ಬೆಂಗಳೂರು: ನಿರಂತರ ಜನಸಂಪರ್ಕದ ಮೂಲಕ ಬಿಜೆಪಿ ವಿಚಾರಧಾರೆಯ ವಿಸ್ತರಣೆಯಾಗಬೇಕು. ಗ್ರಾಮೀಣ ಪ್ರದೇಶದ ಮೂಲೆಗಳಲ್ಲೂ ಪಕ್ಷದ ಬಾವುಟ ಹಾರಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಿತುರಾಜ್ ಸಿನ್ಹಾ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಬಿಜೆಪಿ ಸೆ.1ರಿಂದ ಆರಂಭವಾಗುವ ಸದಸ್ಯತ್ವ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಷ್ಟ್ರ ಮೊದಲು ಎನ್ನುವುದು ಬಿಜೆಪಿಯ ಧ್ಯೇಯ. ದೀನ್‍ದಯಾಳ್ ಉಪಾಧ್ಯಾಯರ ಮೂಲ ತತ್ವಗಳೊಂದಿಗೆ ಪಕ್ಷ ಮುನ್ನಡೆಯುತ್ತಿದೆ. 90ರ ದಶಕದಲ್ಲಿ ಅತ್ಯಂತ ಕಡಿಮೆ ಸದಸ್ಯರನ್ನು ಹೊಂದಿದ್ದ ಪಕ್ಷ ಇಂದು ದೇಶದಲ್ಲೇ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ದಕ್ಷಿಣ ಭಾರತದಲ್ಲೂ ಅತಿ ಹೆಚ್ಚು ಸದಸ್ಯತ್ವ ಹೊಂದುವಂತೆ ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು. ಕರ್ನಾಟಕ ಮೊದಲ ಸ್ಥಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹೊಸ ಸದಸ್ಯರನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ಸಿದ್ಧಾಂತ ಆಧಾರಿತ ಪಕ್ಷವಾದ ಬಿಜೆಪಿ ತನ್ನ ತತ್ವ, ಸಿದ್ಧಾಂತಗಳಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. ಕೊಟ್ಟ ಮಾತು ತಪ್ಪಿಲ್ಲ. ಮೂರು ದಶಕಗಳ ಹಿಂದೆ ಆರಂಭಿಸಿದ ರಾಮಮಂದಿರ ಆಂದೋಲನವನ್ನು 2024ರಲ್ಲಿ ಸಾಕಾರಗೊಳಿಸಿದೆ. ಕಾಶ್ಮೀರಕ್ಕೆ ನೀಡಿದ್ದ ಪ್ರತ್ಯೇಕ ಸ್ಥಾನಮಾನ ರದ್ದು ಮಾಡಿದೆ. ಒಂದು ರಾಷ್ಟ್ರ–ಒಂದು ಚುನಾವಣೆಯ ಧ್ಯೇಯವನ್ನು ಸಾಕಾರ ಮಾಡುತ್ತದೆ. ಭಾರತವನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ವಿಶ್ವಗುರುವಾಗಿಸಲಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಈಗಾಗಲೇ ರಾಷ್ಟ್ರಮಟ್ಟದ ಕಾರ್ಯಾಗಾರ, ಹಲವಾರು ರಾಜ್ಯಗಳಲ್ಲಿ ಕಾರ್ಯಾಗಾರಗಳು ನಡೆದಿವೆ. ಬೂತ್‌ಮಟ್ಟದಲ್ಲಿ ಪಕ್ಷವನ್ನು ಭದ್ರಪಡಿಸುವುದೇ ಪ್ರಮುಖ ಆದ್ಯತೆ. ಅದಕ್ಕಾಗಿ ಪ್ರತಿ ಕಾರ್ಯಕರ್ತರಿಗೂ ಗುರಿ ನಿಗದಿ ಮಾಡಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಮಿಸ್‍ಡ್ ಕಾಲ್’ ಮೂಲಕಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಸಂಖ್ಯೆ (8800002024) ಹಾಗೂ ಅಭಿಯಾನದ ಲೋಗೊ ಬಿಡುಗಡೆ ಮಾಡಿದರು.
ರಾಜ್ಯ ಸಹ ಪ್ರಭಾರಿ ಸುಧಾಕರ ರೆಡ್ಡಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್ ರೆಡ್ಡಿ, ಪಿ.ರಾಜೀವ್, ಸುನಿಲ್ ಕುಮಾರ್, ಪ್ರೀತಂ ಗೌಡ, ಶಾಸಕರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಮಹೇಶ್ ಟೆಂಗಿನಕಾಯಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸಂಸದ ಪಿ.ಸಿ.ಮೋಹನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.