ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮುಖಗಳ ಪ‍್ರಯೋಗ ಸಫಲವಾಗಲಿಲ್ಲ: ಬಿಜೆಪಿ ಸೋಲಿನ ಪರಾಮರ್ಶೆ ಮಾಡಿದ ಬಸವರಾಜ ಬೊಮ್ಮಾಯಿ

Published 5 ಜೂನ್ 2023, 14:17 IST
Last Updated 5 ಜೂನ್ 2023, 14:17 IST
ಅಕ್ಷರ ಗಾತ್ರ

ಬೆಳಗಾವಿ: ‘ಟಿಕೆಟ್‌ ಘೋಷಣೆಯಲ್ಲಿ ಮಾಡಿದ ವಿಳಂಬ ಹಾಗೂ ಹೊಸಬರಿಗೆ ಟಿಕೆಟ್‌ ನೀಡಿದ್ದು ಸರಿಯಾಗಿ ಸಂಯೋಜನೆ ಆಗಲಿಲ್ಲ. ಹೀಗಾಗಿ, ರಾಜ್ಯದಲ್ಲಿ ಬಿಜೆಪಿಗೆ ಸೋಲಾಗಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿಯ ಶಾಸಕರು, ಪರಾಜಿತ ಅಭ್ಯರ್ಥಿಗಳು ಹಾಗೂ ಮುಖಂಡರೊಂದಿಗೆ ಸೋಲಿನ ಪರಾಮರ್ಶೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಸೋಲಿಗೆ ಸ್ಥಳೀಯವಾಗಿಯೂ ಕೆಲವು ಕಾರಣಗಳು ಆಯಾ ಜಿಲ್ಲೆಯಲ್ಲಿ ಇವೆ. ಆದರೆ, ಇಡೀ ರಾಜ್ಯದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಯ ಸೋಲಿನ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಬರುವ ಕೆಲವೇ ಕ್ಷಣಗಳ ಮುಂಚೆಯೇ ನಾನು ಹೊಣೆ ಹೊತ್ತಿದ್ದೇನೆ’ ಎಂದೂ ಅವರು ಹೇದರು.

‘ಜನರು ಬಿಜೆಪಿಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ. ಜನರ ಧ್ವನಿಯಾಗಿ ನಾವು ಸಮರ್ಥವಾಗಿ ನಮ್ಮ ಜವಾಬ್ದಾರಿ ನಿಭಾಯಿಸುತ್ತೇವೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೊಸ ಮುಖಗಳ ಪ‍್ರಯೋಗ ಸಫಲವಾಗಲಿಲ್ಲ: ಬಿಜೆಪಿ ಸೋಲಿನ ಪರಾಮರ್ಶೆ ಮಾಡಿದ ಬಸವರಾಜ ಬೊಮ್ಮಾಯಿ

‘ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಿಗೆ ಆದಾಯ ಮೂಲ ಯಾವುದು ಎಂದೇ ಹೇಳಿಲ್ಲ. ಆದರೂ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಹಣವನ್ನು ಎಲ್ಲಿಂದ ತರುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಹೇಳುತ್ತಾರೋ ಕಾಯುತ್ತಿದ್ದೇನೆ. ತಮ್ಮ ಗ್ಯಾರಂಟಿಗಳ ಜಾರಿಗಾಗಿ ಜನರ ಮೇಲೆ ಹೊರೆ ಹೇರಿದರೆ, ಅಥವಾ ಹಳೆಯ ನಮ್ಮ ಯೋಜನೆಗಳನ್ನು ಸ್ಥಗಿತ ಮಾಡಿದರೆ ಬಿಜೆಪಿ ಸಹಿಸುವುದಿಲ್ಲ. ಬೀದಿಗಿಳೀದ ಹೋರಾಟ ಮಾಡಬೇಕಾಗುತ್ತದೆ’ ಎಂದೂ ಅವರು ಎಚ್ಚರಿಸಿದರು.

‘ಸಂಪುಟದಲ್ಲಿ ಲಿಂಗಾಯತ ಸಮುದಾಯದ ಕಡೆಗಣನೆ ಆಗಿದೆ’ ಎಂದು ಶಾಸಕ ವಿನಯ ಕುಲಕರ್ಣಿ ಅಸಮಾಧಾನಗೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅವರು ನಿಜ ಹೇಳಿದ್ದಾರೆ. ಇದು ಕಾಂಗ್ರೆಸ್ ಆಂತರಿಕ ವಿಚಾರ. ಆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈ ಸಲ ಲಿಂಗಾಯತ ಸಮುದಾಯದ ಹೆಚ್ಚಿನ ಶಾಸಕರು ಗೆದ್ದಿದ್ದಾರೆ. ಸಂಪುಟದಲ್ಲಿ ಇನ್ನೂ ಹೆಚ್ಚಿನ ಪ್ರತಿನಿಧಿತ್ವವನ್ನು ಲಿಂಗಾಯತ ಸಮುದಾಯಕ್ಕೆ ಕೊಡಬೇಕಿತ್ತು. ಇದು ಸಮಾನ್ಯ ಲಿಂಗಾಯತನ ಮನಸ್ಸಿನಲ್ಲಿ ಇರುವಂಥದ್ದು’ ಎಂದರು.

‘ಉಚಿತ ವಿದ್ಯುತ್‌ ನೀಡುವ ವಿಚಾರದಲ್ಲಿ ಸರ್ಕಸ್‌ ಮಾಡುತ್ತಿದ್ದಾರೆ. ಹಳೆಯ ಬಾಕಿಗಳನ್ನೆಲ್ಲ ತೆಗೆದು ವಸೂಲಿಗೆ ನಿಂತಿದ್ದಾರೆ. ತಮಗೆ ಎಷ್ಟು ವಿದ್ಯುತ್‌ ಬೇಕೋ ಅಷ್ಟು ಬಳಸಿಕೊಳ್ಳುವುದು ಜನರಿಗೆ ಬಿಟ್ಟ ಅಧಿಕಾರ. ಸರಾಸರಿ ಲೆಕ್ಕಾಚಾರಕ್ಕಾಗಿ ಜನರು ಬಳಸುವ ವಿದ್ಯುತ್‌ ಮೇಲೂ ಸರ್ಕಾರ ಹಿಡಿತ ಸಾಧಿಸಬಾರದು’ ಎಂದರು.

ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಗ್ರಾಮಾಂತರ ಜಿಲ್ಲೆ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಶಾಸಕರಾದ ಅಭಯ ಪಾಟೀಲ, ವಿಠ್ಠಲ ಹಲಗೇಕರ, ದುರ್ಯೋಧನ ಐಹೊಳೆ, ನಿಖಿಲ್‌ ಕತ್ತಿ ಹಾಗೂ ಚುನಾವಣೆಯಲ್ಲಿ ಸೋಲುಂಡ ಕೆಲವು ಅಭ್ಯರ್ಥಿಗಳೂ ಇದ್ದರು.

ಶಾಸಕರಾದ ರಮೇಶ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಬಾಲಚಂದ್ರ ಜಾರಕಿಹೊಳಿ ಸಭೆಗೆ ಗೈರಾದರು.

ಹೊಸ ಮುಖಗಳ ಪ‍್ರಯೋಗ ಸಫಲವಾಗಲಿಲ್ಲ: ಬಿಜೆಪಿ ಸೋಲಿನ ಪರಾಮರ್ಶೆ ಮಾಡಿದ ಬಸವರಾಜ ಬೊಮ್ಮಾಯಿ

‘ಲೋಕಸಭೆ ಚುನಾವಣೆಗೆ ಸಿದ್ಧತೆ’

‘ವಿಧಾಸನಭೆ ಚುನಾವಣೆಯಲ್ಲಿ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದಿದೆ. ಮುಂಬರುವ ದಿನಗಳಲ್ಲಿ ನಮಗೆ ಜನ ಮನ್ನಣೆ ನೀಡಲಿದ್ದಾರೆ. ಲೋಕಸಭಾ ಚುನಾವಣೆಗೆ ಇಂದಿನಿಂದಲೇ ತಯಾರಿ ಆರಂಭಿಸಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಬೆಳಗಾವಿ ಜಿಲ್ಲೆಯ ಹಿರಿಯರು, ಸಂಸತ್ ಸದಸ್ಯರು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಸೋಮವಾರ್ ಸಭೆ ನಡೆಸಿದ್ದೇನೆ. ಸೋಲಿನ ಪರಾಮರ್ಶೆ‌ ಮಾಡಿದ್ದೇನೆ. ಸೋಲಲು ಸ್ಥಳೀಯ ಕಾರಣವೋ ಬೇರೆ ಯಾವುದಾದರೂ ಕಾರಣ ಇದೆಯೋ ಎಂದು ತಿಳಿಯಲು ಈ ಸಭೆ ಮಾಡಿದ್ದೇನೆ. ಜತೆಗೆ, ಲೋಕಸಭೆ ಚುನಾವಣೆಗೆ ಮತ್ತೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದೂ ಅವರು ಮಧ್ಯಮದವರಿಗೆ ಉತ್ತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT