ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ನೇರ ನೇಮಕಾತಿಗೆ ಸಚಿವರ ಸೂಚನೆ

Published 17 ಆಗಸ್ಟ್ 2023, 13:32 IST
Last Updated 17 ಆಗಸ್ಟ್ 2023, 13:32 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ನೇರ ಭರ್ತಿಗೆ ಸೂಚನೆ ನೀಡಲಾಗಿದೆ ಮತ್ತು ಎಷ್ಟು ಹುದ್ದೆಗಳು ಖಾಲಿ ಇವೆ ಹಾಗೂ ಎಷ್ಟು ಮಂದಿಗೆ ಬಡ್ತಿ ನೀಡಬೇಕು ಎಂಬ ಅಂಕಿಅಂಶಗಳ ಅನುಪಾಲನಾ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಅಧ್ಯಕ್ಷತೆಯ್ಲಲಿ ಗುರುವಾರ ನಡೆದ ಸಂಪುಟ ಉಪಸಮಿತಿ ಸಭೆಯ ಬಳಿಕ ಅವರು ಈ ವಿಷಯ ತಿಳಿಸಿದರು.

ಈ ಭಾಗದಲ್ಲಿ ಖಾಲಿ ಹುದ್ದೆಗಳ ನೇರ ಭರ್ತಿಗೆ ಹಣಕಾಸು ಇಲಾಖೆಯ ಒಪ್ಪಿಗೆ ಬೇಕಿಲ್ಲ. ಕಾನೂನಿನಲ್ಲಿಯೇ ಆ ಅಂಶವಿದೆ. ಅದನ್ನು ಬಳಕೆ ಮಾಡಿ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಬಹಳಷ್ಟು ಹುದ್ದೆಗಳು ಖಾಲಿ ಇರುವುದರಿಂದ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ ಹಾಗೂ ಅಭಿವೃದ್ಧಿ ಕೆಲಸಗಳಲ್ಲಿ ಪ್ರಗತಿ ಆಗುತ್ತಿಲ್ಲ ಎಂದರು.

ಮುಂಬಡ್ತಿ ವಿಚಾರದಲ್ಲಿ ಕೆಲವು ಇಲಾಖೆಗಳಲ್ಲಿ ಗೊಂದಲಗಳಿತ್ತು. ಇದರಿಂದಾಗಿ ನೇಮಕಾತಿಗೆ ಹಿನ್ನಡೆ ಉಂಟಾಗಿದೆ. ಮುಂಬಡ್ತಿಯಲ್ಲಿ ಹಿರಿತನ ಕಾಯ್ದುಕೊಳ್ಳಬೇಕು ಎಂದು ಹೈಕೋರ್ಟ್‌ ಆದೇಶವಿದೆ. ಸೇವಾ ಹಿರಿತನ ಕಾಯ್ದುಕೊಂಡು ಮುಂಬಡ್ತಿಯ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಶರಣಪ್ರಕಾಶ್‌ ಪಾಟೀಲ ತಿಳಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಆಗಲಿಲ್ಲ. ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಬಿಜೆಪಿ ತನ್ನ ಅವಧಿಯಲ್ಲಿ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿತ್ತು. ಒಟ್ಟು ಏಳು ಸಭೆಗಳನ್ನು ಮಾಡಿದ್ದು ಬಿಟ್ಟರೆ,ಯಾವುದೇ ಅಂಕಿ– ಅಂಶವೂ ಲಭ್ಯವಿಲ್ಲ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿ ಕಾರಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಕೆಆರ್‌ಡಿಬಿಯಲ್ಲಿ ಆಗಿರುವ ಅವ್ಯವಹಾರಗಳ ತನಿಖೆ ನಡೆಯುತ್ತಿದೆ. ಸಾಕಷ್ಟು ಅನುದಾನ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಕ್ರಮಗಳ ಆಳ–ಅಗಲ ಅರಿಯುವುದು ಕಷ್ಟ ಎಂದು ಖರ್ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT