ಕಾಲೇಜಿಗೆ ಹೋಗದೆ ಅಗತ್ಯ ಹಾಜರಿ ಇಲ್ಲದೆ ಹಣ ಕಟ್ಟಿ ನಕಲು ಪ್ರಮಾಣ ಪತ್ರ ಪಡೆದು ಬರುತ್ತಿರುವವರೇ ಹೆಚ್ಚಾಗಿ ನಕಲಿ ವಕೀಲರ ಪಟ್ಟಿಯಲ್ಲಿದ್ದಾರೆ. ಇಂಥವರು ಮತ್ತೊಬ್ಬ ನೋಂದಾಯಿತ ವಕೀಲರ ಸಂಖ್ಯೆಯನ್ನು ಪಡೆದು ಅವರ ಹೆಸರಿನಲ್ಲಿ ವಕಾಲತ್ ನಾಮೆ ಸಲ್ಲಿಸಿ ವಕೀಲಿಕೆ ನಡೆಸುತ್ತಿರುವುದೂ ಕಂಡುಬಂದಿದೆ. ಇದನ್ನು ನಿಯಂತ್ರಿಸಲು ಸೂಕ್ತ ಕ್ರಿಯಾ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ.
ಎಂ.ದೇವರಾಜ, ಸನ್ನದು ದಾಖಲಾತಿ ಸಮಿತಿ ಮಾಜಿ ಅಧ್ಯಕ್ಷ
ಬಿಸಿಐ (ಭಾರತೀಯ ವಕೀಲರ ಪರಿಷತ್) ನಿಯಮಗಳಿಗೆ ಅನುಸಾರವಾಗಿ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಂದ ಎಲ್‌ಎಲ್‌ಬಿ ಪದವಿ ಪ್ರಮಾಣ ಪತ್ರ ಪಡೆದುಕೊಂಡಿದ್ದರೆ ಅಂಥವರು ದೇಶದ ಯಾವುದೇ ರಾಜ್ಯದಲ್ಲಿ ಸ್ಥಳೀಯ ವಿಳಾಸದೊಂದಿಗೆ ಸನ್ನದು ನೋಂದಾಯಿಸಬಹುದು. ಈ ಕುರಿತಂತೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಹಲವು ಪೂರ್ವನಿರ್ಣಯಗಳೂ ಇವೆ. ಹೀಗಾಗಿ ಸನ್ನದು ದಾಖಲು ಮಾಡಿಕೊಳ್ಳುವುದನ್ನು ತಿರಸ್ಕರಿಲು ಆಗದು. ಆದಾಗ್ಯೂ ನಕಲಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಅನಿವಾರ್ಯ.