ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಬ್ಲ್ಯುಎಸ್‌ ಶೇ 10 ಹಂಚಿಕೆ?

ಪ್ರತ್ಯೇಕ ‘ಪ್ರವರ್ಗ’ ರಚಿಸಿ ಪಂಚಮಸಾಲಿಗಳಿಗೆ ಶೇ 4, ಒಕ್ಕಲಿಗರಿಗೆ ಶೇ 3 ಮೀಸಲು ಕಲ್ಪಿಸಲು ಚಿಂತನೆ
Last Updated 26 ಡಿಸೆಂಬರ್ 2022, 2:24 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ನೀಡಿರುವ ಶೇಕಡ 10ರಷ್ಟು ಮೀಸಲಾತಿಯಲ್ಲಿ
ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳಿಗೂ ಪಾಲು ನೀಡುವುದರ ಜೊತೆಗೆ ‘ಪ್ರವರ್ಗಗಳ’ ಮರುವಿಂಗಡನೆಯನ್ನೂ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ (ಡಿ. 26) ಬೆಳಿಗ್ಗೆ ತುರ್ತು ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೀಸಲಾತಿ ವಿಚಾರದ ಜೊತೆಗೆ ಕೆಲವು ಮಸೂದೆಗಳನ್ನು ಮಂಡಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ರಾಜ್ಯಗಳಲ್ಲಿ ಇಡಬ್ಲ್ಯುಎಸ್ ಕೋಟಾ ಅಡಿಯಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ಪ್ರಾದೇಶಿಕ ಶಾಸಕಾಂಗ ಗಳೊಂದಿಗೆ ರಾಜ್ಯಗಳಿಗೆ ಬಿಡಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಈಗಾಗಲೇ ತಿಳಿಸಿದೆ.

ಕೇಂದ್ರ ಸರ್ಕಾರದ ಎಸ್‌ಸಿ, ಎಸ್‌ಟಿ, ಇತರ ಹಿಂದುಳಿದ ಜಾತಿ (ಒಬಿಸಿ) ಪಟ್ಟಿಯಲ್ಲಿ ಇಲ್ಲದ ಉಳಿದ ಎಲ್ಲ ಜಾತಿಯ ಬಡವರು ಇಡಬ್ಲುಎಸ್ ಮೀಸಲಾತಿ ಪಡೆಯಲು ಅರ್ಹರು. ಇಡಬ್ಲ್ಯುಎಸ್‌ ವ್ಯಾಪ್ತಿಗೆ ಒಕ್ಕಲಿಗರು ಮತ್ತು ಲಿಂಗಾಯತ ಪಂಚಮಸಾಲಿ ಸಮುದಾಯಗಳನ್ನು ಸೇರಿಸಿ ಮೀಸಲಾತಿ ಹೆಚ್ಚಳದ ಬೇಡಿಕೆ ಈಡೇರಿಸುವ ಯೋಚನೆ ಸರ್ಕಾರ ಮುಂದಿದೆ.

ಈ ಹಿನ್ನೆಲೆಯಲ್ಲಿ ಶೇ 10ರಷ್ಟು ಮೀಸಲಾತಿಯನ್ನು ವಿಭಜಿಸಿ ಶೇ 4 ರಷ್ಟನ್ನು ಲಿಂಗಾಯತ ಪಂಚಮ ಸಾಲಿ ಸಮುದಾಯಕ್ಕೆ, ಶೇ 3ರಷ್ಟನ್ನು ಒಕ್ಕಲಿಗ ಸಮು ದಾಯಕ್ಕೆ ಮತ್ತು ಉಳಿದ ಶೇ 3ರಷ್ಟನ್ನು ಕೇಂದ್ರದ ಇತರ ಹಿಂದುಳಿದ ವರ್ಗ ಗಳ (ಒಬಿಸಿ) ಜಾತಿ ಪಟ್ಟಿ ಯಲ್ಲಿ ಇಲ್ಲದ ಆರ್ಥಿಕವಾಗಿ ದುರ್ಬಲ ವರ್ಗದ ಸಮುದಾಯಗಳಿಗೆ (ಬ್ರಾಹ್ಮಣ, ಜೈನ, ಆರ್ಯವೈಶ್ಯ, ನಗರ್ತ, ಮೊದಲಿಯಾರ್) ಮೀಸಲಿಡಲು ಚರ್ಚೆ ನಡೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಸದ್ಯ ಪರಿಶಿಷ್ಟ ಜಾತಿ (ಹೊಲೆಯ, ಮಾದಿಗ, ಬೋವಿ, ಲಂಬಾಣಿ, ಕೊರಚ, ಕೊರಮ ಸೇರಿ 101 ಜಾತಿಗಳು), ಪರಿಶಿಷ್ಟ ಪಂಗಡ (ವಾಲ್ಮೀಕಿ, ನಾಯಕ, ಸೋಲಿಗರು, ಕುರುಮಾನ್‌ ಸೇರಿದಂತೆ 50 ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 1 (ಗಂಗಾಮತಸ್ಥ, ಉಪ್ಪಾರ, ಗೊಲ್ಲ ಸೇರಿ 95 ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 2ಎ (ಕುರುಬ, ಈಡಿಗ, ವಿಶ್ವಕರ್ಮ, ಕುಂಬಾರ, ಸವಿತಾ ಸಮಾಜ, ದೇವಾಂಗ, ನೇಕಾರ, ಮಡಿವಾಳ ಸೇರಿ 102 ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 2ಬಿ (ಮುಸ್ಲಿಂ ಮತ್ತು ಅದರಲ್ಲಿರುವ ಉಪ ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 3ಎ (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12 ಜಾತಿಗಳು), ಹಿಂದುಳಿದ ವರ್ಗಗಳ ಪ್ರವರ್ಗ 3ಬಿ (ವೀರಶೈವ ಮತ್ತು ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳು) ಎಂಬ ಪ್ರವರ್ಗಗಳಿವೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸಿನ ಅನ್ವಯ, ಈ ಪ್ರವರ್ಗಗಳ ಪೈಕಿ, 3ಎ ಮತ್ತು 3ಬಿ ಪ್ರವರ್ಗಗಳನ್ನು ತೆಗೆದುಹಾಕಿ, ಅದರ ಬದಲು ಪ್ರವರ್ಗ 2ಸಿ ಮತ್ತು 2ಡಿ ರಚಿಸಿ, ಇಡಬ್ಲ್ಯುಎಸ್‌ ಮೀಸಲಾತಿಯನ್ನು ಮರು ಹಂಚಿಕೆ ಮಾಡುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಬೇಡಿಕೆ ಇಟ್ಟಿರುವ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳನ್ನು ತೃಪ್ತಿಪಡಿಸಲು ಚಿಂತನೆ ನಡೆದಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ ‘ಪ್ರವರ್ಗ–3ಎ’ಗೆ ನೀಡ ಲಾಗಿರುವ ಮೀಸಲಾತಿ ಪ್ರಮಾಣವನ್ನು ಶೇ 4 ರಿಂದ ಶೇ 12ಕ್ಕೆ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಪಟ್ಟು ಹಿಡಿದಿದೆ.

ಈ ಪ್ರವರ್ಗವನ್ನು ‘ಪ್ರವರ್ಗ 2ಸಿ’ ಎಂದು ಬದಲಿಸಿ, ಇಡಬ್ಲ್ಯುಎಸ್‌ ಮೀಸಲಾತಿಯಿಂದ ಶೇ 3ರಷ್ಟನ್ನು ಮರುಹಂಚಿಕೆ ಮಾಡಿ, ಈ ಹೊಸ ಪ್ರವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ 7ಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ. ‘ಪ್ರವರ್ಗ–3ಎ’ಯಲ್ಲಿರುವ ಎಲ್ಲ ಜಾತಿಗಳು ಹೊಸ ಪ್ರವರ್ಗದ ವ್ಯಾಪ್ತಿಗೆ ಒಳಪಡಲಿವೆ.

‘ಪ್ರವರ್ಗ–3ಬಿ’ಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯವು ತಮ್ಮನ್ನು ‘ಪ್ರವರ್ಗ 2ಎ’ಗೆ ಸೇರಿಸಬೇಕೆಂದು ಪಟ್ಟು ಹಿಡಿದಿದೆ. ಪ್ರವರ್ಗ 3ಬಿಗೆ ಸದ್ಯ ಶೇ 5ರಷ್ಟು ಮೀಸಲಾತಿಯಿದೆ. ಪ್ರಬಲ ಸಮುದಾಯವಾದ ಲಿಂಗಾಯತ ಪಂಚಮಸಾಲಿಗಳ ಈ ಬೇಡಿಕೆಗೆ ಪ್ರವರ್ಗ 2ಎಯಲ್ಲಿರುವ ಇತರ ಹಿಂದುಳಿದ ಸಮುದಾಯವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಪರಿಹಾರವೆಂಬಂತೆ, ‘ಪ್ರವರ್ಗ–3ಬಿ’ಯನ್ನೇ ತೆಗೆದುಹಾಕಿ, ಅದರ ಬದಲು ‘ಪ್ರವರ್ಗ 2ಡಿ’ ರಚಿಸಿ, ಇಡಬ್ಲ್ಯುಎಸ್‌ ಮೀಸಲಾತಿಯಿಂದ ಶೇ 4ರಷ್ಟನ್ನು ಮರುಹಂಚಿಕೆ ಮಾಡಿ, ಹೊಸ ಪ್ರವರ್ಗ ಮಾಡಿದರೆ ಒಟ್ಟು ಮೀಸಲಾತಿ ಪ್ರಮಾಣ ಶೇ 9ರಷ್ಟಾಗಲಿದೆ. ಪ್ರವರ್ಗ 3ಬಿಯಲ್ಲಿರುವ ಎಲ್ಲ ಜಾತಿಗಳು ಹೊಸ ಪ್ರವರ್ಗದ ವ್ಯಾಪ್ತಿಗೆ ಒಳಪಡಲಿವೆ.

ರಾಜ್ಯದ 16 ಜಿಲ್ಲೆಗಳಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಸ್ಥಿತಿಗತಿ ಬಗ್ಗೆ ಈಗಾಗಲೇ ಅಧ್ಯಯನ ನಡೆಸಿರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ಆ ವರದಿಯಲ್ಲೂ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ಪ್ರಮಾಣ ಹಂಚಿಕೆ ಬಗ್ಗೆ ಶಿಫಾರಸು ಮಾಡಲಾಗಿದೆ ಎಂದೂ ಸರ್ಕಾರ ಮೂಲಗಳು ತಿಳಿಸಿವೆ.

‘ಇಡಬ್ಲ್ಯುಎಸ್‌ ಜಾರಿ ಬಳಿಕ ಮರು ವಿಂಗಡನೆ’
‘ಪ್ರವರ್ಗ 2ಎ ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಧ್ಯಂತರ ವರದಿಯಲ್ಲಿ ಶಿಫಾರಸು ಮಾಡಿದೆ. ಪ್ರತಿ 10 ವರ್ಷಗಳಿಗೊಮ್ಮೆ ಪ್ರವರ್ಗಗಳನ್ನು ಮರು ವಿಂಗಡನೆ ಮಾಡಬೇಕಿದೆ. ಆದರೆ, 2002ರ ಬಳಿಕ ಮರು ವಿಂಗಡನೆಯೇ ಆಗಿಲ್ಲ. ಇಡಬ್ಲ್ಯುಎಸ್‌ ಜಾರಿಯಾದ ಬಳಿಕ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಿ ಪ್ರವರ್ಗಗಳ ವಿಂಗಡನೆ, ಹೊಸ ಪ್ರವರ್ಗಗಳ ರಚನೆಗೆ ಅವಕಾಶವಿದೆ’ ಎಂದೂ ಸರ್ಕಾರದ ಮೂಲಗಳು ತಿಳಿಸಿವೆ.

‘ಶೇ 32ರಷ್ಟು ಮೀಸಲಾತಿ ಅವೈಜ್ಞಾನಿಕ’
ಬೆಂಗಳೂರು:
‘ಸದ್ಯ ಎಲ್ಲ ಹಿಂದುಳಿದ ವರ್ಗಗಳಿಗೆ ಒಟ್ಟು ಶೇ 32ರಷ್ಟು ಮೀಸಲಾತಿಯಿದ್ದು, ಇದು ಅವೈಜ್ಞಾನಿಕವಾಗಿದೆ. ಅದನ್ನು ಪುನರ್‌ ಪರಿಶೀಲಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕು’ ಎಂದು ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಒತ್ತಾಯಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಿರುವ ವೇದಿಕೆ, ‘ಅತಿ ಹಿಂದುಳಿದ ಎಲ್ಲ ಜಾತಿಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದೆ.

‘ಒಟ್ಟು ಶೇ 32 ಮೀಸಲಾತಿ ಯಾವುದೇ ಮಾನದಂಡಗಳನ್ನು ಅನುಸರಿಸದೆ, ಯಾವುದೇ ಆಯೋಗದ ಶಿಫಾರಸು ಇಲ್ಲದೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ಹಿಂದಿನ ಸರ್ಕಾರಗಳು ನೀಡಿವೆ. ಆಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡದಿರುವುದರಿಂದ ಶೇ 90ರಷ್ಟು ಜಾತಿಗಳು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಯಾವುದೇ ಸವಲತ್ತು ಸಿಗದೆ ವಂಚಿತವಾಗಿವೆ’ ಎಂದೂ ಹೇಳಿದೆ.

‘ಪ್ರವರ್ಗ 1ರಲ್ಲಿರುವ 95 ಮತ್ತು ಪ್ರವರ್ಗ 2ಎಯಲ್ಲಿರುವ 102 ಸೇರಿ ಒಟ್ಟು 197 ಅತಿ ಹಿಂದುಳಿದ ಸಮುದಾಯಗಳ ಸಾಂವಿಧಾನಿಕ ಮೀಸಲಾತಿಯನ್ನು ರಕ್ಷಿಸಬೇಕು. ನೈತಿಕ ಮತ್ತು ನ್ಯಾಯಬದ್ಧವಾದ ನಮ್ಮ ಮನವಿಯನ್ನು ಸರ್ಕಾರ ಮಾನ್ಯ ಮಾಡದಿದ್ದರೆ, ಸಂಘಟಿತರಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಅಗತ್ಯಬಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ’ ಎಂದು ಎಚ್ಚರಿಕೆ ನೀಡಿದೆ.

‘ಬಲಿಷ್ಠರ ಅನ್ಯಾಯದ ಬೇಡಿಕೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಕ್ಷಣ ಬಿಡುಗಡೆ ಮಾಡಬೇಕು’ ಎಂದೂ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿ ಎಂ. ನಾಗರಾಜು, ಖಜಾಂಚಿ ಎಲ್‌.ಎ. ಮಂಜುನಾಥ್ ಮನವಿಯಲ್ಲಿ ಆಗ್ರಹಿಸಿದ್ದಾರೆ.

***

‘ಸರ್ಕಾರಕ್ಕೆ ಸಾಂವಿಧಾನಿಕ ಅಧಿಕಾರ ಇದೆ’
ಇಡಬ್ಲ್ಯುಎಸ್‌ನವರಿಗಾಗಿಯೇ ಇರುವ ಶೇ 10ರಷ್ಟು ಮೀಸಲಾತಿಯನ್ನು ಪಾಲು ಮಾಡಿ ಪಂಚಮಸಾಲಿಗಳಿಗೆ ಶೇ 4, ಒಕ್ಕಲಿಗರಿಗೆ ಶೇ 3ರಷ್ಟು ಹಂಚುವುದು ಒಪ್ಪಬಹುದಾದ ವಿಚಾರವೇ ಸರಿ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಸಾಂವಿಧಾನಿಕ ಅಧಿಕಾರವೂ ಇದೆ. ಕಾನೂನಾತ್ಮಕವಾಗಿಯೂ ಮಾನ್ಯ. ಆದರೆ, ಬ್ರಾಹ್ಮಣರು ತಮಗಾಗಿಯೇ ಇರಿಸಿಕೊಂಡಿರುವ ಶೇ 10ರಷ್ಟನ್ನು ಅದು ಹೇಗೆ ತಾನೇ ಬಿಟ್ಟುಕೊಡುತ್ತಾರೆ. ಖಂಡಿತಾ ಇದು ಅಸಾಧ್ಯವಾದದ್ದು.

ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರಿಗೆ ಯಾರೂ ಸರಿಯಾಗಿ ಕಾನೂ‌ನು ಸಲಹೆ ಕೊಟ್ಟಂತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಂತೂ ಪಂಚಮಸಾಲಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಅ ಸಮಾಜದ ಮೂಗಿಗೆ ತುಪ್ಪ ಸವರಿ ಕೂರಿಸಿದ್ದಾರೆ. ಬೊಮ್ಮಾಯಿಯವರ ಅಧಿಕಾರಾವಧಿ 2023ರ ಮೇ ತನಕ ಇದೆ. ಅವರೇನಾದರೂ ಆದಷ್ಟು ಬೇಗ ಅಧಿಕಾರ ಕಳೆದುಕೊಳ್ಳಬೇಕು ಎಂದರೆ ಈ ರೀತಿಯ ಕೆಲಸಕ್ಕೆ ಮುಂದಾಗಬೇಕು. ಮೀಸಲಾತಿ ವಿಷಯದಲ್ಲಿ ಕೈ ಹಾಕಿ ರಾಮಕೃಷ್ಣ ಹೆಗಡೆ ಮತ್ತು ಎಂ.ವೀರಪ್ಪ ಮೊಯಿಲಿ ತಮ್ಮ ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡ ನಿದರ್ಶನ ನಮ್ಮ ಕಣ್ಣ ಮುಂದಿದೆ.

‘ಒಂದು ವೇಳೆ ಲಿಂಗಾಯತರ 102 ಉಪಜಾತಿಗಳಿಗೂ ಪ್ರತ್ಯೇಕ ಮೀಸಲಾತಿ ನಿಗದಿಪಡಿಸಬಹುದೇ’ ಎಂಬ ಪ್ರಶ್ನೆಗೆ, ‘ಆ ರೀತಿ ಮಾಡಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ವಣ್ಣಿಯಾರ್ ಹಾಗೂ ಮಹಾರಾಷ್ಟ್ರದಲ್ಲಿ ಮರಾಠರಿಗೆ ಈ ರೀತಿ ಪ್ರತ್ಯೇಕ ಮೀಸಲಾತಿ ಘೋಷಿಸಿದ್ದನ್ನು ಹೈಕೋರ್ಟ್, ಸುಪ್ರೀಂ ಕೋರ್ಟ್ ಈಗಾಗಲೇ ರದ್ದುಗೊಳಿಸಿವೆ. ವಣ್ಣಿಯಾರ್ ಪ್ರಕರಣದಲ್ಲಿ ನಾನೇ ವಾದ ಮಂಡಿಸಿದ್ದೇನೆ. ಇವೆಲ್ಲಾ ಆಗದ ಕೆಲಸ’
–ರವಿವರ್ಮ ಕುಮಾರ್, ಹಿರಿಯ ವಕೀಲ, ಹೈಕೋರ್ಟ್

***

‘ಕೇಂದ್ರದ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು’
ಇಡಬ್ಲ್ಯುಎಸ್ ಕೇಂದ್ರದ ಕೋಟಾ. ಇದು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಇರುವಂಥದ್ದು. ಇದರಲ್ಲಿ ಪಾಲು ಮಾಡುವ ಮುನ್ನ ರಾಜ್ಯ ಸರ್ಕಾರ ಕೇಂದ್ರದ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಈ ರೀತಿ ಅವಕಾಶ ಸಿಗುತ್ತದೆ ಎನ್ನುವುದು ಅನುಮಾನವೇ ಸರಿ.

ಇಂದು ಎಲ್ಲರೂ ಮೀಸಲಾತಿ ಕೇಳುವಂತಾಗಿದೆ. ಪರಿಶಿಷ್ಟ ಜಾತಿಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಮೀಸಲಾತಿ ಪ್ರಯೋಜನ ಪಡೆದ, ಕೆನೆಪದರದವರ ಮೀಸಲು ಮುಂದುವರಿಕೆ ಬಗ್ಗೆ ಪುನರಾವಲೋಕನ ಅಗತ್ಯವಿದೆ. ಕೆನೆಪದರದಲ್ಲಿರುವ ಐಎಎಸ್, ಐಪಿಎಸ್‌ನಂಥವರೇ ಇಲ್ಲೂ ಶೋಷಿತರ ಮೀಸಲು ಕಬಳಿಸುತ್ತಿದ್ದಾರೆ. ಅಸಲಿಗೆ ಯಾರು ಮೀಸಲಾತಿಗೆ ಅರ್ಹರಿದ್ದಾರೋ ಅವರೆಲ್ಲಾ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕವಾಗಿ ಇನ್ನೂ ಮೇಲೇಳುತ್ತಲೇ ಇಲ್ಲ.
–ಬಿ.ವಿ. ಆಚಾರ್ಯ, ಹಿರಿಯ ವಕೀಲ, ಹೈಕೋರ್ಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT