ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌ ವೈದ್ಯರ ಸಮಸ್ಯೆ ನಿವಾರಣೆಗೆ ತಜ್ಞರ ಸಮಿತಿ: ಡಾ.ಕೆ. ಸುಧಾಕರ್‌

Last Updated 28 ಮಾರ್ಚ್ 2022, 17:31 IST
ಅಕ್ಷರ ಗಾತ್ರ

ಬೆಂಗಳೂರು: ಒಂದೇ ಸೂರಿನಡಿ ಆಯುಷ್‌ ವೈದ್ಯ ಪದ್ಧತಿಯ ಎಲ್ಲ ವಿಭಾಗಗಳ ಸೇವೆಯನ್ನೂ ಒದಗಿಸಲು ಅವಕಾಶ ಕಲ್ಪಿಸುವುದಕ್ಕೆ ಇರುವ ತೊಡಕುಗಳನ್ನು ನಿವಾರಿಸಲು ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ದೇಸೀಯ ಪರಂಪರೆಯ ಆಯುರ್ವೇದ ವೈದ್ಯ ಪದ್ಧತಿಗೆ ಮನ್ನಣೆ ದೊರಕಿಸಿಕೊಡಲು ನೀತಿಯೊಂದನ್ನು ರೂಪಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಮಂಡಿಸಿದ್ದ ಖಾಸಗಿ ನಿರ್ಣಯದ ಮೇಲಿನ ಚರ್ಚೆಗೆ ಸೋಮವಾರ ಸದನದಲ್ಲಿ ಉತ್ತರಿಸಿದ ಸಚಿವರು ಈ ಭರವಸೆ ನೀಡಿದರು.

‘ಒಂದೇ ಸೂರಿನಡಿ ಆಯುಷ್‌ ವಿಭಾಗದ ಹಲವು ಸೇವೆಗಳನ್ನು ಒದಗಿಸಲು ಹಿಂದೆ ಅವಕಾಶವಿತ್ತು. ಆದರೆ, ಒಂದೇ ಸೇವೆ ಒದಗಿಸಬೇಕೆಂಬ ನಿರ್ಬಂಧ ವಿಧಿಸಿ 2018ರಲ್ಲಿ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದನ್ನು 2020ರಲ್ಲಿ ಹಿಂಪಡೆಯಲಾಗಿದೆ. ಕಾಯ್ದೆ ಹಿಂಪಡೆದು ಎರಡು ವರ್ಷಗಳಾದರೂ ಒಂದೇ ಸೂರಿನಡಿ ಆಯುಷ್‌ ವಿಭಾಗದ ವಿವಿಧ ಸೇವೆಗಳನ್ನು ಒದಗಿಸಲು ನೋಂದಣಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಆಯುಷ್‌ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ವೆಂಕಟೇಶ್‌ ದೂರಿದರು.

ನೋಂದಣಿ ಸೇರಿದಂತೆ ಆಯುಷ್‌ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ನೇಮಕ ಮಾಡಲಾಗುವುದು. ಒಂದು ತಿಂಗಳೊಳಗೆ ವರದಿ ಪಡೆದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಉತ್ತರಿಸಿದರು.

‘ಆಯುಷ್‌ ವೈದ್ಯ ಪದ್ಧತಿಗಳ ಕುರಿತು ಕೇಂದ್ರ ಸರ್ಕಾರವೇ ನೀತಿ ರೂಪಿಸಿದೆ. ರಾಜ್ಯದಲ್ಲಿ ಪ್ರತ್ಯೇಕ ನೀತಿ ರೂಪಿಸಲು ಅವಕಾಶವಿಲ್ಲ. ರಾಜ್ಯದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಸೀಯ ಪಾರಂಪರಿಕ ವೈದ್ಯರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಕಾನೂನಿನ ವ್ಯಾಪ್ತಿಯಲ್ಲಿ ಮನ್ನಣೆ ನೀಡಬೇಕು. ಆಯುಷ್‌ ವೈದ್ಯರಿಗೂ ಹಲವು ಸಮಸ್ಯೆಗಳಿವೆ. ಅವುಗಳನ್ನೂ ಪರಿಹರಿಸಬೇಕು’ ಎಂದು ವೆಂಕಟೇಶ್ ಒತ್ತಾಯಿಸಿದರು.

ಬಿಜೆಪಿಯ ಭಾರತಿ ಶೆಟ್ಟಿ, ರುದ್ರೇಗೌಡ, ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಸೇರಿದಂತೆ ಹಲವರು ವೆಂಕಟೇಶ್‌ ಅವರ ಆಗ್ರಹವನ್ನು ಬೆಂಬಲಿಸಿ ಮಾತನಾಡಿದರು.

ಪಾರಂಪರಿಕ ವೈದ್ಯರಿಗೆ ಕಾನೂನಿನ ಮಾನ್ಯತೆ ನೀಡಲು ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಅದನ್ನು ಮೀರಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು. ಆರೋಗ್ಯ ಸಚಿವರ ಭರವಸೆಯ ಕಾರಣದಿಂದ ವೆಂಕಟೇಶ್‌ ಖಾಸಗಿ ನಿರ್ಣಯವನ್ನು ವಾಪಸ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT