ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ–ಗೋವಾ ಹೆದ್ದಾರಿ ವಿಸ್ತರಣೆ: ಅರಣ್ಯ ಅನುಮೋದನೆ ಪಡೆಯಲು ನಿರ್ದೇಶನ

Last Updated 30 ನವೆಂಬರ್ 2022, 15:55 IST
ಅಕ್ಷರ ಗಾತ್ರ

ನವದೆಹಲಿ:ಬೆಳಗಾವಿಯಿಂದ ಚೋರ್ಲಾ ಮೂಲಕ ಕರ್ನಾಟಕವನ್ನು ಗೋವಾದೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 748ಎಎ ಉನ್ನತೀಕರಣ ಯೋಜನೆಗೆ ಅರಣ್ಯ ಹಾಗೂ ವನ್ಯಜೀವಿ ಅನುಮೋದನೆ ಪಡೆಯಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ದೇಶನ ನೀಡಿದೆ.

ಈ ಸಂಬಂಧ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿರುವ ಲೂಯಿಸ್‌ ಬರ್ಗರ್ ಸಂಸ್ಥೆಗೆ ಇದೇ 28ರಂದು ಪತ್ರ ಬರೆದಿರುವ ಪ್ರಾಧಿಕಾರದ ಯೋಜನಾ ನಿರ್ದೇಶಕ ಭುವನೇಶ್‌ ಕುಮಾರ್‌, ‘ಅರಣ್ಯ ಹಾಗೂ ವನ್ಯಜೀವಿ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸದಿರುವುದಕ್ಕೆ ಕಾರಣಗಳನ್ನು ನೀಡಬೇಕು. ಜತೆಗೆ, ಎಲ್ಲ ಅನುಮತಿಗಳನ್ನು ಪಡೆಯಲು ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು’ ಎಂದು ಸೂಚಿಸಿದ್ದಾರೆ.

ಈ ಹೆದ್ದಾರಿಯು ಬೆಳಗಾವಿಯ ಪೀರನವಾಡಿಯಿಂದ ಆರಂಭವಾಗಿ ಕಿನಾಯೆ,ಜಾಂಬೋಟಿ, ಕಣಕುಂಬಿ, ಚೋರ್ಲಾ ಮೂಲಕ ಗೋವಾದ ಸ್ಯಾಂಕೀಲಿಮ್ ಎಂಬಲ್ಲಿ ಮುಕ್ತಾಯವಾಗುತ್ತದೆ. ಹೆದ್ದಾರಿ ಪ್ರಾಧಿಕಾರ ಈ ಹೆದ್ದಾರಿಯನ್ನು ಉನ್ನತೀಕರಿಸಲು ₹220 ಕೋಟಿ ಮೀಸಲಿರಿಸಿದೆ. ಕಾಮಗಾರಿಯ ಗುತ್ತಿಗೆಯನ್ನು ಎನ್‌ಎಸ್‌ಸಿ ಪ್ರಾಜೆಕ್ಟ್‌ಗೆ ವಹಿಸಲಾಗಿದೆ.

‘ಈ ಯೋಜನೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತಿದೆ. ಹಲವು ಮರಗಳನ್ನು ಕಡಿಯಬೇಕಾಗುತ್ತದೆ. ಮರ ಕಡಿಯಲು ಅನುಮತಿ ನೀಡುವಂತೆ ಬೆಳಗಾವಿ ಡಿಸಿಎಫ್‌ ಹಾಗೂ ಪೊಂಡಾ ಡಿಸಿಎಫ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ರಸ್ತೆ ವಿಸ್ತರಣೆ 5.5 ಮೀಟರ್‌ಗಿಂತ ಹೆಚ್ಚು ಇದ್ದರೆ ಅರಣ್ಯ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ. ಜತೆಗೆ, ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ನವೆಂಬರ್‌ 14ರಂದು ನಡೆಸಿದ ಸಭೆಯಲ್ಲಿ ಅರಣ್ಯ ಅನುಮೋದನೆ ಪಡೆಯಬೇಕು ಎಂಬ ನಿರ್ಣಯವಾಗಿದೆ’ ಎಂದು ಭುವನೇಶ್‌ ಕುಮಾರ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹೆದ್ದಾರಿ ಅಭಿವೃದ್ಧಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 2010–11ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. ಹೆದ್ದಾರಿಯನ್ನು 3.5 ಮೀಟರ್‌ನಿಂದ 6.7 ಮೀಟರ್‌ಗೆ (1.2 ಮೀಟರ್ ಚರಂಡಿ ಸೇರಿ) ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿತ್ತು.‌ವನ್ಯಜೀವಿಗಳ ಸುಗಮ ಸಂಚಾರಕ್ಕೆ ಕೆಳಸೇತುವೆಗಳನ್ನು ನಿರ್ಮಿಸಬೇಕು ಎಂಬ ಷರತ್ತನ್ನೂ ವಿಧಿಸಿತ್ತು.ಹೆದ್ದಾರಿಯ ಪ್ರದೇಶ ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಷರತ್ತುಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿತ್ತು.ಗೋವಾ ರಾಜ್ಯದ ವ್ಯಾಪ್ತಿಯಲ್ಲಿ ಹೆದ್ದಾರಿಯು ಮಹದಾಯಿ ಅಭಯಾರಣ್ಯದ ಮೂಲಕ ಸಾಗುತ್ತಿದ್ದು ಹೆದ್ದಾರಿಯ ಉನ್ನತೀಕರಣ ಯೋಜನೆ ಹುಲಿಗಳ ಸಂರಕ್ಷಣೆಗೆ ಮಾರಕವಾಗಲಿದೆ ಎಂದೂ ವನ್ಯಜೀವಿ ಕಾರ್ಯಕರ್ತರು ಗಮನ ಸೆಳೆದಿದ್ದರು.

ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದಿರುವ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ, ‘ಯೋಜನಾ ಪ್ರದೇಶ ಅದರಲ್ಲೂ ಕರ್ನಾಟಕದಜಾಂಬೋಟಿಯಿಂದ ಚೋರ್ಲಾ ವರೆಗೆ (ಖಾನಾಪುರ, ಕಣಕುಂಬಿ)ದಟ್ಟ ಅರಣ್ಯಗಳ ಮೂಲಕ ಸಾಗುತ್ತದೆ. ಹುಲಿ, ಚಿರತೆ, ಕಾಟಿ, ಕೆನ್ನಾಯಿ, ಕರಡಿ, ಕಡವೆ, ಕಾಳಿಂಗ ಸರ್ಪ ಸೇರಿದಂತೆ ಅಪರೂಪದ ವನ್ಯಜೀವಿಗಳು ಇಲ್ಲಿವೆ. ಈಗಾಗಲೇ ಈ ಹೆದ್ದಾರಿಯಲ್ಲಿ ಕಾಟಿ, ಚಿರತೆ, ಕಾಳಿಂಗ ಸರ್ಪ ಸೇರಿದಂತೆ ಹಲವು ವನ್ಯಜೀವಿಗಳು ವಾಹನ ಅಪಘಾತಕ್ಕೆ ಬಲಿಯಾಗಿವೆ’ ಎಂದರು.

‘ಕರ್ನಾಟಕದಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲು ಬೆಳಗಾವಿ- ಖಾನಾಪುರ- ಅನಮೋಡ ಮೂಲಕ ಹೆದ್ದಾರಿ 748 ಅನ್ನು ಹೆದ್ದಾರಿ ಪ್ರಾಧಿಕಾರವೇ ₹1,300 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡುತ್ತಿದೆ.ಬೆಳಗಾವಿಯಿಂದಖಾನಾಪುರದವರೆಗೆ ಶೇ 63 ಹಾಗೂ ಖಾನಾಪುರದಿಂದ ಗೋವಾ ಗಡಿಯ ವರೆಗೆ ಶೇ 70 ಕಾಮಗಾರಿ ಮುಗಿದಿದೆ. ಈ ಯೋಜನೆಗಿದ್ದ ಕಾನೂನಾತ್ಮಕ ತೊಡಕು ನಿವಾರಣೆಯಾಗಿದೆ. ಈ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮೊದಲು ಆದ್ಯತೆ ನೀಡಬೇಕು. ಈ ಕಾಮಗಾರಿ ಪೂರ್ಣಗೊಳಿಸಿದರೆ ಚೋರ್ಲಾ ರಸ್ತೆಯಲ್ಲಿ ಸಂಚಾರ ದಟ್ಟಣೆ ತನ್ನಿಂತಾನೆ ಕಡಿಮೆಯಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT