ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇರಿಗೆ ಹಾಲು; ರೈತರಿಗೆ ಗೋಳು- ದುಬಾರಿಯಾದ ಪಶು ಆಹಾರ, ಹಸುಗಳಿಗೆ ಕಾಡುವ ರೋಗ

ದುಬಾರಿಯಾದ ಪಶು ಆಹಾರ, ಮೇವು: ಹಸುಗಳಿಗೆ ಆಗಾಗ ಕಾಡುವ ರೋಗ
Last Updated 11 ಏಪ್ರಿಲ್ 2023, 1:15 IST
ಅಕ್ಷರ ಗಾತ್ರ

ಬೆಂಗಳೂರು: ಮೇವು–ಪಶು ಆಹಾರದ ಬೆಲೆ ದುಪ್ಪಟ್ಟು, ಹೆಚ್ಚಳವೇ ಆಗದ ಹಾಲಿನ ದರ, ಹಸುಗಳಿಗೆ ಆಗಾಗ ಕಾಡುವ ರೋಗ... ಇದರ ಜತೆಗೆ ಏರುಗತಿಯಲ್ಲೇ ಇರುವ ನಿರ್ವಹಣಾ ವೆಚ್ಚದಿಂದಾಗಿ ಹೈನುಗಾರಿಕೆ ಮಾಡುವ ರೈತರಿಗೆ ಕೊನೆಯಲ್ಲಿ ಉಳಿಯುವುದು ಹಸುಗಳ ಸಗಣಿ ಮಾತ್ರ...!

ಹೌದು, ಕೆಎಂಎಫ್‌ ಅಡಿಯಲ್ಲಿರುವ ಹಾಲು ಒಕ್ಕೂಟಗಳನ್ನು ನಂಬಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಅಕ್ಷರಶಃ ಹೈರಾಣಾಗಿದ್ದಾರೆ. ಹೈನುಗಾರಿಕೆಯಿಂದ ನಿಧಾನವಾಗಿ ವಿಮುಖವಾಗುತ್ತಿದ್ದು, ಕೆಎಂಎಫ್‌ಗೆ ಬರುತ್ತಿರುವ ಹಾಲಿನ ಪ್ರಮಾಣವೂ ಕಡಿಮೆಯಾಗುತ್ತಿದೆ.

‍ಪಶು ಆಹಾರದ (ನಂದಿನಿ ಗೋಲ್ಡ್ ಟೈಪ್-1) ದರ ಕೋವಿಡ್‌ ಪೂರ್ವದಲ್ಲಿ 50 ಕೆ.ಜಿ ತೂಕದ ಚೀಲಕ್ಕೆ ₹650 ಇತ್ತು. ಈಗ ₹1,190ಕ್ಕೆ ಏರಿಕೆಯಾಗಿದೆ. ಬೈಪಾಸ್ ಪಶು ಆಹಾರದ ಬೆಲೆ 50 ಕೆ.ಜಿ ತೂಕದ ಚೀಲಕ್ಕೆ ₹1,240 ಇದೆ. ಹಾಲಿನ ಇಳುವರಿ ಬಯಸುವ ರೈತರು ಈ ಎರಡು ಪಶು ಆಹಾರಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರ ಜತೆಗೆ ಖನಿಜ ಮಿಶ್ರಣ, ಯೂರಿಯಾ ಕಾಕಂಬಿ ನೆಕ್ಕುಬಿಲ್ಲೆಯನ್ನೂ ಅಲ್ಪ ಪ್ರಮಾಣದಲ್ಲಿ ಬಳಸುತ್ತಾರೆ.

ಬೇಸಿಗೆಯಲ್ಲಿ ಮೇವಿನ ಕೊರತೆಯೂ ರೈತರನ್ನು ಕಾಡುತ್ತದೆ. ತೆನೆ ಮಿಶ್ರಿತ ಜೋಳದ ಮೇವು ಟನ್‌ಗೆ ₹3 ಸಾವಿರಕ್ಕೂ ಹೆಚ್ಚಿದೆ. ಇವೆಲ್ಲವನ್ನೂ ಖರೀದಿ ಮಾಡಿ ಹಸುಗಳನ್ನು ಸಲಹಿ ಹಾಲು ಕರೆಯುವಷ್ಟರಲ್ಲಿ ರೈತ ರೋಸಿ ಹೋಗುತ್ತಾನೆ. ಎರಡಕ್ಕೂ ಹೆಚ್ಚು ‌ಹಸುಗಳನ್ನು ಸಾಕಿದರೆ ಬೇರಾವ ಕೆಲಸ ಮಾಡದೆ ಇವುಗಳ ನಿರ್ವಹಣೆಯಲ್ಲೇ ಮುಳುಗಬೇಕು.

ಹಾಲು ಕರೆದು ಡೇರಿಗೆ ತಲುಪಿಸಿ ಸುಸ್ತಾಗುವ ರೈತನಿಗೆ ಹದಿನೈದು ದಿನಕ್ಕೊಮ್ಮೆಯೋ, ತಿಂಗಳಿಗೊಮ್ಮೆಯೋ ಹಣ ಸಂದಾಯವಾಗುತ್ತದೆ. ಲೀಟರ್‌ಗೆ ₹31ರಿಂದ ₹34ರವರೆಗೆ ದರ ಇದೆ. ಕೆಲವು ಒಕ್ಕೂಟಗಳು ₹29 ದರ ನೀಡುತ್ತಿವೆ. ಸರ್ಕಾರದಿಂದ ₹5 ‍ಪ್ರೋತ್ಸಾಹಧನ ದೊರೆಯುತ್ತಿದೆ. ಮಾಡಿರುವ ಖರ್ಚಿಗೆ ತಾಳೆ ಮಾಡಿದರೆ ಬಿಡಿಗಾಸು ಉಳಿಯುತ್ತಿಲ್ಲ ಎಂಬುದು ರೈತರ ಅಳಲು.

‘ನಾಲ್ಕು ಹಸುಗಳನ್ನು ಸಾಕಿದ್ದೇವೆ. ಗಂಡ–ಹೆಂಡತಿ ಇಬ್ಬರೂ ಇದೇ ಕೆಲಸದಲ್ಲಿ ಮುಳುಗಿದ್ದೇವೆ. ಪಶು ಆಹಾರದ ಬೆಲೆ ಎರಡು ಪಟ್ಟು ಹೆಚ್ಚಾಗಿದೆ, 50 ಕೆ.ಜಿ ತೂಕದ ಚೀಲ ನಾಲ್ಕೇ ದಿನಕ್ಕೆ ಖಾಲಿಯಾಗುತ್ತದೆ. ಇದರೊಂದಿಗೆ ನಮ್ಮದೇ ಜಮೀನಿನಲ್ಲಿ ಬೆಳೆದ ಮೇವು, ಖರೀದಿ ಮಾಡಿ ತರುವ ಮೇವು ಎಲ್ಲವನ್ನೂ ಲೆಕ್ಕಾಚಾರ ಮಾಡಿದರೆ ವರ್ಷದ ಕೊನೆಯಲ್ಲಿ ನಮಗೆ ಉಳಿಯುವುದು ಸಗಣಿ ಮಾತ್ರ’ ಎಂದು ಮಂಡ್ಯ ಜಿಲ್ಲೆಯ ಬಸವನಹಳ್ಳಿ ಗ್ರಾಮದ ಪುಟ್ಟಮ್ಮ ಹೇಳುತ್ತಾರೆ.

‘ಸಗಣಿ ನಮ್ಮ ಜಮೀನಿಗೆ ಗೊಬ್ಬರವಾಗಿ ಉಳಿಯುತ್ತದೆ ಎಂಬ ಒಂದೇ ಕಾರಣಕ್ಕೆ ಹೈನುಗಾರಿಕೆ ಮಾಡುತ್ತಿದ್ದೇವೆ. ಸರ್ಕಾರದಿಂದ ಕೊಡುವ ₹5 ಪ್ರೋತ್ಸಾಹಧನ ಮೂರು ತಿಂಗಳಿಗೋ, ಆರು ತಿಂಗಳಿಗೋ ಒಮ್ಮೆ ಬ್ಯಾಂಕ್
ಖಾತೆಗೆ ಬರುತ್ತಿದೆ. ಅದನ್ನು ನಂಬಿಕೊಂಡು ಸಾಲ ಮಾಡಿದರೆ ಬಡ್ಡಿಗೂ ಸಾಕಾಗುವುದಿಲ್ಲ’ ಎಂದು ಅವರು ವಿವರಿಸುತ್ತಾರೆ.

‘ಹಾಲು ಕರೆಯುವ ದಿನಗಳಲ್ಲಿ ಮಾತ್ರವಲ್ಲ, ವರ್ಷವಿಡೀ ಮೇವು ಒದಗಿಸಿ ಸಾಕಾಣಿಕೆ ಮಾಡಬೇಕು. ರೋಗ ಬಾಧೆಯೂ ಇನ್ನಿಲ್ಲದೆ ಕಾಡುತ್ತದೆ. ಕೆಚ್ಚಲಬಾವು, ಚರ್ಮಗಂಟು ರೋಗವು ರೈತರನ್ನು ನಲುಗುವಂತೆ ಮಾಡಿದೆ. ಪಶುವೈದ್ಯ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇದೆ. ಖಾಸಗಿ ವೈದ್ಯರನ್ನು ಕರೆತಂದರೆ ಚಿಕಿತ್ಸೆಗೆ ಕನಿಷ್ಠ ₹2 ಸಾವಿರ ಬೇಕು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಹಸುಗಳು ಬದುಕುಳಿಯುವುದಿಲ್ಲ. ₹70ಸಾವಿರಕ್ಕೆ ಖರೀದಿ ಮಾಡಿದ್ದ ಜರ್ಸಿ ಹಸು ಕಳೆದ ತಿಂಗಳಷ್ಟೇ ರೋಗಕ್ಕೆ ತುತ್ತಾಯಿತು. ಈ ನಷ್ಟವನ್ನು ಯಾರ ಬಳಿ ಕೇಳಬೇಕು’ ಎಂದು ರೈತ ವಾಸುದೇವ ಪ್ರ‌ಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT