ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎತ್ತಿನಹೊಳೆ ಯೋಜನೆ ವಿಚಾರವಾಗಿ ಡಿಸಿಎಂ ಜೊತೆ ಚರ್ಚೆ: ಗೃಹ ಸಚಿವ ಪರಮೇಶ್ವರ

Published : 30 ಸೆಪ್ಟೆಂಬರ್ 2024, 8:16 IST
Last Updated : 30 ಸೆಪ್ಟೆಂಬರ್ 2024, 8:16 IST
ಫಾಲೋ ಮಾಡಿ
Comments

ಬೆಂಗಳೂರು: ‘ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚಿಸಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನೆಗೆ ಬಂದಿದ್ದರು.‌ ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಜೊತೆ ಕೆಲಹೊತ್ತು ಚರ್ಚಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ, ‘ಎತ್ತಿನಹೊಳೆ ಯೋಜನೆ ಮಂದಗತಿಯಲ್ಲಿದೆ.‌ ಹಣ ಬಿಡುಗಡೆ ಆಗಬೇಕಿದೆ. ದೊಡ್ಡಬಳ್ಳಾಪುರದಲ್ಲಿ ನೀರು ಸಂಗ್ರಹಕ್ಕೆ ಐದು ಸಾವಿರ ಎಕರೆ ಭೂಮಿ ಪ್ರಸ್ತಾಪ‌ ಮಾಡಲಾಗಿತ್ತು. ಅದರಲ್ಲಿ 2, 500 ಎಕರೆ ಭೂಮಿ ಕೊರಟಗೆರೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ..‌ ಈ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದರು.

‘ಗುಬ್ಬಿಯಿಂದ‌ ಕುಣಿಗಲ್‌ವರೆಗೆ ಎಕ್ಸ್‌ಪ್ರೆಸ್ ಕಾಲುವೆ ಮಾಡಲು ಅನುಮತಿ ಸಿಕ್ಕಿದೆ.‌ ಕೆಲಸ‌ ಆರಂಭಿಸುವಾಗ ಜನರು ತಡೆದಿದ್ದಾರೆ. ಈ ಬಗ್ಗೆಯೂ ಚರ್ಚಿಸಿದ್ದೇವೆ. ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ತಾಂತ್ರಿಕ ಸಮಿತಿ ಮಾಡಿದ್ದಾರೆ.‌ ಅದರ ವರದಿ ಕೊಟ್ಟ ಬಳಿಕ ಈ ಕೆಲಸ ಮುಂದುವರಿಯಲಿದೆ’ ಎಂದರು.

‘ನಾನು ₹1 ಸಾವಿರ ಕೋಟಿ ನೋಡಿಲ್ಲ’
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, ‘ಸರ್ಕಾರ ಅಸ್ಥಿರಗೊಳಿಸಲು ₹ 1 ಸಾವಿರ ಎಲ್ಲಿಟ್ಟಿದ್ದಾರೆ ಎಂಬುದನ್ನು ಯತ್ನಾಳ್ ಅವರನ್ನೇ‌ ಕೇಳಬೇಕು. ಈ ಬಗ್ಗೆ ತನಿಖೆ ಆಗಬೇಕು. ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು.‌ ಸಂದರ್ಭ ಬಂದರೆ ದಾಖಲಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ಬಾಂಗ್ಲಾ‌ ಪ್ರಜೆಗಳ ಬಂಧನ’

‘ಜಿಗಣಿಯಲ್ಲಿ ನಾಲ್ವರು ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಯಾವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು ಎಂಬುದು ಗೊತ್ತಾಗಬೇಕಿದೆ. ಹತ್ತು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದರು ಎಂಬುದು ಸತ್ಯವಾಗಿದ್ದರೆ, ಕೇಂದ್ರ ಗುಪ್ತದಳದ ಗಮನಕ್ಕೆ ಯಾಕೆ ಬರಲಿಲ್ಲ.‌ ಬಂಧಿತರು ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಹೆಸರು ಬದಲಾಯಿಸಿಕೊಂಡಿದ್ದಾರೆ. ತನಿಖೆಯಲ್ಲಿ ಏನೆಲ್ಲ ಮಾಹಿತಿಗಳು ಹೊರಬರುತ್ತವೆ ಎಂಬುದನ್ನು ನೋಡೋಣ’ ಎಂದರು.

‘ಬಾಂಗ್ಲಾ ಗಡಿಯಲ್ಲಿ ನುಸುಳದಂತೆ ಬಂದೋಬಸ್ತ್ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ‌ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾ ದೇಶದ ಹೈಕಮೀಷನ್‌ಗೂ ತಿಳಿಸುತ್ತಿದ್ದೇವೆ’ ಎಂದರು.

‘ಫ್ರೇಜರ್‌ಟೌನ್‌ನಲ್ಲಿ‌ ಪೊಲೀಸ್ ಮನೆಗಳ ದುಸ್ಥಿತಿಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸುತ್ತೇನೆ.‌ ಸಾಧ್ಯವಾದರೆ ಖುದ್ದಾಗಿ ಭೇಟಿ ನೀಡಿ, ಸೂಕ್ತ ನಿರ್ದೇಶನ‌ ನೀಡುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT