ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ: ಸ್ಥಳ ಪರಿಶೀಲನೆಗೆ ಹೈಕೋರ್ಟ್‌ ನಿರ್ದೇಶನ

Published 3 ನವೆಂಬರ್ 2023, 16:23 IST
Last Updated 3 ನವೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ಪಟಾಕಿ ದಾಸ್ತಾನು ಜಪ್ತಿ ಮಾಡಿರುವ ಕಂದಾಯ ಇಲಾಖೆಯ ಕ್ರಮವನ್ನು ಪ್ರಶ್ನಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ; ‘ಅರ್ಜಿದಾರರ ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ ಬಗ್ಗೆ ಸ್ಫೋಟಕಗಳ ಮುಖ್ಯ ನಿಯಂತ್ರಣಾ ಅಧಿಕಾರಿಯು ಸ್ಥಳ ಪರಿಶೀಲನೆ ನಡೆಸಿ ಇದೇ 6ರೊಳಗೆ ವರದಿ ಸಲ್ಲಿಸಬೇಕು‘ ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಈ ಸಂಬಂಧ ಕೆ.ಪಿ.ಅಗ್ರಹಾರದ, ‘ಶ್ರೀ ತಿರುಮಲ ಟ್ರೇಡರ್ಸ್‌‘ ಪಾಲುದಾರರಾದ ವೆಂಕಟೇಶ್ ಹಾಗೂ ವಿ. ಸತ್ಯನಾರಾಯಣ ಸೇರಿದಂತೆ ಇತರೆ ನಾಲ್ವರು ಪಟಾಕಿ ಮಾರಾಟಗಾರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಸಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಶರತ್ ಎಸ್. ಗೌಡ ವಾದ ಮಂಡಿಸಿದರು.

ಅರ್ಜಿಯಲ್ಲಿ ಏನಿದೆ?: ‘ನಾವು ಬೆಂಗಳೂರು ದಕ್ಷಿಣ ತಾಲ್ಲೂಕು ತಾವರಕೆರೆ ಹೋಬಳಿಯ ಎಲಚಿಗುಪ್ಪೆ ಗ್ರಾಮದ ಸರ್ವೆ ನಂಬರ್ 17/2ರಲ್ಲಿ ಪಟಾಕಿ ಮಾರಾಟ ಮಳಿಗೆ ಹೊಂದಿದ್ದು, ಕಳೆದ 25 ವರ್ಷಗಳಿಂದ ಪಟಾಕಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದೇವೆ. ಸ್ಫೋಟಕಗಳ ಕಾಯ್ದೆ ಅನ್ವಯ ಅಗತ್ಯ ಪರವಾನಗಿ ಹೊಂದಿದ್ದು, ಈಗಿನ ಪರವಾನಗಿ ಅವಧಿ 2024ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ. ಹೀಗಿದ್ದರೂ, ತಾವರಕೆರೆ ಹೋಬಳಿಯ ಕಂದಾಯ ನಿರೀಕ್ಷಕರು ನಮಗೆ ಯಾವುದೇ ಪೂರ್ವ ನೋಟಿಸ್ ನೀಡದೆ, ಏಕಾಏಕಿ ಪಟಾಕಿ ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಹಾಕಿ ಎಫ್‌ಐಆರ್ ದಾಖಲಿಸಿದ್ದಾರೆ‘ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಪೊಲೀಸರು ಹಾಗೂ ಜಿಲ್ಲಾಧಿಕಾರಿ ನಿರ್ದೇಶನದಂತೆ ಕಂದಾಯ ನಿರೀಕ್ಷಕರು ದಾಸ್ತಾನು ಜಪ್ತಿ ಮಾಡಿ ಮಾರಾಟ ಮಳಿಗೆಗೆ ಬೀಗ ಹಾಕಿರುವುದನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು. ವ್ಯಾಪಾರದಲ್ಲಿ ಪೊಲೀಸರು, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡದಂತೆ ನಿರ್ದೇಶಿಸಬೇಕು‘ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ‘ಅರ್ಜಿ ವಿಲೇವಾರಿಯಾಗುವ ತನಕ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿ ಬೀಗ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಬೇಕು‘ ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT