ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ ಡಿಸಿ ಕರ್ತವ್ಯಕ್ಕೆ ಅಡ್ಡಿ ಆರೋಪ: ದೇವರಾಜೇಗೌಡ ವಿರುದ್ಧದ ಪ್ರಕರಣ ರದ್ದು

Published : 4 ಸೆಪ್ಟೆಂಬರ್ 2024, 14:18 IST
Last Updated : 4 ಸೆಪ್ಟೆಂಬರ್ 2024, 14:18 IST
ಫಾಲೋ ಮಾಡಿ
Comments

ಬೆಂಗಳೂರು: ‘ಒಬ್ಬ ಜಿಲ್ಲಾಧಿಕಾರಿಗೆ ತಮ್ಮ ಛೇಂಬರ್‌ ಒಳಗೆ ಯಾರಾದರೂ ಬಂದು ವಾಗ್ವಾದ ನಡೆಸಿ ಹೋದಾಗ ಅವರು ಏನು ಮಾತನಾಡಿದ್ದಾರೆ ಎಂಬುದರ ದೂರು ಕೊಡಲು ನಾಲ್ಕು ದಿನಗಳ ಸಮಯ ಬೇಕೆ...’

‘ಹಾಸನ ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ ಆರೋಪದಡಿ ಹೈಕೋರ್ಟ್‌ ವಕೀಲ ಜಿ.ದೇವರಾಜೇಗೌಡ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಬುಧವಾರ ಪ್ರಾಸಿಕ್ಯೂಷನ್‌ ಅನ್ನು ಪ್ರಶ್ನಿಸಿದ ಬಗೆ ಇದು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌ ಅವರಿಗೆ, ‘ನಿಮ್ಮ ಅರ್ಜಿದಾರರು ಏಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಪತ್ರಿಕಾಗೋಷ್ಠಿ ನಡೆಸಿದರು’ ಎಂದು ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಅರುಣ್‌ ಶ್ಯಾಮ್‌, ‘ಪತ್ರಕರ್ತರು ಅರ್ಜಿದಾರರ ಬೈಟ್‌ ಪಡೆಯಲು ಹೊರಗೆ ಕಾದು ನಿಂತಿದ್ದರು. ಹೀಗಾಗಿ, ದೇವರಾಜೇಗೌಡ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದಾರೆ ಅಷ್ಟೇ’ ಎಂದರು.

ಆದರೆ, ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎನ್‌.ಜಗದೀಶ್‌ ಈ ವಿವರಣೆಯನ್ನು ಅಲ್ಲಗಳೆಯಲು ಮುಂದಾದರಾದರೂ, ನ್ಯಾಯಪೀಠ, ‘ಜಿಲ್ಲಾಧಿಕಾರಿ ತಮ್ಮ ದೂರಿನಲ್ಲಿ ತಕ್ಷಣವೇ ಏನು ನಡೆಯಿತು ಎಂಬುದನ್ನು ಹೇಳುವಲ್ಲಿ ವಿಫಲವಾಗಿದ್ದಾರೆ. ಇಂತಹ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿರುವುದು ಕಾನೂನಿನ ದುರ್ಬಳಕೆ’ ಎಂಬ ಅಭಿಪ್ರಾಯದೊಂದಿಗೆ ಪ್ರಕರಣವನ್ನು ರದ್ದುಗೊಳಿಸಿ ಆದೇಶಿಸಿತು.

ಪ್ರಕರಣವೇನು?: ‘ಜಿ.ದೇವರಾಜೇಗೌಡ ಅವರು ನನ್ನ ಅನುಮತಿ ಇಲ್ಲದೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನನ್ನನ್ನು ನಿಂದಿಸಿರುತ್ತಾರೆ. ಈ ಮೂಲಕ ಸಾರ್ವಜನಿಕರ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿರುತ್ತಾರೆ’ ಎಂದು ಆರೋಪಿಸಿ ಸತ್ಯಭಾಮ ಅವರು ಹಾಸನ ನಗರ ಪೊಲೀಸ್‌ ಠಾಣೆಯಲ್ಲಿ 2024ರ ಮಾರ್ಚ್ 19ರಂದು ದೂರು ದಾಖಲಿಸಿದ್ದರು.

‘ಚನ್ನರಾಯಪಟ್ಟಣ ಆದ್ಯಾಸ್‌ ಬಾರ್‌ ಅಂಡ್ ರೆಸ್ಟೊರೆಂಟ್‌ ಕಳೆದ ಆರು ತಿಂಗಳಿನಿಂದ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಬಕಾರಿ ಇಲಾಖೆ ಆಯುಕ್ತರು ತನಿಖೆ ನಡೆಸಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟಿದ್ದು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ವರದಿ ಮಾಡಲಾಗಿರುತ್ತದೆ. ಆದರೆ, ಜಿಲ್ಲಾಧಿಕಾರಿ ಸತ್ಯಭಾಮ, ಬಾರ್‌ ಅಂಡ್‌ ರೆಸ್ಟೊರೆಂಟ್‌ ವಿರುದ್ಧ ಕ್ರಮ ಕೈಗೊಳ್ಳುವ ಬದಲಿಗೆ, ಕಡತಗಳನ್ನು ತಮ್ಮ ಬಳಿಯೇ ಇರಿಸಿಕೊಂಡು ಅವ್ಯವಹಾರಗಳನ್ನು ಮಾಡುತ್ತಿರುವವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೇವರಾಜೇಗೌಡ ಅವರು 15ರ ಮಾರ್ಚ್‌ 2024ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುತ್ತಾರೆ’ ಎಂದು ಸತ್ಯಭಾಮ ತಮ್ಮ ದೂರಿನಲ್ಲಿ ವಿವರಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಭಾರತೀಯ ದಂಡ ಸಂಹಿತೆ–1860ರ ಕಲಂ (ಐಪಿಸಿ) 353ರ ಅಡಿಯಲ್ಲಿ ದೇವರಾಜೇಗೌಡ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದರು. ಇದನ್ನು ರದ್ದುಪಡಿಸವಂತೆ ಕೋರಿ ದೇವರಾಜೇಗೌಡ ಈ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT