ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರಿನ ರೈತ ಶಿವಣ್ಣನ ಆನೆಗಳು!

ಮಾಲೂರು: ಎರಡು ಎಕರೆ ಮೀಸಲು, ಸೋಲಾರ್ ಬೇಲಿ
Last Updated 12 ಆಗಸ್ಟ್ 2019, 7:21 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ಪಿಚ್ಚಗುಂಟ್ರಹಳ್ಳಿಯ ರೈತ ಶಿವಣ್ಣ ಅವರು ಎರಡು ಆನೆಗಳನ್ನು ತಮ್ಮ ಜಮೀನಿನಲ್ಲಿ ಸಾಕುತ್ತಿದ್ದಾರೆ!

‘ಆನೆ ಸಾಕಿದ ರೈತ’ ಎನ್ನುವ ಹೆಗ್ಗಳಿಕೆ ಪಡೆಯಬೇಕು ಎನ್ನುವ ಆಸೆಯಿಂದ ಈ ಕೆಲಸ ಮಾಡುತ್ತಿದ್ದಾರೆ. ಆನೆಗಳನ್ನು ಯಾವುದೇ ರೀತಿಯ ದುಡಿಮೆಗೆ ಬಳಸಿಕೊಳ್ಳುತ್ತಿಲ್ಲ

ಶಿವಣ್ಣ ಅವರ ಕುಟುಂಬದ ಬಳಿ 150 ಎಕರೆ ಜಮೀನಿದೆ. ಆರ್ಥಿಕವಾಗಿಯೂ ಅನುಕೂಲಸ್ಥರು. 2014ರಲ್ಲಿ ಶಿವಣ್ಣ ಹಾಗೂ ಅವರ ಸಹೋದರ ವೆಂಕಟೇಶ್ ತಮಿಳುನಾಡಿನ ತೂತ್ತು ಕುಡಿಯ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಾಲಯದ ಆನೆ ಅನಾರೋಗ್ಯಕ್ಕೆ ಒಳಗಾಗಿತ್ತು. ದೇವಾಲಯ ಸಮಿತಿಯ ಜೊತೆ ಮಾತನಾಡಿ ಆನೆಯನ್ನು ಸಾಕಲು ತಂದರು. ಆನೆ ಸಾಕಾಣಿಕೆಗೆ ಅನುಮತಿ ಪಡೆಯಲು ಆರು ತಿಂಗಳು ಅರಣ್ಯ ಇಲಾಖೆಗೆ ಎಡತಾಕಿದರು.

ಅದೇ ಸಮಯದಲ್ಲಿ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಪಟ್ಟದ ಆನೆ ‘ಗೌರಿ’ ಸಹ ಅನಾರೋಗ್ಯಕ್ಕೆ ಒಳಗಾಗಿತ್ತು. ಯಾರಾದರೂ ಮುಂದೆ ಬಂದರೆ ಅದನ್ನು ಸಾಕಲು ನೀಡುತ್ತಾರೆ ಎನ್ನುವ ಸುದ್ದಿ ಶಿವಣ್ಣ ಅವರ ಕಿವಿಗೆ ಬಿದ್ದಿತು. ಆ ಆನೆಯನ್ನೂ ಪಡೆದುಕೊಂಡರು.

‘ಎರಡು ಎಕರೆ ಜಮೀನನ್ನು ಆನೆಗಳಿಗಾಗಿಯೇ ಮೀಸಲು ಇಡಲಾಗಿದೆ. ಸಾಕಾಣಿಕೆಗೆ ತಿಂಗಳಿಗೆ ₹ 1.80 ಲಕ್ಷ ಖರ್ಚಾಗುತ್ತದೆ. ಸ್ವಂತ ಖರ್ಚಿನಲ್ಲಿಯೇ ದೊಡ್ಡ ನೀರಿನ ತೊಟ್ಟಿ, ಸೋಲಾರ್ ಬೇಲಿ ನಿರ್ಮಿಸಿದೆವು. ಆರಂಭದಲ್ಲಿ ಸ್ನೇಹಿತರು ಸಹ ಆಹಾರವನ್ನು ನೀಡಿದರು’ ಎಂದು ಶಿವಣ್ಣ ತಿಳಿಸಿದರು.

‘2017ರಲ್ಲಿ ಬೆಂಗಳೂರಿನ ವನ್ಯಜೀವಿ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ಜೊತೆ ಕೈ ಜೋಡಿಸಿದೆವು. ಆನೆಗಳಿಗೆ ಆಹಾರ, ಚಿಕಿತ್ಸೆ ಮತ್ತು ಮಾವುತರ ವ್ಯವಸ್ಥೆಯನ್ನು ಅವರು ಮಾಡಿದರು. ಕೇಂದ್ರದ ಸಹಕಾರ ದೊರೆತ ನಂತರ ನಮ್ಮ ಖರ್ಚು ವೆಚ್ಚಗಳು ಕಡಿಮೆ ಆದವು. ಈಗ ಆನೆಗಳು ಆರೋಗ್ಯವಾಗಿವೆ’ ಎಂದು ವಿವರಿಸುತ್ತಾರೆ.

ಆನೆಗಳನ್ನು ನೋಡಲು ತಂಡೋಪ ತಂಡವಾಗಿ ಜನರು ಬರುತ್ತಿದ್ದಾರೆ.

ಬಾಲ್ಯದ ಆಸೆ

‘ಆನೆ ಸಾಕಬೇಕು ಎಂದು ನನಗೆ ಬಾಲ್ಯದಿಂದಲೂ ಆಸೆ ಇತ್ತು. ದಿನವೂ ಅವುಗಳನ್ನು ನೋಡದಿದ್ದರೆ ಮನಸ್ಸಿಗೆ ಏನೋ ಕಳೆದುಕೊಂಡಂತೆ ಆಗುತ್ತದೆ’ ಎನ್ನುತ್ತಾರೆ ಶಿವಣ್ಣ.

‘ನಿತ್ಯ ಬೆಳಿಗ್ಗೆ 6 ಕೆ.ಜಿ ಹಣ್ಣು, 15 ರಿಂದ 20 ಕೆ.ಜಿ ರಾಗಿ ಮತ್ತು ಅಕ್ಕಿ ಹಿಟ್ಟಿನ ಮುದ್ದೆ, 250 ಕೆ.ಜಿ ಹಸಿಮೇವು ನೀಡಲಾಗುತ್ತಿದೆ. ಹಸಿ ಮೇವನ್ನು ಮೂರು ಎಕರೆಯಲ್ಲಿ ಬೆಳೆಯುತ್ತಿದ್ದೇವೆ. ಆಹಾರದ ವೆಚ್ಚವನ್ನು ಪುನರ್ವಸತಿ ಕೇಂದ್ರದವರು ಭರಿಸುವರು’ ಎಂದರು.

ತಿಂಗಳಿಗೆ ಒಮ್ಮೆ ಬನ್ನೇರುಘಟ್ಟ ಉದ್ಯಾನದ ವೈದ್ಯರು ಬಂದು ಆನೆಗಳ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT