ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯರ ಮಧ್ಯೆ ಪಿಂಚಣಿ ಸಮಾನ ಹಂಚಿಕೆ: ಹೈಕೋರ್ಟ್‌

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದದ ಅರ್ಜಿ ವಿಚಾರಣೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ಸಾವನ್ನಪ್ಪಿದ ಉದ್ಯೋಗಿಯ ಪತ್ನಿಯರ ನಡುವೆ ಕುಟುಂಬ ಪಿಂಚಣಿ ಸಮಾನವಾಗಿ ಹಂಚಿಕೆಯಾಗಲಿದೆ’ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮೊದಲನೇ ಪತ್ನಿ ಮತ್ತು ಆಕೆಯ ಪುತ್ರಿಯರಿಗೆ ಮಾತ್ರವೇ ಶೇ 50ರಷ್ಟು ಕುಟುಂಬ ಪಿಂಚಣಿ ಮಂಜೂರು ಮಾಡುವಂತೆ ನೈರುತ್ಯ ರೈಲ್ವೆಗೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಾವನ್ನಪ್ಪಿದ್ದ ರೈಲ್ವೆ ಉದ್ಯೋಗಿಯ ಎರಡನೇ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸದೆ.

‘ರೈಲು ಸೇವೆಗಳ (ಪಿಂಚಣಿ) ನಿಯಮಗಳು–1993ಕ್ಕೆ 2016ರಲ್ಲಿ ತಿದ್ದುಪಡಿ ಮಾಡಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇದರನ್ವಯ ಒಬ್ಬರು ಅಥವಾ ಹೆಚ್ಚು ವಿಧವೆಯರು ಕುಟುಂಬ ಪಿಂಚಣಿ ಪಡೆಯಲು ನಿಯಮಗಳಲ್ಲಿ ಸ್ಪಷ್ಟವಾದ ಹಕ್ಕು ಕಲ್ಪಿಸಲಾಗಿದೆ. ಹೀಗಾಗಿ, ನೈರುತ್ಯ ರೈಲ್ವೆ ಮಂಡಳಿಯು ಶೇ 50ರಷ್ಟು ಪಿಂಚಣಿಯನ್ನು ಅರ್ಜಿದಾರರಿಗೆ ಬಿಡುಗಡೆ ಮಾಡಬೇಕು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಪಿಂಚಣಿಯನ್ನು ಹೊರತುಪಡಿಸಿ ಇತರೆ ಪ್ರಯೋಜನಗಳು ಬೇಕೆಂದು ಪಕ್ಷಕಾರರು ವಾದಿಸುತ್ತಿದ್ದು, ಇದು ವಿಚಾರಣಾ ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು?: ಆರ್.ರಮೇಶ್ ಬಾಬು ನೈರುತ್ಯ ರೈಲ್ವೆಯ ಹಿರಿಯ ವಿಭಾಗೀಯ ಸಿಬ್ಬಂದಿ ವ್ಯವಸ್ಥಾಪಕರ ಕಚೇರಿಯಲ್ಲಿನ ಸಂಚಾರ ವಿಭಾಗದಲ್ಲಿ ಪಾಯಿಂಟ್ಸ್‌ ಮನ್ ಆಗಿ ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಯೊಂದಿಗಿನ ವಿವಾಹದಲ್ಲಿ ಬಾಬು ಅವರಿಗೆ ಮೂವರು ಪುತ್ರಿಯರಿದ್ದಾರೆ. 1999ರ ಡಿಸೆಂಬರ್ 9ರಂದು ಬಾಬು, ಪುಷ್ಪಾ ಅವರೊಂದಿಗೆ ತಿರುಪತಿಯಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದರು.

ಬಾಬು ಅವರು 2021ರ ಮೇ 4ರಂದು ನಿಧನ ಹೊಂದಿದ ತರುವಾಯ ಮೊದಲ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ, ‘ಕಾನೂನಾತ್ಮಕವಾಗಿ ನಾನು ಮೊದಲ ಪತ್ನಿಯಾಗಿರುವುದರಿಂದ ಸೌಲಭ್ಯ, ಅನುಕಂಪದ ಉದ್ಯೋಗ ಮತ್ತು ಬಾಕಿಗಳನ್ನು ಪಾವತಿಸಲು ನೈರುತ್ಯ ರೈಲ್ವೆ ಮಂಡಳಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.

ಇದಕ್ಕೆ ಪೂರಕವಾಗಿ ಎರಡನೇ ಪತ್ನಿಯೂ ಮೆಮೊ ಸಲ್ಲಿಸಿದ್ದರು. ‍ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ 2022ರ ಜುಲೈ 22ರಂದು ಮೊದಲ ಪತ್ನಿ ಹಾಗೂ ಅವರ ಮಕ್ಕಳಿಗೆ ಶೇ 50ರಷ್ಟು ಪಿಂಚಣಿ ಪಾವತಿಸಲು ನೈರುತ್ವ ರೈಲ್ವೆ ಮಂಡಳಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಎರಡನೇ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT