ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಸಿಸ್ ಸಂಪರ್ಕ ಇದ್ದವರಾರೂ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡಿಲ್ಲ: ಖಾದ್ರಿ

ಶಾಸಕ ಯತ್ನಾಳ ಅವರು ಹುಚ್ಚರ ಹಾಗೆ ಮಾತನಾಡುತ್ತಾರೆ: ಎ.ಎಂ. ಹಿಂಡಸಗೇರಿ
Published 6 ಡಿಸೆಂಬರ್ 2023, 12:27 IST
Last Updated 6 ಡಿಸೆಂಬರ್ 2023, 12:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಸ್ಲಿಮ್‌ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್‌ ಉಗ್ರರ ಜೊತೆ ಸಂಪರ್ಕ ಇದ್ದವರ‍್ಯಾರು ಪಾಲ್ಗೊಂಡಿಲ್ಲ. ಶಾಸಕ ಬಸನಗೌಡಪಾಟೀಲ ಯತ್ನಾಳ ಅವರ ಆರೋಪದಲ್ಲಿ ಹುರುಳಿಲ್ಲ. ಅಗತ್ಯವಿದ್ದರೆ ಸರ್ಕಾರ ತನಿಖೆ ನಡೆಸಲಿ’ ಎಂದು ಹುಬ್ಬಳ್ಳಿ ಬಾಷಾಪೀರಾ ದರ್ಗಾದ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಹೇಳಿದರು.

‘ಐಸಿಸ್‌ ಬೆಂಬಲಿಗ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ’ ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಮಾಡಿರುವ ಆರೋಪಕ್ಕೆ ಬುಧವಾರ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ಅವರು ಡೈನಾಮಿಕ್‌ ಶಾಸಕರಾಗಿದ್ದಾರೆ. ಅವರು ಅಷ್ಟು ಆತ್ಮವಿಶ್ವಾಸದಿಂದ ಹೇಳಿಕೆ ನೀಡುತ್ತಾರೆ ಎಂದಾದರೆ, ಸತ್ಯ ಏನೆಂದು ಹೊರಬರಲಿ’ ಎಂದರು.

‘ಶಾಸಕರ ಆರೋಪಕ್ಕಷ್ಟೇ ಅಲ್ಲ, ಐಸಿಸ್‌ ಉಗ್ರರ ನಂಟು ಯಾರ‍್ಯಾರು ಇಟ್ಟುಕೊಂಡಿದ್ದಾರೆ ಎನ್ನುವ ಕುರಿತು ಸಂಪೂರ್ಣ ತನಿಖೆಯಾಗಬೇಕು. ಅಂದು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಯಾರ‍್ಯಾರು ಇದ್ದರೋ ಅವರೆಲ್ಲರನ್ನೂ ಬೇಕಾದರೆ ತನಿಖೆಗೆ ಒಳಪಡಿಸಲಿ. ಎಲ್ಲ ತನಿಖೆಗೂ ಸಹಕರಿಸುತ್ತೇವೆ. ನಾವು ಭಾರತದಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇವೆ. ಅಂತಹ ಕೆಲಸ ಮಾಡುವವರಿಗೆ ಬೆಂಬಲವೂ ನೀಡುವುದಿಲ್ಲ. ಪೊಲೀಸ್‌ ಇಲಾಖೆ, ಗುಪ್ತಚರ ಇಲಾಖೆಯ ಭದ್ರತೆ ನಡುವೆ, ಅಂಥವರು ಬರಲು ಸಾಧ್ಯವಿಲ್ಲ. ಯಾರ‍್ಯಾರು ಪಾಲ್ಗೊಂಡಿದ್ದರು ಎನ್ನುವವರ ಸಂಪೂರ್ಣ ಮಾಹಿತಿ ನೀಡುತ್ತೇನೆ’ ಎಂದು ಹೇಳಿದರು.

‘ಶಾಸಕ ಯತ್ನಾಳ ಅವರು ಹುಚ್ಚರ ಹಾಗೆ ಮಾತನಾಡುತ್ತಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ’ ಎಂದು ಮುಸ್ಲಿಂ ಮುಖಂಡ ಎ.ಎಂ. ಹಿಂಡಸಗೇರಿ ಆಕ್ರೋಶ ವ್ಯಕ್ತಪಡಿಸಿದರು.

‘ಯತ್ನಾಳ ಅವರು ತಮ್ಮ ಪಕ್ಷದವರ ಬಗ್ಗೆಯೇ ಅಗೌರವಾಗಿ ಮಾಡತನಾಡುತ್ತ, ಸುಳ್ಳುಸುದ್ದಿ ಹಬ್ಬಿಸುತ್ತಾರೆ. ರಾಜಕೀಯವಾಗಿ ಏನೇ ಮಾತನಾಡಲಿ. ಆದರೆ, ಧಾರ್ಮಿಕವಾಗಿ ಇಂತಹ ಮಾತುಗಳನ್ನು ಯಾರೂ ಆಡಬಾರದು. ಸರ್ಕಾರದ ಹಿರಿಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದ್ದ ಧಾರ್ಮಿಕ ಕಾರ್ಯಕ್ರಮವದು. ಸಾವಿರಾರು ಮಂದಿ, ಎಲ್ಲ ಧರ್ಮದವರು ಅಲ್ಲಿ ಕೂಡಿದ್ದರು. ಇಂತಹ ಸಮಾವೇಶಕ್ಕೆ ಪ್ರೋತ್ಸಾಹ ನೀಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT