ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಟಿಕೆಟ್‌ ಜಿದ್ದಾಜಿದ್ದಿ

ಮಂಡ್ಯದಲ್ಲಿ ಆಕಾಂಕ್ಷಿಗಳ ಲಾಬಿ
Last Updated 8 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು/ಮಂಡ್ಯ: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಟಿಕೆಟ್‌ಗಾಗಿ ಜಟಾಪಟಿ ಆರಂಭವಾಗಿದೆ.

ಮಂಡ್ಯ ಲೋಕಸಭೆ ಕ್ಷೇತ್ರ ಅಭ್ಯರ್ಥಿ ಆಯ್ಕೆ ವಿಚಾರ ಜೆಡಿಎಸ್‌ನೊಳಗೆ ಗೊಂದಲ ಹುಟ್ಟುಹಾಕಿದೆ. ಐಆರ್‌ಎಸ್‌ ಹುದ್ದೆ ತ್ಯಜಿಸಿ ರಾಜಕೀಯಕ್ಕೆ ಬಂದಿರುವ ಲಕ್ಷ್ಮಿ ಅಶ್ವಿನ್‌ ಗೌಡ ಟಿಕೆಟ್‌ ಆಕಾಂಕ್ಷಿ‌. ಆದರೆ, ಅವರ ವಿರುದ್ಧ ಇನ್ನೊಬ್ಬ ಸ್ಪರ್ಧಾಕಾಂಕ್ಷಿ, ಎಲ್‌.ಆರ್‌. ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೈ’ ಪಾಳಯದಲ್ಲಿರುವ ಜೆಡಿಎಸ್‌ ಮಾಜಿ ಶಾಸಕ ಚಲುವರಾಯ ಸ್ವಾಮಿ, ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಜಿಲ್ಲೆಯಲ್ಲಿ ಬಲಿಷ್ಠವಾಗಿರುವ ಪಕ್ಷದ ಸಂಘಟನೆಯನ್ನು ಸಾರ್ವತ್ರಿಕ ಚುನಾವಣೆವರೆಗೂ ಉಳಿಸಿಕೊಳ್ಳಲು ಮುಂದಾಗಿರುವ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ, ತಮ್ಮ ಕುಟುಂಬದವರ ಹೆಸರನ್ನೇ ಆಖೈರುಗೊಳಿಸುವ ಸಾಧ್ಯತೆಯೂ ಇದೆ. ಈ ಮಧ್ಯೆ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಪುತ್ರ ಡಿ.ಟಿ.ಸಂತೋಷ್‌ ಕೂಡ ಟಿಕೆಟ್‌ಗಾಗಿ ಮನವಿ ಸಲ್ಲಿಸಿದ್ದಾರೆ.

ಶಾಸಕ ಆರ್. ಅಶೋಕ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವಂತೆ ಬಿಜೆಪಿಯಲ್ಲಿ ಒತ್ತಡ ಹೆಚ್ಚಿದೆ. ಜೆಡಿಎಸ್‌ ಮೈತ್ರಿ ಬಗ್ಗೆ ಅತೃಪ್ತಿ ಹೊಂದಿರುವ ಚಲುವರಾಯಸ್ವಾಮಿ ಅವರನ್ನು ಕರೆತರುವ ಯತ್ನಕ್ಕೂ ಕಮಲ ಪಾಳಯ ಕೈ ಹಾಕಿದೆ.

ಬಳ್ಳಾರಿ ಗೊಂದಲ: ಶಿವಮೊಗ್ಗದಲ್ಲಿ ನೆಲೆ ಇಲ್ಲದಿರುವುದು, ಮಂಡ್ಯದಲ್ಲಿ ಜೆಡಿಎಸ್‌ ಪ್ರಾಬಲ್ಯ ಇರುವುದರಿಂದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು(ಪರಿಶಿಷ್ಟ ಪಂಗಡಕ್ಕೆ ಮೀಸಲು) ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಈ ಜಿಲ್ಲೆಯಲ್ಲಿ ನಡೆದ ಹಲವು ಚುನಾವಣೆಗಳ ಜವಾಬ್ದಾರಿ ಹೊತ್ತಿದ್ದ, ಹಾಲಿ ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್‌ ವಿರುದ್ಧ ಜಾರಕಿಹೊಳಿ ಸಹೋದರರು ಹಾಗೂ ಅವರ ಬೆಂಬಲಿಗ ಶಾಸಕರು ಕಿಡಿಕಾರಿದ್ದರು. ಹೀಗಾಗಿ, ಈ ಬಾರಿ ಬಳ್ಳಾರಿ ರಾಜಕಾರಣದಿಂದ ಶಿವಕುಮಾರ್ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.

ಈ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಆರು ಶಾಸಕರಿದ್ದರೂ ಇಲ್ಲಿ ಸ್ಪರ್ಧಿಸಲು ಕೈ ಪಾಳಯದಲ್ಲಿ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ನಡೆಯುತ್ತಿದೆ.

ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪನವರ ಪುತ್ರ ಸುಜಯ್ ಕುಮಾರ್‍, ಶಾಸಕ ಶ್ರೀರಾಮುಲು ಸಹೋದರಿ ಜೆ. ಶಾಂತಾ, ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರ ಹೆಸರುಗಳು ಬಿಜೆಪಿಯಲ್ಲಿ ಚಲಾವಣೆಯಲ್ಲಿವೆ.

‘ಯಾರ್ರೀ ಲಕ್ಷ್ಮಿ ಅಶ್ವಿನ್‌ಗೌಡ?’

‘ಯಾರ್ರೀ ಅದು ಲಕ್ಷ್ಮಿ ಅಶ್ವಿನ್‌ಗೌಡ? ಎಷ್ಟು ವರ್ಷದಿಂದ ರಾಜಕಾರಣದಲ್ಲಿ, ಜೆಡಿಎಸ್‌ ಪಕ್ಷದಲ್ಲಿ ಇದ್ದಾರೆ? ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದು ಟಿಕೆಟ್‌ ಕೊಡಿ ಎಂದರೆ ಹೇಗೆ’ ಎಂದು ಎಲ್‌.ಆರ್‌. ಶಿವರಾಮೇಗೌಡ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಕಿಡಿಕಾರಿದ್ದಾರೆ.

‘ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸುರೇಶ್‌ ಗೌಡ ಗೆಲುವಿಗೆ ಶ್ರಮಿಸಿದ್ದೇನೆ. ಈ ಉಪಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡಬೇಕು’ ಎಂದಿದ್ದಾರೆ.

‘ವರಿಷ್ಠರ ಸೂಚನೆಯಂತೆ ಈಗಾಗಲೇ ಕ್ಷೇತ್ರದಾದ್ಯಂತ ಓಡಾಡುತ್ತಿದ್ದೇನೆ. ನನಗೇ ಟಿಕೆಟ್‌ ನೀಡುವುದಾಗಿ ದೇವೇಗೌಡರು, ಕುಮಾರಸ್ವಾಮಿ ಭರವಸೆ ನೀಡಿದ್ದಾರೆ’ ಎಂದು ಲಕ್ಷ್ಮಿ ಅಶ್ವಿನ್‌ಗೌಡ ಸುದ್ದಿಗಾರರಿಗೆ ತಿಳಿಸಿದರು.

ಜಮಖಂಡಿ ಬಿಜೆಪಿಗೆ ಕೆಂಡ

ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಿಜೆಪಿ ಪಾಲಿಗೆ ಕೆಂಡವಾಗಿ ಪರಿಣಮಿಸಿದೆ.

‌ತಮ್ಮ ಸೋದರ ಸಂಗಮೇಶ ನಿರಾಣಿ ಬದಲು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರಿಗೆ ಟಿಕೆಟ್ ಕೊಟ್ಟರೆ, ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ ಶಾಸಕ ಮುರುಗೇಶ ನಿರಾಣಿ ಹೇಳಿದ್ದಾರೆ. ಇದು ಬಿಜೆಪಿ ನಾಯಕರಿಗೆ ತಲೆನೋವು ತಂದಿದೆ. ಮಾತುಕತೆ ನಡೆಸಿ ಒಮ್ಮತ ಅಭ್ಯರ್ಥಿ ಆಯ್ಕೆ ಮಾಡುವ ಯತ್ನ ಪಕ್ಷದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT