ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಕೊಲೆ: ಮರಣದಂಡನೆ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ ಹೈಕೋರ್ಟ್

Published 22 ಜನವರಿ 2024, 16:32 IST
Last Updated 22 ಜನವರಿ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಜೋಡಿ ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆಯನ್ನು ಹೈಕೋರ್ಟ್‌, ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ.

‘ನಮ್ಮನ್ನು ದೋಷಿಯಾಗಿ ತೀರ್ಮಾನಿಸಿ ಬೆಳಗಾವಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ವಿಧಿಸಿರುವ ಮರಣ ದಂಡನೆ ಶಿಕ್ಷೆ ರದ್ದುಪಡಿಸಬೇಕು‘ ಎಂದು ಕೋರಿ ಬಾಬು, ಸಹೋದರ ನಾಗಪ್ಪ ಹಾಗೂ ಸಂಬಂಧಿ ಮುತ್ತಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

‘ಉದ್ದೇಶಪೂರ್ವಕವಲ್ಲದೆ ದಿಢೀರ್‌ ಪ್ರಚೋದನೆಗೆ ಒಳಗಾಗಿ ಕೊಲೆ ಮಾಡಲಾಗಿದೆ. ಆದ್ದರಿಂದ ನಮ್ಮನ್ನು ದೋಷಿಯಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕು. ಪ್ರಕರಣದಿಂದ ಖುಲಾಸೆಗೊಳಿಸಬೇಕು’ ಎಂಬ ಆರೋಪಿಗಳ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.

‘ಘಟನೆ ನಡೆಯುವ ದಿನಕ್ಕಿಂತಲೂ ಹಲವು ದಿನಗಳ ಮೊದಲೇ ಮೃತರ ನಡುವಿನ ಅಕ್ರಮ ಸಂಬಂಧದ ಬಗ್ಗೆ ಆರೋಪಿಗಳಿಗೆ ಮಾಹಿತಿ ಇತ್ತು. ಆರೋಪಿಗಳು ಮೃತರನ್ನು ಮನೆಯಿಂದ ಹೊರಗೆ ಎಳೆದುತಂದು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಬಾಬು ಮನೆಯಿಂದ ಕುಡುಗೋಲು ತಂದಿದ್ದ. ಇದರಿಂದ ಕೊಲೆ ದಿಢೀರ್‌ ಪ್ರಚೋದನೆಯಿಂದ ನಡೆದಿದೆ ಎಂದು ಹೇಳಲಾಗದು. ಆರೋಪಿಗಳು ಉದ್ದೇಶಪೂರ್ವಕವಾಗಿ ಹಾಗೂ ಪೂರ್ವಯೋಜನೆ ರೂಪಿಸಿ ಕೃತ್ಯ ಎಸಗಿದ್ದಾರೆ ಎಂಬುದು ಸಾಕ್ಷ್ಯಾಧಾರಗಳಿಂದ ದೃಢಪಡುತ್ತದೆ’ ಎಂದು ನ್ಯಾಯಪೀಠ ಹೇಳಿದೆ.

‘ಇದು ಅಪರೂಪದಲ್ಲೇ ಅಪರೂಪ ಎನ್ನುವಂತಹ ಪ್ರಕರಣವೇನೂ ಅಲ್ಲ. ಆದ್ದರಿಂದ, ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವುದು ಸೂಕ್ತವಲ್ಲ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅಪರಾಧಿಗಳಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಆದೇಶಿಸಿತು.

ಪ್ರಕರಣವೇನು?: ಬೆಳಗಾವಿಯ ಚಿಕ್ಕೋಡಿ ತಾಲ್ಲೂಕಿನ ನಿವಾಸಿ ಬಾಬು ಅವರ ಪತ್ನಿ ಸಂಗೀತಾ ಜೊತೆಗೆ ಬಸವರಾಜ್ ಅಕ್ರಮ ಸಂಬಂಧ ಹೊಂದಿದ್ದರು. ಇದೇ ಕಾರಣದಿಂದ 2012ರ ಅಕ್ಟೋಬರ್ 10ರಂದು ಆರೋಪಿಗಳು ಸಂಗೀತಾ ಮತ್ತು ಬಸವರಾಜು ಅವರನ್ನು ಕೊಲೆ ಮಾಡಿದ್ದರು. 2022ರ ಜೂನ್‌ 15ರಂದು ಮೂವರೂ ಆರೋಪಿಗಳನ್ನು ದೋಷಿಯಾಗಿ ತೀರ್ಮಾನಿಸಿದ್ದ ಬೆಳಗಾವಿ ಸೆಷನ್ಸ್ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶಿಸಿತ್ತು.

‘ಅಪರಾಧಿಗಳ ಮರಣ ದಂಡನೆಯನ್ನು ಕಾಯಂಗೊಳಿಸಬೇಕು’ ಎಂದು ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಕೂಡಾ ಕ್ರಿಮಿನಲ್ ರೆಫರ್ಡ್‌ ಪ್ರಕರಣವನ್ನು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT