ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಣ ಕಾಗದದ ತೀವ್ರ ಅಭಾವ; ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿಳಂಬ ಸಾಧ್ಯತೆ

ಕಾಗದದ ಬೆಲೆ ಏರಿಕೆ * ಹೆಚ್ಚಿನ ಬೆಲೆಗೆ ರಫ್ತಾಗುತ್ತಿರುವ ದೇಶಿ ಕಾಗದ
Last Updated 21 ಏಪ್ರಿಲ್ 2022, 2:47 IST
ಅಕ್ಷರ ಗಾತ್ರ

ಬೆಂಗಳೂರು: ಮುದ್ರಣ ಕಾಗದದ ತೀವ್ರ ಅಭಾವದಿಂದಾಗಿ ಈ ಬಾರಿ (2022–23) ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕಗಳು ಸಿಗುವ ಸಾಧ್ಯತೆ ಇಲ್ಲ.

ರಷ್ಯಾ–ಉಕ್ರೇನ್‌ ಯುದ್ಧ, ಚೀನಾದಲ್ಲಿನ ಕೋವಿಡ್‌ ಸಮಸ್ಯೆಯಿಂದ ಜಾಗತಿಕವಾಗಿ ಮುದ್ರಣ ಕಾಗದದ ಅಭಾವ ಸೃಷ್ಟಿಯಾಗಿದೆ. ಆದರೆ, ಭಾರತದ ಮುದ್ರಣ ಕಾಗದ ತಯಾರಿಕಾ ಕಂಪನಿಗಳು ಹೆಚ್ಚಿನ ಬೆಲೆಗೆಕಾಗದವನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ, ದೇಶೀ ಮಾರುಕಟ್ಟೆಯಲ್ಲೂ ಕಾಗದದ ಕೊರತೆ ಸೃಷ್ಟಿಯಾಗಿದೆ.

ಇದರ ಪರಿಣಾಮ, ಪೆಟ್ರೋಲ್–ಡೀಸೆಲ್‌ ಮಾದರಿಯಲ್ಲೇ ಮುದ್ರಣ ಕಾಗದದ ಬೆಲೆಯೂ ಗಗನಮುಖಿಯಾಗಿದೆ. ಜತೆಗೆ ಪಠ್ಯ ಪುಸ್ತಕ ಮುದ್ರಣಕ್ಕೆ ಅಗತ್ಯವಿರುವಷ್ಟು ಕಾಗದವೂ ಮುದ್ರಕರಿಗೆ ಪೂರೈಕೆ ಆಗುತ್ತಿಲ್ಲ. ಮೇ 15 ಕ್ಕೆ ಪಠ್ಯಪುಸ್ತಕಗಳನ್ನು ಮುದ್ರಿಸಿ ಹಸ್ತಾಂತರಿಸಬೇಕು ಎಂಬ ಶಿಕ್ಷಣ ಇಲಾಖೆ ಗಡುವು ನೀಡಿದೆ. ಆದರೆ ಕಾಗದ ಕೊರತೆಯಿಂದಾಗಿ ಅದು ಸಾಧ್ಯವಾಗುವುದಿಲ್ಲ ಎಂಬುದು ಪಠ್ಯಪುಸ್ತಕ ಮುದ್ರಕರ ಅಳಲು.

‘ಕೆಲವು ದಿನಗಳ ಹಿಂದೆ ಒಂದು ಕೆ.ಜಿ ಮುದ್ರಣ ಕಾಗದದ ಬೆಲೆ ₹62 ಇತ್ತು. ಈಗ ಅದು ₹80 ಕ್ಕೆ ತಲುಪಿದೆ (ಜಿಎಸ್‌ಟಿ ಪ್ರತ್ಯೇಕ). ಹೆಚ್ಚು ಹಣ ಕೊಡುತ್ತೇವೆ ಎಂದರೂ ಮುದ್ರಣ ಕಾಗದ ಸಿಗುತ್ತಿಲ್ಲ. ಒಂದು ಶೈಕ್ಷಣಿಕ ವರ್ಷದ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಸುಮಾರು 15 ಸಾವಿರ ಟನ್‌ ಕಾಗದ ಬೇಕಾಗುತ್ತದೆ.

ಪ್ರತಿಯೊಬ್ಬ ಮುದ್ರಕನಿಗೆ ದಿನಕ್ಕೆ ತಲಾ 350 ಟನ್‌ ಕಾಗದ ಅಗತ್ಯವಿದೆ. ಆದರೆ, ಈಗ ಮುದ್ರಕರಿಗೆ ಸಿಗುತ್ತಿರುವುದು ದಿನಕ್ಕೆ 50 ರಿಂದ 60 ಟನ್‌ ಮಾತ್ರ. ರಾಜ್ಯದಲ್ಲಿ ಪಠ್ಯಪುಸ್ತಕಗಳ 27 ಮುದ್ರಕರಿದ್ದು, ಶೇ 20 ರಿಂದ ಶೇ 30 ರಷ್ಟು ಮಾತ್ರ ಮುದ್ರಣವಾಗಿದೆ’ ಎಂದು ಪಠ್ಯಪುಸ್ತಕದ ಪ್ರಮುಖ ಮುದ್ರಕರಾದ ಅಭಿಮಾನಿ ಪ್ರಕಾಶನದ ಆಡಳಿತಾಧಿಕಾರಿ ಅನಿಲ್‌ ಹೊಸಕೊಪ್ಪ ತಿಳಿಸಿದರು.

ಕಳೆದ ತಿಂಗಳು 15 ರಿಂದ 20 ದಿನಗಳು ಕಾಗದದ ಸರಬರಾಜು ನಿಲ್ಲಿಸಲಾಗಿತ್ತು.

ಪುಸ್ತಕೋದ್ಯಮಕ್ಕೂ ಹೊಡೆತ
ಮುದ್ರಣ ಕಾಗದದ ಕೊರತೆ ಮತ್ತು ಬೆಲೆ ಏರಿಕೆಯಿಂದ ಪುಸ್ತಕೋದ್ಯಮಕ್ಕೂ ಹೊಡೆತ ಬಿದ್ದಿದೆ. ಮುದ್ರಣ ಇಂಕು, ಪುಸ್ತಕಗಳ ಸಾಗಾಣಿಕೆ ವೆಚ್ಚವೂ ಹೆಚ್ಚಿದೆ ಎಂದು ಸೃಷ್ಟಿ ಪ್ರಕಾಶನದ ಸೃಷ್ಟಿ ನಾಗೇಶ್‌ ತಿಳಿಸಿದ್ದಾರೆ.

ಲೇಖಕರ ರಾಯಧನದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದೆ. ಒಂದು ಬಾಕ್ಸ್‌ ಪುಸ್ತಕದ ಸಾಗಣೆಗೆ ₹36 ರಿಂದ ₹38 ಇದೆ. ಕೂಲಿ ವೆಚ್ಚವೂ ಹೆಚ್ಚಾಗಿ. ಒಟ್ಟಾರೆ ಪುಸ್ತಕೋದ್ಯಮ ದುಬಾರಿಯಾಗಿದೆ ಎಂದು ಹೇಳಿದ್ದಾರೆ.

*

ಪಠ್ಯಪುಸ್ತಕಗಳ ಮುದ್ರಣಕ್ಕೆ ಅಗತ್ಯವಿರುವಷ್ಟು ಮುದ್ರಣ ಕಾಗದ ಸರಬರಾಜು ಮಾಡಬೇಕು. ಪಠ್ಯಪುಸ್ತಕ ಸರಬರಾಜಿಗೆ ನೀಡಿರುವ ಗಡುವನ್ನು 15 ದಿನಗಳು ಹೆಚ್ಚವರಿಯಾಗಿ ನೀಡಬೇಕು.
-ಅನಿಲ್‌ ಹೊಸಕೊಪ್ಪ, ಅಭಿಮಾನಿ ಪ್ರಕಾಶನ

*

ಈ ಹಿಂದೆ ಸಮಸ್ಯೆ ಆದಾಗ ಸರ್ಕಾರ ಮಧ್ಯಪ್ರವೇಶ ಮಾಡಿ ಮುದ್ರಕರಿಗೆ ಮುಂಗಡ ಹಣ ಕೊಟ್ಟು ಪಠ್ಯಪುಸ್ತಕ ಮುದ್ರಣಕ್ಕೆ ಅವಕಾಶ ನೀಡಿತ್ತು. ಈ ವರ್ಷ ಕಾರ್ಯಾದೇಶ ಕೊಟ್ಟು ಕೆಲಸ ಶುರು ಮಾಡಿದ್ದರೂ ಕಳೆದ ವರ್ಷದ ಬಿಲ್‌ ಪಾವತಿ ಮಾಡಿಲ್ಲ.
-ಸತ್ಯಕುಮಾರ್, ಅಧ್ಯಕ್ಷರು ಪಠ್ಯ ಪುಸ್ತಕ ಮುದ್ರಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT