ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರ ಬಡ್ತಿ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 4 ಸೆಪ್ಟೆಂಬರ್ 2024, 15:37 IST
Last Updated : 4 ಸೆಪ್ಟೆಂಬರ್ 2024, 15:37 IST
ಫಾಲೋ ಮಾಡಿ
Comments

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 40 ಸಾವಿರ ಪದವೀಧರ ಶಿಕ್ಷಕರ ಬಡ್ತಿ ಸಮಸ್ಯೆಯ ಪರಿಹಾರಕ್ಕಾಗಿ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗದ ಜತೆ ಬುಧವಾರ ಚರ್ಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2017ಕ್ಕಿಂತ ಮೊದಲು ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರ ಬಡ್ತಿ ಸಮಸ್ಯೆ ಹಾಗೂ ಇತರೆ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಶಾಶ್ವತ ಪರಿಹಾರ ದೊರಕಿಸಲು ತಕ್ಷಣ ಸಮಿತಿ ರಚಿಸಲಾಗುವುದು. ಸಮಿತಿ ವರದಿ ಪಡೆದು ಒಂದು ತಿಂಗಳ ಒಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ವೃಂದ ಮತ್ತು ನೇಮಕಾತಿಗೆ 2017ರಲ್ಲಿ ತಂದ ತಿದ್ದುಪಡಿಯನ್ನು ಅದಕ್ಕೂ ಮೊದಲು ನೇಮಕವಾದ ಶಿಕ್ಷಕರಿಗೆ ಹೇಗೆ ಪೂರ್ವಾನ್ವಯ ಮಾಡಿದರು ಎನ್ನುವುದೇ ಆಶ್ವರ್ಯ. ಈ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯುವೆ. ಕಾನೂನು ತೊಡಕುಗಳ ನಿವಾರಣೆ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಬೇಕಿದೆ. ಅದಕ್ಕಾಗಿ ಕಾನೂನು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು’ ಎಂದರು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ಅಧ್ಯಕ್ಷ ಬಸವರಾಜ ಗುರಿಕಾರ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು, ನಸೀರ್‌ ಅಹ್ಮದ್‌ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಸಂಘದ ಅಧ್ಯಕ್ಷ ಕೆ. ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಉಪಸ್ಥಿತರಿದ್ದರು.

ಶಿಕ್ಷಕರ ಬೇಡಿಕೆಗಳೇನು?

*2017ಕ್ಕೂ ಮೊದಲು ನೇಮಕವಾದ ಎಲ್ಲ ಶಿಕ್ಷಕರನ್ನೂ 1ರಿಂದ 7ನೇ ತರಗತಿ ಬೋಧನೆಗೆ ಪರಿಗಣಿಸಬೇಕು 

*ಪದವಿ ಪಡೆದಿರುವ ಎಲ್ಲರನ್ನೂ ಪದವೀಧರ ಶಿಕ್ಷಕರೆಂದೇ ಪರಿಗಣಿಸಿ ಸೇವಾಹಿರಿತನದ ಆಧಾರದಲ್ಲಿ ಬಡ್ತಿ ನೀಡಬೇಕು

*ಪ್ರೌಢಶಾಲೆ ಮುಖ್ಯ ಶಿಕ್ಷಕ ಹುದ್ದೆಗಳಿಗೆ ಬಡ್ತಿ ನೀಡಿದ ನಂತರ ಉಳಿದವರಿಗೆ ವಿಶೇಷ ಹುದ್ದೆ ಸೃಷ್ಟಿಸಬೇಕು

*ವೃಂದ ಮತ್ತು ನೇಮಕಾತಿ ನಿಯಮಗಳನ್ನು 2017ರ ನಂತರ ನೇಮಕವಾದ ಶಿಕ್ಷಕರಿಗೆ ಮಾತ್ರ ಅನ್ವಯಿಸಬೇಕು

*ಜಿಲ್ಲಾ ನೇಮಕಾತಿ ಸಮಿತಿ ಮೂಲಕ ನೀಡುತ್ತಿದ್ದ ಬಡ್ತಿ ಪ್ರಕ್ರಿಯೆಯನ್ನು ಮುಂದುವರಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT