ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೀಮನ್‌ ಸ್ಮಾರಕ ನಿರ್ಮಿಸಬೇಕು: ಬೊಮ್ಮಾಯಿ

Published 21 ಫೆಬ್ರುವರಿ 2024, 16:19 IST
Last Updated 21 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಫಾಲಿ ಎಸ್‌. ನರೀಮನ್‌ ಅವರು ಕನ್ನಡ ನಾಡಿಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ಸ್ಮಾರಕ ನಿರ್ಮಿಸಬೇಕು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಕಾವೇರಿ, ಕೃಷ್ಣಾ ನದಿ ವಿವಾದ ಆರಂಭವಾದಂದಿನಿಂದ ಸುಮಾರು 40ರಿಂದ 45 ವರ್ಷಗಳ ಕಾಲ ಅವರು ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ರಾಜ್ಯವನ್ನು ಪಾರು ಮಾಡಿದ್ದಾರೆ. ಸರಳ ವ್ಯಕ್ತಿತ್ವದ ಅವರು ನ್ಯಾಯಮೂರ್ತಿಗಳನ್ನೂ ಮೀರಿಸಿದ ಕಾನೂನು ಪಂಡಿತರಾಗಿದ್ದರು. ರಾಜ್ಯದ ಹಿತಾಸಕ್ತಿಯನ್ನು ಅವರು ಎಂದಿಗೂ ಬಿಟ್ಟುಕೊಟ್ಟಿಲ್ಲ’ ಎಂದು ಬಣ್ಣಿಸಿದರು.

ಗೃಹ ಸಚಿವ ಜಿ. ಪರಮೇಶ್ವರ, ‘ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ 2018ರಲ್ಲಿ ಐತಿಹಾಸಿಕ ತೀರ್ಪು ಹೊರಬಿದ್ದಿತು. ಇದರಿಂದ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರು ಲಭಿಸಿತು. ಇದಕ್ಕೆ ನರೀಮನ್‌ ಅವರ ಸುದೀರ್ಘ ವಾದ ಮಂಡನೆಯೇ ಕಾರಣ. ನ್ಯಾಯಾಂಗ ಕ್ಷೇತ್ರದ ಪಂಡಿತರಾಗಿದ್ದ ಅವರು ಹಲವು ಸಂದರ್ಭಗಳಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶಿಸಿದ್ದರು’ ಎಂದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ನರೀಮನ್‌ ಅವರು ಮೇಧಾವಿಯಾಗಿದ್ದರು. ಜಲ ವಿವಾದಗಳಲ್ಲಿ ನಾಲ್ಕು ದಶಕಗಳ ಕಾಲ ರಾಜ್ಯದ ಪರವಾಗಿ ಸಮರ್ಥ ವಾದ ಮಂಡಿಸಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದರು. ಹೆಚ್ಚು ಶುಲ್ಕ ಪಡೆಯುತ್ತಿರುವ ಬಗ್ಗೆ ಟೀಕೆಗಳು ಕೇಳಿಬಂದಾಗ ನ್ಯಾಯಾಲಯದಲ್ಲಿ ರಾಜ್ಯದ ಪರವಾಗಿ ವಾದಿಸುವುದಿಲ್ಲವೆಂದು ಕೋಪಗೊಂಡಿದ್ದರು. ಆಗ ನಾನು ಅವರ ಮನೆಗೆ ಹೋಗಿ ಮಮನವೊಲಿಸಿದ್ದೆ. ಆ ನಂತರ ‌ವಾದಿಸಲು ಒಪ್ಪಿಕೊಂಡಿದ್ದರು’ ಎಂದು ನೆನಪಿಸಿಕೊಂಡರು.

ಕಾನೂನು ಸಚಿವ ಸಚಿವ ಎಚ್‌.ಕೆ. ಪಾಟೀಲ, ಬಿಜೆಪಿಯ‌ ಎಸ್‌. ಸುರೇಶ್‌ಕುಮಾರ್‌, ಕಾಂಗ್ರೆಸ್‌ನ ಎ.ಎಸ್‌. ಪೊನ್ನಣ್ಣ ಅವರು ನರೀಮನ್‌ ಜೊತೆಗಿನ ಒಡನಾಟವನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT