ಮಂಡ್ಯ: ‘ಬೆಲೆ ಏರಿಕೆ ಮತ್ತು ಆರ್ಥಿಕ ಅಸಮಾನತೆ ವಿರುದ್ಧ ರಾಹುಲ್‌ಗಾಂಧಿಯವರು ‘ಭಾರತ್ ಜೋಡೊ’ ಪಾದಯಾತ್ರೆ ಮಾಡಿದರು. ನಾವು ಕಾವೇರಿ ನೀರಿಗಾಗಿ ಮತ್ತು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದೆವು. ಬಿಜೆಪಿ ಮತ್ತು ಜೆಡಿಎಸ್‌ನವರು, ಅವರೇ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿಮರ್ಶೆ ಮಾಡಿಕೊಳ್ಳಲು ಪಾದಯಾತ್ರೆ ನಡೆಸುತ್ತಿದ್ದಾರೆ. ನಿಮ್ಮದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಯಾತ್ರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟುವಾಗಿ ಟೀಕಿಸಿದರು.
ನಗರದ ಮೈಶುಗರ್ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಜನಾಂದೋಲನ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈತ್ರಿ ಪಕ್ಷಗಳು ಪಾದಯಾತ್ರೆ ಮಾಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ವಿರುದ್ಧ ಅಲ್ಲ. ಕಾಂಗ್ರೆಸ್ ಪಕ್ಷವನ್ನು 136 ಸ್ಥಾನಗಳಲ್ಲಿ ಗೆಲ್ಲಿಸಿದ ಬಡ ಜನರ ವಿರುದ್ಧ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಕುಮಾರಣ್ಣ ಮತ್ತು ಯಡಿಯೂರಪ್ಪನವರೇ ನಿಮ್ಮ ಹಣೆಯಲ್ಲೇ ಬರೆದಿಲ್ಲ. ಅಶೋಕ್ ನಿನ್ನ ಕೈಯಲ್ಲಿ ಧಮ್ ಇಲ್ಲ. ನಿಮ್ಮ ಪಾದಯಾತ್ರೆಗೂ ಧಮ್ ಇಲ್ಲ ಎಂದು ಛೇಡಿಸಿದರು.
ವಿಜಯೇಂದ್ರನ ಬಗ್ಗೆ ಬಿಚ್ಚಿ ಹೇಳಲಾ?
‘ಏಯ್ ವಿಜಯೇಂದ್ರ, ನಾವು ನಾಗರಾಜೇಗೌಡನಿಗೆ ಟಿಕೆಟ್ ಕೊಟ್ಟಿದ್ದರೆ ನೀನು ಅಸೆಂಬ್ಲಿಗೆ ಬರುತ್ತಿರಲಿಲ್ಲ. ನಿಮ್ಮ ತಂದೆ ಏಕೆ ಮೂರು ಬಾರಿ ರಾಜೀನಾಮೆ ಕೊಟ್ಟರು ಅಂತ ತಿಳಿಸು. ದುಬೈಗೆ ವಿಶೇಷ ವಿಮಾನದಲ್ಲಿ ಹೋಗಿ ಅಕೌಂಟ್ ತೆರೆದಲ್ಲ, ನಿನ್ನ ಮೇಲೆ ಯಾಕೆ ಇನ್ನೂ ತನಿಖೆ ನಡೆದಿಲ್ಲ. ನಿನ್ನ ಬಗ್ಗೆ ಬಿಚ್ಚಿ ಹೇಳಲಾ? ಈಗ ಬೇಡ ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ಎಲ್ಲವೂ ದಾಖಲಾಗಲಿ’ ಎಂದು ಹರಿಹಾಯ್ದರು.
‘ಮುಡಾದಲ್ಲಿ ಪಟ್ಟಿ ಇದೆಯಲ್ಲ ಅದರ ಬಗ್ಗೆ ಮಾತನಾಡು ಕುಮಾರಸ್ವಾಮಿ. ನಿಮ್ಮ ಸಹೋದರರ ಆಸ್ತಿ ಪಟ್ಟಿ ಬಿಚ್ಚಿಡು ಅಂದ್ರೆ ಇನ್ನೂ ಬಿಚ್ಚಿಟ್ಟಿಲ್ಲ. ಮಂಡ್ಯದ ಗಂಡು ಭೂಮಿಯಲ್ಲಿ ಗೆದ್ದಿದ್ದೀಯಾ. ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡು’ ಎಂದು ಸವಾಲು ಹಾಕಿದರು.
ಭೂತದ ಬಾಯಲ್ಲಿ ಭಗವದ್ಗೀತೆ:
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ‘ವಿಜಯೇಂದ್ರ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುವುದನ್ನು ಕೇಳಿದಾಗ, ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಯಿತು. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ವಿಜಯೇಂದ್ರ ಅವರು ಸುಲಿಗೆ ಮಾಡುತ್ತಿದ್ದಾರೆ ಅಂತ ಅವರ ಪಕ್ಷದ ಶಾಸಕರೇ ಮೋದಿಗೆ ದೂರು ಕೊಟ್ಟಿದ್ದರು. ‘ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್’ ಎಂದು ನಿಮ್ಮವರೇ ಜರಿದಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕರು ಇರಬೇಕು ಅಂದ್ರೆ ವಿಜಯೇಂದ್ರ ಮತ್ತು ಅವರ ಗ್ಯಾಂಗ್ ಅನ್ನು ದೂರವಿಡಿ ಅಂತ ನಿಮ್ಮ ಶಾಸಕರೇ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದಾರೆ’ ಎಂದು ತಿರುಗೇಟು ನೀಡಿದರು.
ಪೆನ್‌ಡ್ರೈವ್ ಹಂಚಿದ್ದು ವಿಜಯೇಂದ್ರ ಚೇಲಾಗಳು:
ಹಾಸನದಲ್ಲಿ ಒಂದು ಲಕ್ಷ ಪೆನ್ ಡ್ರೈವ್ ಹಂಚಿದ್ದು ವಿಜಯೇಂದ್ರ ಚೇಲಾಗಳು ಎಂಬ ಆರೋಪವಿದೆ. ನಿಮ್ಮ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿರುವ ಜತೆ ಪಾದಯಾತ್ರೆ ಮಾಡುತ್ತಿದ್ದೀರಾ ಕುಮಾರಸ್ವಾಮಿ. ಅವರ ಜೊತೆ ಹೇಗೆ ದೋಸ್ತಿ ಮಾಡಿದ್ದೀರಾ. ಮೈಸೂರಿನ ಮುಡಾದಲ್ಲಿ ಅಕ್ರಮ ನಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡದೇ, ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಮಾಡುತ್ತೀದ್ದೀರಿ. ಬಿಜೆಪಿ ಹೈಕಮಾಂಡ್ ಮನವೊಲಿಸಲು ಮಾಡುತ್ತೀದ್ದೀರಾ?, ಗವರ್ನರ್ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿ, ರಾಜ್ಯವನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಗವರ್ನರ್ ದೆಹಲಿ ಏಜೆಂಟ್:
ಕಂದಾಯ ಸಚಿವ ಕೃಷ್ಣ ಭೈರೇಗೌ ಮಾತನಾಡಿ, ‘ಕರ್ನಾಟಕದ ರಾಜ್ಯಪಾಲರು ಸಂವಿಧಾನದ ಮೇಲೆ ಇದ್ದಾರೋ, ಕೆಳಗೆ ಇದ್ದಾರೋ ಗೊತ್ತಾಗುತ್ತಿಲ್ಲ.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಡಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ಪಿತೂರಿಯಲ್ಲಿ ಗವರ್ನರ್ ಕೂಡ ಸೇರಿಕೊಂಡಿದ್ದಾರೆ. ದೆಹಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯೊಬ್ಬ ಅರ್ಜಿ ಕೊಟ್ಟಿದ್ದಕ್ಕೆ ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ದೋಸ್ತಿ ರಾಂಗ್ ಟರ್ನ್’ ವಿಡಿಯೊ ತುಣಕು ಪ್ರಸಾರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ದೋಸ್ತಿ ರಾಂಗ್ ಟರ್ನ್’ ಹೆಸರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪರಸ್ಪರ ಕಚ್ಚಾಟದ ಹಿಂದಿನ ವಿಡಿಯೊಗಳನ್ನು ‘ಜನಾಂದೋಲನ ಸಮಾವೇಶ’ದ ವೇದಿಕೆಯ ಪರದೆಯಲ್ಲಿ ಪ್ರಸಾರ ಮಾಡುವ ಮೂಲಕ ತಿರುಗೇಟು ನೀಡಿದರು.
‘ಅಧಿಕಾರ ದಾಹದಿಂದ ಕುಣಿದು ಕುಪ್ಪಳಿಸುತ್ತಿರುವ ಅಪ್ಪ–ಮಕ್ಕಳ ವಿರುದ್ಧ ನನ್ನ ಹೋರಾಟ’ ಎಂದು ಯಡಿಯೂರಪ್ಪ ಸದನದಲ್ಲಿ ನೀಡಿದ್ದ ಹೇಳಿಕೆ, ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆ, ‘ಅಪ್ಪ–ಮಕ್ಕಳು (ಯಡಿಯೂರಪ್ಪ ಮತ್ತು ವಿಜಯೇಂದ್ರ) ನಡೆಸಿರುವ ಹಗರಣಗಳ ಬಗ್ಗೆಯೂ ತನಿಖೆಯಾಗಲಿ’ ಎಂಬ ಯತ್ನಾಳ್ ಹೇಳಿಕೆ, ಅಶ್ವತ್ಥನಾರಾಯಣ್ ಬಗ್ಗೆ ಕುಮಾರಸ್ವಾಮಿ ಮಾಡಿದ ಭ್ರಷ್ಟಾಚಾರ ಆರೋಪ ಮುಂತಾದ ವಿಡಿಯೊ ತುಣುಕುಗಳನ್ನು ವೇದಿಕೆಯಲ್ಲಿದ್ದ ಪರದೆಯಲ್ಲಿ ಪ್ರಸಾರ ಮಾಡಲಾಯಿತು.
ಕುಮಾರಸ್ವಾಮಿ ದ್ವಂದ್ವ ಹೇಳಿಕೆಗಳ ಬಗ್ಗೆ ‘ಯೂ ಟರ್ನ್ ಕುಮಾರಣ್ಣ’ ಹೆಸರಿನಲ್ಲಿ ವಿಡಿಯೊ ತುಣಕು ಪ್ರದರ್ಶನಗೊಂಡವು. ನೆರೆದಿದ್ದ ಜನರು ‘ತಿರುಗೇಟು ಹೀಗೆ ಕೊಡಬೇಕು’ ಎಂದು ಶಿಳ್ಳೆ, ಚಪ್ಪಾಳೆ ಹಾಕಿ, ಹರ್ಷೋದ್ಗಾರ ಮಾಡಿದರು. ಡಿಕೆಶಿ ಹೊಸ ಅಸ್ತ್ರಕ್ಕೆ ವೇದಿಕೆಯಲ್ಲಿದ್ದ ಸಚಿವರು ತಲೆದೂಗಿದರು.
ನಿಮ್ಮದು ಮಾತ್ರ ಮರ್ಯಾದಸ್ಥ ಕುಟುಂಬವಾ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ‘ಪೆನ್ ಡ್ರೈವ್ ಹಂಚಿಕೆ ಮಾಡಿ ದೇವೇಗೌಡ ಕುಟುಂಬಕ್ಕೆ ವಿಷ ಇಟ್ಟ’ ಎಂದು ಕುಮಾರಣ್ಣನವರು ಪ್ರೀತಂಗೌಡ ಬಗ್ಗೆ ಹೇಳಿದ್ದಾರೆ. ‘ನೂರಾರು ಬಡ ಹೆಣ್ಣುಮಕ್ಕಳ ಕುಟುಂಬಕ್ಕೆ ನೀವು ಅಮೃತ ಎರೆದಿದ್ದೀರಾ? ಅವರ ಕುಟುಂಬಗಳನ್ನು ಬೀದಿಪಾಲು ಮಾಡಲು ನಿಮಗೆ ನಾಚಿಕೆ ಆಗಲಿಲ್ವಾ? ನಿಮಗೆ ರಾಜಕಾರಣಿ ಆಗಲು ಯಾವ ನೈತಿಕತೆ ಇದೆ ಅಂತ ಕೇಳುತ್ತೇನೆ. ನಿಮ್ಮ ಕುಟುಂಬದ್ದು ಮಾತ್ರ ಮರ್ಯಾದಸ್ಥ ಕುಟುಂಬವಾ? ಎಂದು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ತಾಂತ್ರಿಕ ದೋಷದಿಂದ ಜೂನ್ ಮತ್ತು ಜುಲೈ ತಿಂಗಳಲ್ಲಿ ಗೃಹಲಕ್ಷ್ಮಿ ಹಣ ಹಾಕಲು ಸಾಧ್ಯವಾಗಿರಲಿಲ್ಲ. ಇಂದಿನಿಂದ ನಿಮ್ಮ ಅಕೌಂಟ್‌ಗಳಿಗೆ ಹಣ ಹಾಕುತ್ತಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ– ಲಕ್ಷ್ಮಿ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.