ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳು:656 ಹುದ್ದೆಗೆ ಕೋರಿಕೆ– 504 ಭರ್ತಿಗೆ ಸಮ್ಮತಿ

Published 16 ಡಿಸೆಂಬರ್ 2023, 20:44 IST
Last Updated 16 ಡಿಸೆಂಬರ್ 2023, 20:44 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ 16 ಇಲಾಖೆಗಳು ಖಾಲಿ ಇರುವ ಕೆಎಎಸ್‌ ಸೇರಿದಂತೆ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ 656 ಹುದ್ದೆಗಳ ನೇರ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಈ ಪೈಕಿ 504 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಮ್ಮತಿ ನೀಡಿದೆ.

ಆದರೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಡಿಪಿಎಆರ್‌) 2023– 24ನೇ ಸಾಲಿಗೆ 276 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಪ್ರಸ್ತಾವ ಸಲ್ಲಿಸಲು ಮುಂದಾಗಿದೆ. ಆರ್ಥಿಕ ಇಲಾಖೆ ಹೆಚ್ಚು ಹುದ್ದೆಗಳ ಭರ್ತಿಗೆ ಸಹಮತಿ ಸೂಚಿಸಿದರೂ ನೇಮಕಾತಿಗೆ ಡಿಪಿಎಆರ್‌ ಹಿಂದೇಟು ಹಾಕುತ್ತಿದೆ ಎಂದು ಹುದ್ದೆ ಆಕಾಂಕ್ಷಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

3 ವರ್ಷಗಳಲ್ಲಿ ಕೆಎಎಸ್‌ 15 ಹುದ್ದೆ ಭರ್ತಿ: ಕಳೆದ ಮೂರು ವರ್ಷಗಳಲ್ಲಿ 15 ಅಭ್ಯರ್ಥಿಗಳನ್ನು (2011ನೇ ಸಾಲಿನ ಅಧಿಸೂಚನೆ) ಕೆಎಎಸ್‌ (ಕಿರಿಯ ಶ್ರೇಣಿ) ಹುದ್ದೆಗೆ ಹಾಗೂ 80 ಅಭ್ಯರ್ಥಿಗಳನ್ನು (2020ನೇ ಸಾಲಿನ ಅಧಿಸೂಚನೆ) ತಹಶೀಲ್ದಾರ್‌ ಗ್ರೇಡ್‌–2 ಹುದ್ದೆಗೆ  ನೇಮಕಾತಿ ಮಾಡಲಾಗಿದೆ. ಸದ್ಯ ಖಾಲಿ ಇರುವ ಕೆಎಎಸ್‌ (ಕಿರಿಯ ಶ್ರೇಣಿ) ಹುದ್ದೆಗಳನ್ನು ಮತ್ತು ತಹಶೀಲ್ದಾರ್ ಗ್ರೇಡ್‌–2 ವೃಂದದ ಖಾಲಿ ಹುದ್ದೆಗಳ ಪೈಕಿ ಒಟ್ಟು 76 ಹುದ್ದೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ (2023–24, 2024–25 ಮತ್ತು 2025–26) ತಲಾ 25 ಹುದ್ದೆಗಳಂತೆ ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಅದರ ಅನ್ವಯ ಡಿಪಿಎಆರ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಒಟ್ಟು 143 ಅಧಿಕಾರಿಗಳಿಗೆ ತಹಶೀಲ್ದಾರ್‌ ಗ್ರೇಡ್‌–2 ವೃಂದದಿಂದ ತಹಶೀಲ್ದಾರ್‌ ಗ್ರೇಡ್‌–1 ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ. ಅಲ್ಲದೆ, 248 ಶಿರಸ್ತೇದಾರ್‌ (ಉಪ ತಹಶೀಲ್ದಾರ್‌) ವೃಂದದ ಅಧಿಕಾರಿಗಳಿಗೆ ತಹಶೀಲ್ದಾರ್‌ ಗ್ರೇಡ್‌–2 ವೃಂದಕ್ಕೆ ಮುಂಬಡ್ತಿ ನೀಡಲಾಗಿದೆ.

ಆರ್‌ಡಿಪಿಆರ್‌ನಿಂದ ಕೆಪಿಎಸ್‌ಸಿಗೆ ಪ್ರಸ್ತಾವ: ‘ಗ್ರಾಮೀಣಾಭಿವೃದ್ಧಿ  ಇಲಾಖೆಯ (ಆರ್‌ಡಿಪಿಆರ್‌) ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 832 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವೃಂದದ ಹುದ್ದೆಗಳು ಖಾಲಿ ಇದ್ದು, 256 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಪ್ರಸ್ತಾವ ಸಲ್ಲಿಕೆ ಆಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–1 ವೃಂದದ 584 ಹುದ್ದೆಗಳು ಖಾಲಿ ಇದ್ದು, 220 ಹುದ್ದೆಗಳ ಭರ್ತಿಗೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–2 ವೃಂದದ 687 ಹುದ್ದೆಗಳು ಖಾಲಿ ಇದ್ದು, 343 ಹುದ್ದೆಗಳ ಭರ್ತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ 299 ಖಾಲಿ ಹುದ್ದೆಗಳ ಪೈಕಿ 105 ಹುದ್ದೆಗಳಿಗೆ ನೇಮಕಾತಿಗೂ ಕೆಪಿಎಸ್‌ಸಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ವಿಧಾನಪರಿಷತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

‘ಸದ್ಯ, ಖಾಲಿ ಇರುವ ಪಿಡಿಒ ಹುದ್ದೆಗೆ ಸಮೀಪದಲ್ಲಿರುವ ಗ್ರಾಮ ಪಂಚಾಯಿತಿಯ ಪಿಡಿಒ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–1 ವೃಂದದ ಅಧಿಕಾರಿಗೆ ಹೆಚ್ಚುವರಿ ಪ್ರಭಾರ ವಹಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಪಿಡಿಒ ವೃಂದಕ್ಕೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌–1 ವೃಂದದ ಅರ್ಹ ನೌಕರರು ಲಭ್ಯವಾಗುವವರೆಗೆ ಜ್ಯೇಷ್ಠತೆ ಮತ್ತು ಅರ್ಹತೆಯ ಆಧಾರದಲ್ಲಿ ಮುಂಬಡ್ತಿ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT