ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ 3 ತಿಂಗಳು ಬರಗಾಲ ಎದುರಿಸಲು ಸಮರೋಪಾದಿ ಸಿದ್ದತೆ: ಸಿದ್ದರಾಮಯ್ಯ

Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬರಪರಿಸ್ಥಿತಿ ಗಂಭೀರವಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ತೀವ್ರವಾಗಬಹುದು. ಹೀಗಾಗಿ, ಕುಡಿಯುವ ನೀರಿನ ಸಮಸ್ಯೆಯೂ ಸೇರಿ ಯಾವುದೇ ಸಂಕಷ್ಟದ  ಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ಬರದ ಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುವುದಕ್ಕೆ ಸಂಬಂಧಿಸಿ ಮಂಗಳವಾರ ವಿಡಿಯೊ ಸಂವಾದ ನಡೆಸಿ, ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಬರಪೀಡಿತವೆಂದು ಘೋಷಿಸಿದ 223 ತಾಲ್ಲೂಕುಗಳ ಪೈಕಿ, 194 ತಾಲ್ಲೂಕುಗಳು ತೀವ್ರ ಬರ ಎದುರಿಸುತ್ತಿವೆ. ಮುಂದಿನ ಮೂರು ತಿಂಗಳಲ್ಲಿ ಸುಮಾರು 7,408 ಹಳ್ಳಿಗಳು ಹಾಗೂ 1,115 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಬಹುದು ಎಂದು ಸರ್ಕಾರ ಅಂದಾಜಿಸಿದೆ. ಅಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಬಾರದು. ಎಷ್ಟೇ ಹಣ ಖರ್ಚಾದರೂ ನೀಡಲಾಗುವುದು’ ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ತಿಳಿಸಿದರು. 

ವಿಡಿಯೊ ಸಂವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮುಖ್ಯಮಂತ್ರಿ, ‘ರಾಜ್ಯದಲ್ಲಿ ಮುಂದಿನ ಮೂರು ತಿಂಗಳುಗಳಲ್ಲಿ ಎದುರಾಗಬಹುದಾದ ತೀವ್ರ ಬರಗಾಲವನ್ನು ನಿಭಾಯಿಸಲು ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ. ಸಹಾಯವಾಣಿ ಮತ್ತು ನಿಯಂತ್ರಣ ಕೊಠಡಿ ಸ್ಥಾಪಿಸಲು ಸೂಚಿಸಲಾಗಿದೆ. ಬರ ಪರಿಹಾರಕ್ಕೆ ಅನುದಾನದ ಕೊರತೆ ಇಲ್ಲ’ ಎಂದರು.

‘ಕುಡಿಯುವ ನೀರಿಗೆ ತೊಂದರೆ ಆಗಬಹುದೆಂದು ಅಂದಾಜಿಸಿರುವ ಕಡೆಗಳಲ್ಲಿ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಲಾಗಿದೆ. ಖಾಸಗಿ ಕೊಳವೆಬಾವಿಗಳ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗಿದೆ. ವಾಚಕರ ವಾಣಿ, ಸಾಮಾಜಿಕ ಜಾಲತಾಣಗಳಲ್ಲಿನ ವರದಿಗಳನ್ನು ಕಟ್ಟುನಿಟ್ಟಾಗಿ ಗಮನಿಸಿ, ಪರಿಹಾರ ನೀಡುವಂತೆಯೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಅನಿವಾರ್ಯ ಆದಾಗ ಮಾತ್ರ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಈ ಉದ್ದೇಶಕ್ಕೆ ಈಗಾಗಲೇ ₹140 ಕೋಟಿ ಅನುದಾನ ಕೊಡಲಾಗಿದೆ. ಹೆಚ್ಚುವರಿಯಾಗಿ ₹70 ಕೋಟಿ ಬಿಡುಗಡೆ ಮಾಡಲಾಗುವುದು. ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ (ವೈಯಕ್ತಿಕ ಠೇವಣಿ) ಖಾತೆಯಲ್ಲಿ ₹854 ಕೋಟಿ ಲಭ್ಯವಿದೆ. ಮೇವಿಗೆ ಈವರೆಗೆ ಸಮಸ್ಯೆ ಇಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮೇವು ಬೆಳೆಯಲು ಪಶುಸಂಗೋಪನೆ ಇಲಾಖೆಗೆ ₹40 ಕೋಟಿ ಒದಗಿಸಲಾಗಿದೆ’ ಎಂದರು.

‘ಪ್ರತಿ ಜಿಲ್ಲೆಯಲ್ಲಿ ಕಾರ್ಯಪಡೆಯ ಸಭೆ ಕರೆದು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ. ತಾಲ್ಲೂಕು ಮಟ್ಟದ ಕಾರ್ಯಪಡೆ ಈವರೆಗೆ 646 ಸಭೆಗಳನ್ನು ನಡೆಸಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ 307 ಸಭೆಗಳಾಗಿವೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮ, ಜಿಲ್ಲೆಗಳಲ್ಲಿ ಮೊದಲೇ ಯೋಜನೆ ತಯಾರಿಸಬೇಕು. ಸದ್ಯ 98 ತಾಲ್ಲೂಕುಗಳ 412 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 175 ಗ್ರಾಮಗಳಿಗೆ 596 ಖಾಸಗಿ ಕೊಳವೆಬಾವಿಗಳಿಂದ 204 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ವಿವರಿಸಿದರು.

‘ಕೆಲವೆಡೆ ಸರ್ಕಾರದ ಕೊಳವೆಬಾವಿಗಳನ್ನು ಇನ್ನಷ್ಟು ಆಳ ಮಾಡುವುದು, ಫ್ಲ್ಯಾಶಿಂಗ್ ಮಾಡುವುದು, ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯುವುದರ ಜತೆಗೆ, ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮವಹಿಸಲಾಗಿದೆ. ಟ್ಯಾಂಕರ್ ಮಾಲೀಕರು ಪರಿಸ್ಥಿತಿ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಲು ಕ್ರಮ ವಹಿಸಲಾಗಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೂ ನೋಂದಣಿ ಮಾಡಿಸಿಕೊಂಡು ದರಗಳನ್ನು ನಿಯಂತ್ರಿಸಲಾಗುವುದು. ಬೆಂಗಳೂರಿನಲ್ಲಿ ಬಿಬಿಎಂಪಿ 120 ಹಾಗೂ ಜಲಮಂಡಳಿ 232 ಟ್ಯಾಂಕರ್‌ಗಳ ಮೂಲಕ 96 ವಾರ್ಡುಗಳಲ್ಲಿ ನೀರು ಸರಬರಾಜು ಆಗುತ್ತಿದೆ’ ಎಂದರು.

‘ನಾರಾಯಣಪುರ, ಆಲಮಟ್ಟಿ, ಮಲಪ್ರಭಾ, ಘಟಪ್ರಭಾ, ಕಾವೇರಿ ಕಣಿವೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ತುಂಗಭದ್ರಾ ಜಲಾಶಯದಲ್ಲಿ 1.78 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದ್ದು ಜೂನ್ ಅಂತ್ಯದವರೆಗೆ ಅದರಲ್ಲಿಯೇ ನಿರ್ವಹಿಸಬೇಕಿದೆ. ಕುಡಿಯುವ ನೀರಿಗೆ ತುಂಗಭದ್ರಾ ನದಿ ಅವಲಂಬಿತರಾಗಿರುವವರಿಗೆ ನೀರಿನ ಸಮಸ್ಯೆ ಆಗಬಹುದು. ವಾರಕ್ಕೊಮ್ಮೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಬೇಕೆಂದು ಸೂಚಿಸಿದ್ದೇನೆ’ ಎಂದರು.

ಗುಳೇ ಹೋಗುತ್ತಿಲ್ಲ: ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ‘ಗ್ಯಾರಂಟಿ’ ಯೋಜನೆಗಳಿಂದಾಗಿ 1.20 ಕೋಟಿ ಕುಟುಂಬಗಳ 4.50 ಕೋಟಿ ಜನರಿಗೆ ಲಾಭ ಸಿಗುತ್ತಿದೆ. ಪ್ರತಿ ಕುಟುಂಬಕ್ಕೆ ₹4 ಸಾವಿರದಿಂದ ₹5 ಸಾವಿರ ದೊರೆಯುತ್ತಿದೆ. ಹೀಗಾಗಿ ಜನ ಗುಳೇ ಹೋಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT