ಕಲಬುರಗಿ: ರಾಜ್ಯದ ಬಹುತೇಕ ತಾಲ್ಲೂಕುಗಳ ಬರಗಾಲ ಆವರಿಸಿರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ನೆರವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೆ ಈಗ ನೀಡಲಾಗುತ್ತಿರುವ 100 ದಿನಗಳ ಉದ್ಯೋಗದ ಬದಲಾಗಿ 150 ದಿನಗಳಿಗೆ ವಿಸ್ತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಆವರಿಸಿರುವುದರಿಂದ ಸಹಜವಾಗಿಯೇ ನರೇಗಾ ಯೋಜನೆಯಡಿ ನೀಡುತ್ತಿರುವ ಉದ್ಯೋಗದ ದಿನಗಳ ಪ್ರಮಾಣ ಹೆಚ್ಚಾಗಲಿದೆ. ಈ ಬಗ್ಗೆ ಚರ್ಚಿಸಲು ಇದೇ 20ರಂದು ದೆಹಲಿಗೆ ತೆರಳುತ್ತಿದ್ದು, ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡುತ್ತೇವೆ. ಅದಾದ ಬಳಿಕ ಒಬ್ಬರಿಗೆ ಹೆಚ್ಚುವರಿಯಾಗಿ 50 ದಿನಗಳ ಉದ್ಯೋಗ ನೀಡಲು ಅಧಿಸೂಚನೆ ಹೊರಬೀಳಲಿದೆ’ ಎಂದರು.
ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಹರಿಪ್ರಸಾದ್ ಎಲ್ಲೂ ಕೂಡ ಸಿದ್ದರಾಮಯ್ಯ ಅವರ ವಿರುದ್ದ ಮಾತಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚರ್ಚೆ ಆಗಿಲ್ಲ
ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಬಗ್ಗೆ ಸಚಿವ ಕೆ.ಎನ್. ರಾಜಣ್ಣ ಅವರು ಹೇಳಿದ್ದಾರೆ. ಅವರಿಗೆ ತಮ್ಮ ಅಭಿಪ್ರಾಯ ಹೇಳುವುದಕ್ಕೆ ಮುಕ್ತ ಅವಕಾಶವಿದೆ. ಆದರೆ, ಹೈಕಮಾಂಡ್ ಮಟ್ಟದಲ್ಲಿ ಇಂತಹ ಚರ್ಚೆ ಆಗಿಲ್ಲ ಎಂದರು.
ಬಿಜೆಪಿಯವರ ಬಳಿ ಸುಳ್ಳಿನ ಫ್ಯಾಕ್ಟರಿ
ಬಿಜೆಪಿಯವರ ಬಳಿ ಸುಳ್ಳಿನ ಫ್ಯಾಕ್ಟರಿ ಇದೆ. ಆದ್ದರಿಂದಲೇ ಅವರು ರಾಜ್ಯದಲ್ಲಿ ಸುಳ್ಳು ಸುದ್ದಿ ತಡೆಯಲು ಆರಂಭಿಸುತ್ತಿರುವ ಫ್ಯಾಕ್ಟ್ ಚೆಕ್ ಘಟಕವನ್ನು ವಿರೋಧಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು.
ಇದರಿಂದ ವಾಕ್ ಸ್ವಾತಂತ್ರ್ಯ ಹೋಗುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರಿಗೆ ಸಾಮಾನ್ಯ ಜ್ಞಾನ ಇಲ್ಲ ಅನಿಸುತ್ತದೆ. ಈ ಕಾಯ್ದೆಯನ್ನು ನಾವು ಬದಲಾಯಿಸುತ್ತಿಲ್ಲ. ಮಾರ್ಪಾಡು ಮಾಡುತ್ತಿದ್ದೇವೆ. ಸುಳ್ಳು ಸುದ್ದಿಗೆ ಕಡಿವಾಣ ಹಾಕುವುದರ ಬಗ್ಗೆ ಸಾರ್ವಜನಿಕರು, ಮಾಧ್ಯಮದವರು ಸ್ವಾಗತಿಸುತ್ತಿದ್ದಾರೆ. ಬಿಜೆಪಿಯವರು ತಮ್ಮವರು ಜೈಲಿಗೆ ಹೋಗಬಹುದು ಎಂಬ ಆತಂಕದಿಂದ ವಿರೋಧಿಸುತ್ತಿದ್ದಾರೆ ಎಂದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಆರ್‌ಎಸ್‌ಎಸ್ ಕಚೇರಿ ತೆರೆಯುವುದಕ್ಕೆ ಬಿಡುವುದಿಲ್ಲ. ಅಲ್ಲಿ ಅಧ್ಯಯನಕ್ಕಿಂತ ಸಂಘ ಪರಿವಾರದ ಚಟುವಟಿಕೆಗಳೇ ಹೆಚ್ಚು ನಡೆದಿವೆ. ಶೀಘ್ರವೇ ಅಲ್ಲಿಗೆ ಭೇಟಿ ನೀಡುತ್ತೇನೆ. ಒಂದು ಬಾರಿ ಹೇಳಿದ್ದೆ. ಆದರೂ, ತಿದ್ದಿಕೊಂಡಿಲ್ಲ. ಇನ್ನೊಂದು ಬಾರಿ ತಿಳಿ ಹೇಳುತ್ತೇನೆ ಎಂದು ಪ್ರಿಯಾಂಕ್ ತಿಳಿಸಿದರು.
‘ಭಾಸ್ಕರರಾವ್ ಸಂವಿಧಾನ ಓದಿಕೊಳ್ಳಲಿ’
ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗುದಾರ ಹಾಕಲು ಹೊರಟಿರುವ ಪ್ರಿಯಾಂಕ್ ಖರ್ಗೆ ಅವರು ಗೃಹಸಚಿವ ಸ್ಥಾನವನ್ನು ಹೈಜಾಕ್ ಮಾಡಿದ್ದಾರೆ ಎಂಬ ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರರಾವ್ ಅವರಿಗೆ ತಿರುಗೇಟು ನೀಡಿದ ಪ್ರಿಯಾಂಕ್, ಭಾಸ್ಕರ್ ರಾವ್ ಅವರು ಮೊದಲು ಸಂವಿಧಾನ ಹಾಗೂ ಐಪಿಸಿ ಸೆಕ್ಷನ್‌ಗಳನ್ನು ಓದಿಕೊಳ್ಳಲಿ’ ಎಂದರು.
‘ಅವರು ಮೊದಲು ಟಿಕೆಟ್‌ಗಾಗಿ ಕಾಂಗ್ರೆಸ್ ಹತ್ತಿರ ಬಂದಿದ್ದರು. ಆ ಮೇಲೆ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು. ನಂತರ ಬಿಜೆಪಿ ಸೇರಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.