ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ: ಕೇಂದ್ರ

ಜುಲೈನಲ್ಲಿ ಬರ ಪರಿಹಾರ ಅರ್ಜಿ ವಿಚಾರಣೆ: ಸುಪ್ರೀಂ
Published 6 ಮೇ 2024, 15:40 IST
Last Updated 6 ಮೇ 2024, 15:40 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್‌) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯ (ಎನ್‌ಡಿಆರ್‌ಎಫ್‌) ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ  ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಅತ್ಯಲ್ಪ ಎಂದು ಆರೋಪಿಸಿ ಕರ್ನಾಟಕ ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಸಂದೀ‍ಪ್‌ ಮೆಹ್ತಾ ಅವರ ಪೀಠಕ್ಕೆ ಕೇಂದ್ರ ಸರ್ಕಾರ ಈ ಉತ್ತರ ನೀಡಿದೆ. 

ಎನ್‌ಡಿಆರ್‌ಎಫ್‌ ಮಾನದಂಡಗಳು ಮತ್ತು ಐಎಂಸಿಟಿಯ ವರದಿಯ ಆಧಾರದಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪ ಸಮಿತಿ ಶಿಫಾರಸಿನ ಪ್ರಕಾರ ಕೇಂದ್ರ ಸರ್ಕಾರವು ಹಣಕಾಸಿನ ನೆರವು ಬಿಡುಗಡೆ ಮಾಡಿದೆ ಎಂದು ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಅವರು ನ್ಯಾಯಪೀಠಕ್ಕೆ ತಿಳಿಸಿದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಮಾರ್ಗಸೂಚಿ ಹಾಗೂ ನಿಯಮಗಳ ಅನ್ವಯ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು. 

ಕರ್ನಾಟಕ ಸರ್ಕಾರವು ಅಗತ್ಯ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಒದಗಿಸಿಲ್ಲ ಎಂದು ಕೇಂದ್ರವು ದೂರಿತು. ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡುವುದಾಗಿ ನ್ಯಾಯಪೀಠವು ರಾಜ್ಯಕ್ಕೆ ತಿಳಿಸಿತು. 

ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಕೇಂದ್ರ ನೀಡಿರುವ ಉತ್ತರದಲ್ಲಿ ಕೆಲವು ದೋಷಗಳಿವೆ. ಕೆಲವು ತಪ್ಪು ದತ್ತಾಂಶಗಳಿವೆ. ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಮಾಣಪತ್ರ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು’ ಎಂದರು. 

ಸುಪ್ರೀಂ ಕೋರ್ಟ್‌ನ ಬೇಸಿಗೆ ರಜೆಯ ನಂತರ (ಜುಲೈನಲ್ಲಿ) ಕರ್ನಾಟಕದ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ತಿಳಿಸಿತು.

ಎನ್‌ಡಿಆರ್‌ಎಫ್‌ ನಿಯಮಾವಳಿಗಳ ಪ್ರಕಾರ ₹18,171 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರವು ₹3,498 ಕೋಟಿಗಷ್ಟೇ ಅನುಮೋದನೆ ನೀಡಿ ₹3,454 ಕೋಟಿ ಬಿಡುಗಡೆಗೊಳಿಸಿದೆ. ಇದು ತೀರಾ ಕಡಿಮೆ’ ಎಂದು ಆರೋಪಿಸಿ ರಾಜ್ಯವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ‘ಕೇಂದ್ರ ಸರ್ಕಾರ ನೇಮಿಸಿದ ಅಂತರ್ ಸಚಿವಾಲಯದ ತಜ್ಞರ ಸಮಿತಿಯು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಆ ವರದಿಯ ಆಧಾರದಲ್ಲಿ ಸಚಿವರ ಸಮಿತಿಯು ಪರಿಹಾರ ಘೋಷಣೆ ಮಾಡಿದೆ’ ಎಂದು ವೆಂಕಟರಮಣಿ ಅವರು ನ್ಯಾಯಪೀಠಕ್ಕೆ ಕಳೆದ ಸೋಮವಾರ ತಿಳಿಸಿದ್ದರು. ಈ ವರದಿಯ ಪ್ರತಿಯನ್ನು ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT