ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕೊಳವೆ ಬಾವಿ ಮರು ಕೊರೆಯಲು ಆದೇಶ: ಡಿ.ಕೆ. ಶಿವಕುಮಾರ್‌

Published 20 ಫೆಬ್ರುವರಿ 2024, 16:45 IST
Last Updated 20 ಫೆಬ್ರುವರಿ 2024, 16:45 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಬತ್ತಿ ಹೋಗಿರುವ, ನೀರಿನ ಪ್ರಮಾಣ ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ಮರು ಕೊರೆಯಲು (ರೀ ಡ್ರಿಲ್ಲಿಂಗ್‌) ಆದೇಶಿಸಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧಾನಸಭೆಯಲ್ಲಿ ಬಿಜೆಪಿಯ ಬೈರತಿ ಬಸವರಾಜು, ಮುನಿರಾಜು, ಎಸ್‌.ಟಿ. ಸೋಮಶೇಖರ್‌ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಏಪ್ರಿಲ್‌-ಮೇ ವೇಳೆಗೆ ಕಾವೇರಿ 5ನೇ ಹಂತದ ಮೂಲಕ ನೀರು ಪೂರೈಕೆ ಆರಂಭಿಸಲಾಗುವುದು’ ಎಂದರು.

‘ಕಾವೇರಿ ನೀರನ್ನು ಫೆಬ್ರುವರಿಯಿಂದ ಜುಲೈವರೆಗೆ ಒಟ್ಟು 11.24 ಟಿಎಂಸಿ ಅಡಿ ನೀರನ್ನು ಜಲಾಶಯದಲ್ಲಿ ಶೇಖರಿಸಿ ಪೂರೈಸಲು ಕಾವೇರಿ ನೀರಾವರಿ ನಿಗಮವನ್ನು ಕೋರಲಾಗಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ 110 ಹಳ್ಳಿಗಳಿಗೆ ಕಾವೇರಿ ಐದನೇ ಹಂತದ ಕಾಮಗಾರಿ ಹಾಗೂ ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ಪೈಕಿ, ನೀರಿನ ಲಭ್ಯತೆಯ ಆಧಾರದಲ್ಲಿ 51 ಹಳ್ಳಿಗಳಿಗೆ ಈಗಾಗಲೇ ಪೂರೈಸಲಾಗುತ್ತಿದೆ. ಉಳಿದ ಎಲ್ಲ ಹಳ್ಳಿಗಳಿಗೂ ಏಪ್ರಿಲ್‌-ಮೇ ತಿಂಗಳಿನಿಂದ ಕಾವೇರಿ ನೀರು ಪೂರೈಸಲಾಗುವುದು’ ಎಂದರು.

‘ಬೆಂಗಳೂರಿಗೆ ಶೇ 40ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ, ಸುಮಾರು 11 ಸಾವಿರ ಕೊಳವೆ ಬಾವಿಗಳಲ್ಲಿ ಸಾಕಷ್ಟು ಅಂತರ್ಜಲ ಕುಸಿದಿದೆ. ಈ ಕೊಳವೆ ಬಾವಿಗಳ ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಕೇಂದ್ರ ಉಗ್ರಾಣದಲ್ಲಿ ಅಗತ್ಯ ಪ್ರಮಾಣದಲ್ಲಿ ಶೇಖರಿಸಲಾಗಿದೆ. ಬತ್ತಿ ಹೋಗಿರುವ ಹಾಗೂ ನೀರಿನ ಒರತೆ ಕಡಿಮೆಯಾಗಿರುವ ಕೊಳವೆ ಬಾವಿಗಳನ್ನು ರೀ ಡ್ರಿಲ್ಲಿಂಗ್‌ ಮಾಡಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೆಚ್ಚಿನ ನೀರಿನ ಬವಣೆ ಇರುವ ಪ್ರದೇಶಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸುವ ಉದ್ದೇಶವೂ ಇದೆ. ಜಲಮಂಡಳಿಯ ಒಟ್ಟು 68 ನೀರಿನ ಟ್ಯಾಂಕರ್‌ಗಳು ಸುಸ್ಥಿತಿಯಲ್ಲಿದ್ದು ನೀರಿನ ಸಮಸ್ಯೆ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲಾಗುವುದು’ ಎಂದು ವಿವರಿಸಿದರು.

‘ವರ್ಷದಿಂದ ವರ್ಷಕ್ಕೆ ನೀರು ಸರಬರಾಜುಗೆ ಸಂಬಂಧಿಸಿದ ಕಾಮಗಾರಿಗಳು, ನಿರ್ವಹಣೆ ವೆಚ್ಚ ಹೆಚ್ಚುತ್ತಲೇ ಇರುತ್ತದೆ. ಆದರೆ, 2003ರಿಂದ ರಾಜಕೀಯ ಕಾರಣಗಳಿಗೆ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಿಸಲು ಬಿಟ್ಟಿಲ್ಲ. ಇದರಿಂದ ಬೆಂಗಳೂರು ಜಲಮಂಡಳಿಯ ನೌಕರರಿಗೆ ಸಂಬಳ ನೀಡಲೂ ಹಣ ಇಲ್ಲದ ಸ್ಥಿತಿ ಬಂದಿದೆ’ ಎಂದು ಅವರು ಹೇಳಿದರು.

‘ಕೊಳವೆ ಬಾವಿಗಳ ರಿ ಡ್ರಿಲ್ಲಿಂಗ್‌ಗೆ ಅವಕಾಶ ನೀಡಿದರೆ ಸಾಲದು. ಅವುಗಳಲ್ಲಿ ನೀರು ಸಿಗದಿದ್ದಾಗ ಏನು ಮಾಡಬೇಕು. ಹೀಗಾಗಿ ತಕ್ಷಣ ಹೊಸ ಕೊಳವೆ ಬಾವಿ ಕೊರೆಯಲು ಕೂಡ ಅನುಮತಿ ನೀಡಬೇಕು. ಹೊಸದಾಗಿ ಕೊಳವೆ ಬಾವಿ ಕೊರೆಯಲು ಇರುವ ನಿರ್ಬಂಧವನ್ನು ತೆರವುಗೊಳಿಸಲು’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT