ಬೆಂಗಳೂರು: ‘ನೀವು ಯಾರ ಹತ್ತಿರ ಮಾತನಾಡುತ್ತಿದ್ದೀರಾ? ನಾನು ಕೆಪಿಸಿಸಿ ಅಧ್ಯಕ್ಷ, ಈ ರಾಜ್ಯದ ಉಪ ಮುಖ್ಯಮಂತ್ರಿ. ನಿಮ್ಮ ಚಟಕ್ಕೆ ಪ್ರಶ್ನೆ ಕೇಳ್ತೀರಾ? ನೀವಿನ್ನೂ ಎಳಸು..’
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಕರ್ತರ ವಿರುದ್ಧ ಮಂಗಳವಾರ ಹರಿಹಾಯ್ದ ಪರಿ ಇದು.
‘ಬಿ.ಕೆ.ಹರಿಪ್ರಸಾದ್ ಬಣದಲ್ಲಿರುವ ನೀವೂ ಸೇರಿದಂತೆ ಎಲ್ಲ ಪ್ರಮುಖರೂ ಮೌನವಾಗುತ್ತಿದ್ದಂತೆ ಸಿದ್ದರಾಮಯ್ಯ ಬಣ ಡಿಸಿಎಂ ಕಾರ್ಡ್ ಪ್ಲೇ ಮಾಡುತ್ತಿದೆಯೇ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ‘ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುವಾಗ ಹೇಗೆ ಪ್ರಶ್ನೆ ಕೇಳಬೇಕು ಎಂಬ ಗಾಂಭೀರ್ಯ ಬೇಡವೇ? ನಿಮಗೆ ತಲೆಕೆಟ್ಟಿದೆಯಾ’ ಎಂದು ಅಸಮಾಧಾನ ಹೊರಹಾಕಿದರು.
‘ಮೊದಲು ಸಂವಿಧಾನ ಓದಿ. ನಾನೇ ಒಂದು ಪ್ರತಿ ಕಳುಹಿಸುತ್ತೇನೆ. ಯಾರ ಹೊಣೆಗಾರಿಕೆ ಏನು ಎನ್ನುವುದು ಅರ್ಥವಾಗುತ್ತದೆ. ಕೇಳುವ ಪ್ರಶ್ನೆಗೆ ಗಾಂಭೀರ್ಯ ಇರಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ಪ್ರಶ್ನೆ ಮಾಡುವಂತಹ ಪ್ರಶ್ನೆಗಳನ್ನು ಕೇಳಬೇಕು. ಅದು ಪತ್ರಿಕಾರಂಗದ ಧರ್ಮ‘ ಎಂದು ಬೋಧನೆ ಮಾಡಿದರು.
‘ಕಾಂಗ್ರೆಸ್‌ನಲ್ಲಿ ಯಾವುದೇ ಬಣರಾಜಕೀಯ ಇಲ್ಲ. ಕಾಂಗ್ರೆಸ್ ಪಕ್ಷವೇ ಒಂದು ಬಣ. ಹಾಗೆ ಬಣ ರಾಜಕೀಯ ಮಾಡುವುದಾಗಿದ್ದರೆ ಬಂಗಾರಪ್ಪ ಅವರ ಅವಧಿಯಲ್ಲೇ ಅವಕಾಶವಿತ್ತು. ಆದರೆ, ನಾನು ಎಂದೂ ಬಣ ರಾಜಕೀಯ ಮಾಡಿಲ್ಲ. ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಈಗಲೂ ಬಣ ರಾಜಕೀಯಕ್ಕೆ ನನ್ನ ಬೆಂಬಲವಿಲ್ಲ‘ ಎಂದು ಹೇಳಿದರು.
‘ಹರಿಪ್ರಸಾದ್ ಹೇಳಿಕೆಗೆ ಹೈಕಮಾಂಡ್ ಉತ್ತರ ಕೇಳಿದೆ. ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಪ್ರಸ್ತಾವ ಮಾಡಿದ ಸಚಿವ ಕೆ.ಎನ್.ರಾಜಣ್ಣ ಅವರಿಂದ ಮುಖ್ಯಮಂತ್ರಿ ಉತ್ತರ ಕೇಳಬೇಕು. ನಾನು ಯಾರಿಗೆ ಕೇಳಬೇಕೋ ಅವರಿಗೆ ಕೇಳುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.