಿತ ಹಿರಿಯ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.