ಮೈಸೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವ ಕಾಯ್ದೆಯ ಅಡಿ ಪ್ರಕರಣ ದಾಖಲಿಸಬೇಕು ಎಂದು ಅಭಿಪ್ರಾಯ ಕೋರಿ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರು ಕೇಂದ್ರ ಕಚೇರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಬಿಎನ್‌ಎಸ್ ಕಾಯ್ದೆಯ ಅಡಿ ಎಫ್‌ಐಆರ್ ದಾಖಲಿಸಬೇಕೆ ಅಥವಾ ಸಿಆರ್‌ಪಿಸಿ, ಐಪಿಸಿ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಬೇಕೆ ಎಂದು ಮಾಹಿತಿ ಕೋರಿ ಅವರು ಶುಕ್ರವಾರ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಪತ್ರಕ್ಕೆ ಕೇಂದ್ರ ಕಚೇರಿಯಿಂದ ಉತ್ತರ ಬಂದ ನಂತರವಷ್ಟೇ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ.
ಈ ಕುರಿತು ದೂರುದಾರ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದು, ‘ಘಟನೆ ಹಿಂದೆಯೇ ನಡೆದಿರುವುದರಿಂದ ಹಳೆಯ ನಿಯಮದ ಪ್ರಕಾರವೇ ಮೊಕದ್ದಮೆ ದಾಖಲು ಮಾಡಬೇಕಾಗುತ್ತದೆ. ನ್ಯಾಯಾಲಯ ಹಳೆಯ ನಿಯಮದ ಪ್ರಕಾರ ಮೊಕದ್ದಮೆ ದಾಖಲು ಮಾಡಲು ಆದೇಶ ನೀಡಿದೆ. ಹೀಗಿರುವಾಗ ಅಧಿಕಾರಿಗಳು ಹೊಸ ವರಸೆ ತೆಗೆದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.