ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಅಕ್ಕಿ ನೀಡಲು ನಿರಾಕರಿಸಿ ರಾಜ್ಯಕ್ಕೆ ಘೋರ ಅನ್ಯಾಯ: ಸಚಿವ ಮುನಿಯಪ್ಪ

Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
ಅಕ್ಷರ ಗಾತ್ರ

ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ನೀಡುವ ‘ಅನ್ನ ಭಾಗ್ಯ’ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಆದರೆ, ಇದಕ್ಕೆ ಬೇಕಾದಷ್ಟು ಅಕ್ಕಿ ಸಂಗ್ರಹಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಭಾರತೀಯ ಆಹಾರ ನಿಗಮವು ಅಕ್ಕಿ ಪೂರೈಸಲು ಮೊದಲು ಒಪ್ಪಿಕೊಂಡಿತ್ತು. ನಿಗಮದಲ್ಲಿ ಅಕ್ಕಿಯ ದಾಸ್ತಾನು ಕೂಡ ಇದೆ. ಆದರೆ, ಯೋಜನೆಗೆ ಅಡ್ಡಗಾಲು ಹಾಕಬೇಕು ಎಂಬ ಕಾರಣಕ್ಕೆ ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಪಕ್ಷವು ಆರೋಪ ಮಾಡಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಅವರು ಅಕ್ಕಿಯ ಸುತ್ತ ಸೃಷ್ಟಿಯಾಗಿರುವ ವಿವಾದದ ಈ ಕುರಿತು ಮಾತನಾಡಿದ್ದಾರೆ.

ಪ್ರ

ಅನ್ನ ಭಾಗ್ಯ ಯೋಜನೆ ಈಗ ಗೊಂದಲದ ಗೂಡು ಆಗಿದೆ. ವಾಗ್ದಾನ ನೀಡಿದಂತೆ ಜುಲೈ 1ರಿಂದ ಈ ಯೋಜನೆ ಜಾರಿಯಾಗುವುದು ಕಷ್ಟ. ಸರ್ಕಾರ ಯಾವುದೇ ಪೂರ್ವ ಸಿದ್ಧತೆ ನಡೆಸದೆ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು ಈಗಿನ ಸಮಸ್ಯೆಗೆ ಕಾರಣ ಎಂಬ ಮಾತಿದೆಯಲ್ಲ? 

ರಾಜ್ಯದ ಬಡ ಜನರ ಸಂಕಷ್ಟ ನೀಗಿಸಲು ಅಕ್ಕಿ ನೀಡಬೇಕು ಎಂದು ಕಾಂಗ್ರೆಸ್‌ ಪಕ್ಷ ತೀರ್ಮಾನ ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ ಚರ್ಚೆ ನಡೆಸಿ ಪಕ್ಷದ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಇದು ಬಡವರ ಕಲ್ಯಾಣ ಯೋಜನೆ. ಅನ್ನ ಕೊಡುವ ಕಾರ್ಯಕ್ರಮ ಇದು. ಇದರಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಬಹುದು ಎಂದು ನಾವು ಭಾವಿಸಿರಲಿಲ್ಲ. ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮದಲ್ಲಿ 7 ಲಕ್ಷ ಟನ್‌ ಅಕ್ಕಿ ಸಂಗ್ರಹ ಇದೆ. ನಮ್ಮ ಹತ್ತಿರ ಸಾಕಷ್ಟು ಅಕ್ಕಿ ದಾಸ್ತಾನು ಇದ್ದು, ಎರಡರಿಂದ ಮೂರು ತಿಂಗಳು ಅಕ್ಕಿ ಕೊಡಲು ಯಾವುದೇ ಸಮಸ್ಯೆ ಇಲ್ಲ ಎಂದು ನಿಗಮದ ಅಧಿಕಾರಿಗಳು ನಮಗೆ ಭರವಸೆ ನೀಡಿದ್ದರು. ಜೂನ್‌ 13ರಂದು ಅವರು ನಿಲುವು ಬದಲಿಸಿದರು. ಅಕ್ಕಿ ಕೊಡಲು ಆಗುವುದಿಲ್ಲ ಎಂದರು. ಬೆಲೆ ಏರಿಕೆ ನಿಯಂತ್ರಣದ ನೆಪ ಹೇಳಿದರು. ನಮ್ಮ ಯೋಜನೆಗೆ ಅಡ್ಡಗಾಲು ಹಾಕಬೇಕು ಎಂಬ ಏಕೈಕ ಉದ್ದೇಶದಿಂದ ಅಧಿಕಾರಿಗಳಿಂದ ನಿರಾಕರಣೆಯ ಪತ್ರ ಬರೆಸಿದರು. ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರು ಹಾಗೂ ಸಾಮಾನ್ಯ ಜನರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ. 

ಪ್ರ

ಹಾಗಿದ್ದರೆ ಕೇಂದ್ರದ ಬಿಜೆಪಿ ಸರ್ಕಾರವನ್ನು ನಂಬಿಕೊಂಡು ಅನ್ನ ಭಾಗ್ಯ ಗ್ಯಾರಂಟಿ ಘೋಷಣೆ ಮಾಡಿದ್ದೀರಾ? 

ಇಲ್ಲ, ಇಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ. ಎಲ್ಲ ವ‌ರ್ಗದ ಜನರ ಹಸಿವನ್ನು ನೀಗಿಸಬೇಕು ಎಂಬ ಮಹತ್ತರ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತರಲಾಯಿತು. ಕೇಂದ್ರ ಸರ್ಕಾರ ಈಗ 80 ಕೋಟಿ ಬಡವರಿಗೆ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಯುಪಿಎ ಸರ್ಕಾರ ಇದ್ದಾಗ ಯಾವತ್ತೂ ಇಂತಹ ಕೀಳು ಮಟ್ಟದ ಹಾಗೂ ದ್ವೇಷದ ರಾಜಕಾರಣ ಮಾಡಿರಲಿಲ್ಲ. ನಮ್ಮದು ಒಕ್ಕೂಟ ವ್ಯವಸ್ಥೆ. ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರ ಇರುತ್ತದೆ. ರಾಜ್ಯದಲ್ಲಿ ಮತ್ತೊಂದು ಪಕ್ಷದ ಸರ್ಕಾರ ಅಧಿಕಾರ ನಡೆಸುತ್ತದೆ. ಇದೇ ‍ಪ್ರಜಾಪ್ರಭುತ್ವದ ವೈಶಿಷ್ಟ್ಯ. ಚುನಾವಣೆ ಸಮಯದಲ್ಲಷ್ಟೇ ನಾವು ಪಕ್ಷ ರಾಜಕಾರಣ ಮಾಡಬೇಕು. ಉಳಿದ ಸಮಯದಲ್ಲಿ ಪರಸ್ಪರ ಸಹಕಾರ, ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಆಹಾರ ಸಚಿವ ಪೀಯೂಷ್‌ ಗೋಯಲ್‌ ಅವರ ವರ್ತನೆ ಸಹ ದ್ವೇಷ ರಾಜಕಾರಣದ ಭಾಗವಾಗಿತ್ತು. ಭೇಟಿ ಮಾಡಲು ಮೂರು ದಿನ ಸತಾಯಿಸಿದರು. ಅಕ್ಕಿ ನೀಡಲು ನಿರಾಕರಿಸಿ ರಾಜ್ಯಕ್ಕೆ ಘೋರ ಅನ್ಯಾಯ ಮಾಡಿದರು. 

ನಾವು ನುಡಿದಂತೆ ನಡೆಯುತ್ತೇವೆ. ಇದು ನಮ್ಮದೇ ಕಾರ್ಯಕ್ರಮ. ನಾವು ಅಕ್ಕಿ ಕೊಡುವುದು ಸ್ವಲ್ಪ ತಡ ಆಗಬಹುದು. ಕೇಂದ್ರ ಸರ್ಕಾರ ರಾಜಕಾರಣ ಮಾಡಿದ್ದನ್ನು ನೋಡಿದ ಕೆಲವು ರಾಜ್ಯಗಳು ಅಕ್ಕಿ ಒದಗಿಸಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿವೆ. ರಾಜ್ಯಕ್ಕೆ ಬೇಕಿರುವ ಅಕ್ಕಿ ನೀಡುವುದಾಗಿ ಛತ್ತೀಸಗಡ ಸರ್ಕಾರ ವಾಗ್ದಾನ ಮಾಡಿದೆ. ಪಂಜಾಬ್‌ ಸರ್ಕಾರ ಆಸಕ್ತಿ ತೋರಿದೆ. ಗೋಧಿ ನೀಡುವುದಾಗಿ ತೆಲಂಗಾಣ ಸರ್ಕಾರ ಹೇಳಿದೆ. ಭಾರತ ಸರ್ಕಾರದ ಅಧೀನದ ನ್ಯಾಷನಲ್ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಷನ್ (ಎನ್‌ಸಿಸಿಎಫ್), ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರದ ಅಧಿಕಾರಿಗಳ ಜತೆಗೆ ನಿರಂತರ ಸಂಪರ್ಕದಲ್ಲಿದ್ದು, ದರ ಪಟ್ಟಿ ಕೇಳಿದ್ದೇವೆ. ಅವರು ದರ ಪಟ್ಟಿಯನ್ನೂ ಒದಗಿಸಿದ್ದಾರೆ. ಒಂದು ವಾರದೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಕೇಂದ್ರ ಸರ್ಕಾರ ಅಸಹಕಾರ ತೋರಿದ್ದರಿಂದ 5 ಕೆ.ಜಿ. ಅಕ್ಕಿ ಕೊಡುವುದು ಸ್ವಲ್ಪ ತಡವಾಗಬಹುದು. ಎಷ್ಟೇ ಸಂಕಷ್ಟ, ಅಡ್ಡಿ ಆತಂಕ ಎದುರಾದರೂ ಈ ಗ್ಯಾರಂಟಿಯನ್ನು ಜಾರಿ ಮಾಡಿಯೇ ಮಾಡುತ್ತೇವೆ. 

ಪ್ರ

ಯೋಜನೆ ಘೋಷಣೆಗೆ ಮುನ್ನ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜತೆಗೆ ಸಮಾಲೋಚನೆ ನಡೆಸಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹೇಳಿದ್ದಾರಲ್ಲ... 

ಅನ್ನ ಭಾಗ್ಯ ಯೋಜನೆ ನಮ್ಮ ಪ್ರಣಾಳಿಕೆಯ ಭಾಗ. ಇದನ್ನು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಲಾಗಿತ್ತು. ಬಿಜೆಪಿಯನ್ನು ಕೇಳಿ ನಾವು ಪ್ರಣಾಳಿಕೆ ಸಿದ್ಧಪಡಿಸಲು ಆಗುತ್ತದೆಯೇ, ಗ್ಯಾರಂಟಿ ಘೋಷಣೆ ಮಾಡಲು ಸಾಧ್ಯವೇ? ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 7 ಕೆ.ಜಿ.ಅಕ್ಕಿ ನೀಡುತ್ತಿತ್ತು. ಅದನ್ನು ಬಿಜೆಪಿಯವರು 5 ಕೆ.ಜಿ.ಗೆ ಇಳಿಸಿ ಬಡವರಿಗೆ ಅನ್ಯಾಯ ಮಾಡಿದರು. ಈಗ ನಮ್ಮ ಬಗ್ಗೆ ಟೀಕೆ ಮಾಡಲು ಅವರಿಗೆ ಯಾವ ನೈತಿಕತೆ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಳ್ಳಿಗಾಡಿನ ಜನರು ಯಾವ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಬಳಿಕ ಅನ್ನ ಭಾಗ್ಯ ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ತಜ್ಞರ ಜತೆಗೆ ಸಮಾಲೋಚಿಸಿ, ಪಕ್ಷದ ಹಿರಿಯ ಮುಖಂಡರು ಸಮಾಲೋಚನೆ ನಡೆಸಿಯೇ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. 

ಪ್ರ

ಕೇಂದ್ರ ಸರ್ಕಾರವನ್ನು ದೂರುತ್ತಾ ಕೂರುವ ಬದಲು ಬೇರೆ ಮಾರ್ಗ ಹುಡುಕಬಹುದಲ್ಲ? 

ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದೆ. ನಮ್ಮದು ಒಕ್ಕೂಟ ವ್ಯವಸ್ಥೆ. ಕೇಂದ್ರ ಸರ್ಕಾರವು ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತದೆ. ಛತ್ತೀಸಗಡ, ತೆಲಂಗಾಣ, ಆಂಧ್ರ ಪ್ರದೇಶ ರಾಜ್ಯಗಳು ಅಕ್ಕಿ ಸರಬರಾಜು ಮಾಡುತ್ತವೆ. ಬಳಿಕ ಅವಶ್ಯಕತೆ ಇರುವ, ತುರ್ತು ಇರುವ ರಾಜ್ಯಗಳಿಗೆ ಅಕ್ಕಿ ಒದಗಿಸಬೇಕು. ಅದು ಸಹ ಪುಕ್ಕಟೆಯಾಗಿ ಅಲ್ಲ. ಸ್ವಂತ ಜೇಬಿನಿಂದ ಕೊಡುತ್ತಿಲ್ಲ. ಅಕ್ಕಿ ಮಾರುವುದಕ್ಕೆ ಇಷ್ಟು ರಾಜಕೀಯ ಮಾಡಿದವರನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಕಷ್ಟ ಇದ್ದ ರಾಜ್ಯಕ್ಕೆ ಕೊಡುವುದು ನಿಮ್ಮ ಬದ್ಧತೆ, ಜವಾಬ್ದಾರಿ. ಅದರಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದೀರಿ. ಹಾಗಾಗಿ, ನಮ್ಮದೇ ಹಾದಿಯಲ್ಲಿ ನಾವು ಮುನ್ನಡೆಯಬೇಕಿದೆ. ಬಿಜೆಪಿಯವರ ರೀತಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು ನಾವು ಅಲ್ಲ.

ಎಲ್ಲ ಗ್ಯಾರಂಟಿಗಳನ್ನು ಏಕಕಾಲಕ್ಕೆ ಅನುಷ್ಠಾನ ಮಾಡುವ ಬದಲು ಐದು ವರ್ಷಗಳ ಅವಧಿಯಲ್ಲಿ ಒಂದೊಂದೇ ಗ್ಯಾರಂಟಿಗಳನ್ನು ವ್ಯವಸ್ಥಿತವಾಗಿ ಜಾರಿಗೆ ತರಬಹುದಿತ್ತಲ್ಲ? 

ಜೂನ್ 11ರಿಂದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಯೋಜನೆ ಜಾರಿಗೆ ಬಂದಿದೆ. ಜುಲೈ 1ರಿಂದ ಅನ್ನ ಭಾಗ್ಯ ಗ್ಯಾರಂಟಿ ಅನುಷ್ಠಾನವಾಗಬೇಕಿತ್ತು. ಆಗಸ್ಟ್‌ನೊಳಗೆ 10 ಕೆ.ಜಿ. ಅಕ್ಕಿ ನೀಡಲಿದ್ದೇವೆ. ಉಳಿದ ಗ್ಯಾರಂಟಿಗಳು ಸಹ ಜಾರಿಗೆ ಬರಲಿವೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಿರುವ ಹಣವನ್ನು ಮುಖ್ಯಮಂತ್ರಿ ಹೊಂದಿಸಿದ್ದಾರೆ. ಕೇಂದ್ರ ಸರ್ಕಾರದ ಅಸಹಕಾರ ಬಿಟ್ಟರೆ ಬೇರೇನೂ ತಾಪತ್ರಯ ಇಲ್ಲ. 

2019ರಿಂದ 2023ರವರೆಗೆ ಒಟ್ಟು 29.05 ಲಕ್ಷ ಟನ್‌ ಉತ್ತಮ ಗುಣಮಟ್ಟದ ಅಕ್ಕಿಯನ್ನು ಎಥೆನಾಲ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ನೀಡಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? 

ಇದರ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ. ಜನರಿಗೆ ಮೊದಲು ಅಕ್ಕಿ ಸಿಗಬೇಕು ಅಷ್ಟೇ. 

ಪ್ರ

ದಶಕಗಳ ಹಿಂದೆ ಪಡಿತರ ಅಂಗಡಿಗಳಲ್ಲಿ ಗೋಧಿ ನೀಡುತ್ತಿದ್ದರು. ಆ ವ್ಯವಸ್ಥೆಯನ್ನು ಪುನರಾರಂಭಿಸುವ ಯೋಚನೆ ಇದೆಯೇ? 

ಅಕ್ಕಿಯ ಜತೆಗೆ ಗೋಧಿಯನ್ನೂ ನೀಡಬೇಕು ಎಂಬ ಚಿಂತನೆ ಇದೆ. ಜನರ ಭಾವನೆ, ಬೇಡಿಕೆ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ. ದಕ್ಷಿಣ ಕರ್ನಾಟಕದಲ್ಲಿ ಎರಡು ಕೆ.ಜಿ.ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ ಎರಡು ಕೆ.ಜಿ. ಜೋಳ ನೀಡುವ ಆಲೋಚನೆ ಇದೆ. ಆದರೆ, ಈಗ ಜೋಳ ಸಾಕಷ್ಟು ದಾಸ್ತಾನು ಇಲ್ಲ. ಒಂದು ತಿಂಗಳಲ್ಲಿ ರಾಗಿ ಲಭ್ಯವಾಗಬಹುದು. ಮುಂದಿನ ವರ್ಷ ರಾಗಿ ಹಾಗೂ ಜೋಳ ಸಾಕಷ್ಟು ಶೇಖರಣೆಯಾಗಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT