ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಧಾನ್ಯಗಳ ಗುಣಮಟ್ಟ ಕಾಯಲು ಸೂಚನೆ

Last Updated 15 ಜುಲೈ 2021, 8:35 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ವಿತರಿಸಲು ಗುಣಮಟ್ಟದ ಆಹಾರ ಧಾನ್ಯಗಳನ್ನು ಮಾತ್ರ ಬಿಡುಗಡೆ ಮಾಡಬೇಕು ಎಂದು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಅಧಿಕಾರಿಗಳಿಗೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದರು.

ನಗರದ ವೈಟ್‌ ಫೀಲ್ಡ್‌ನಲ್ಲಿರುವ ಎಫ್‌ಸಿಐ ಮುಖ್ಯ ಸಂಗ್ರಹಣಾಗಾರಕ್ಕೆ ಬುಧವಾರ ದಿಢೀರ್‌ ಭೇಟಿನೀಡಿ ಪರಿಶೀಲಿಸಿದ ಅವರು, ‘ನಿಗಮವು ಆಹಾರ ಧಾನ್ಯಗಳ ಗುಣಮಟಗಟ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಬೇಕು. ಗುಣಮಟ್ಟ ಹೊಂದಿಲ್ಲದ ಆಹಾರ ಧಾನ್ಯಗಳನ್ನು ವಿತರಣೆಗೆ ಬಿಡುಗಡೆ ಮಾಡಬಾರದು’ ಎಂದರು.

ವೈಟ್‌ ಫೀಲ್ಡ್‌ನಲ್ಲಿರುವ ಸಂಗ್ರಹಣಾಗಾರ ರಾಜ್ಯದಲ್ಲೇ ಅತಿ ದೊಡ್ಡದು. ತಲಾ 5,000 ಟನ್‌ ಸಂಗ್ರಹಣಾ ಸಾಮರ್ಥ್ಯದ 17 ಉಗ್ರಾಣಗಳಿವೆ. ಏಕಕಾಲಕ್ಕೆ 1.05 ಲಕ್ಷ ಟನ್‌ ಆಹಾರ ಧಾನ್ಯ ಸಂಗ್ರಹಿಸಲು ಸಾಧ್ಯವಿದೆ. ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು, ಆಹಾರ ಧಾನ್ಯಗಳು ಕೆಡದಂತೆ ಸಂರಕ್ಷಿಸಿ ಇಡಬೇಕು ಎಂದು ಸೂಚಿಸಿದರು.

ರೈಲುಗಳಲ್ಲಿ ರೇಕ್‌ಗಳ ಮೂಲಕ ಸಂಗ್ರಹಣಾಗಾರಕ್ಕೆ ಆಹಾರ ಧಾನ್ಯಗಳ ಪೂರೈಕೆ, ವೈಜ್ಞಾನಿಕ ವಿಧಾನದಲ್ಲಿ ಆಹಾರ ಧಾನ್ಯ ಸಂಗ್ರಹಣೆ, ವಿತರಣೆ ಪ್ರಕ್ರಿಯೆಯನ್ನು ಸಚಿವರು ವೀಕ್ಷಿಸಿದರು. ನಂತರ ನಿಗಮದ ಆಹಾರ ವಿಶ್ಲೇಷಣಾ ಪ್ರಯೋಗಾಲಯಕ್ಕೆ ತೆರಳಿ ಆಹಾರ ಧಾನ್ಯಗಳ ವಿಶ್ಲೇಷಣಾ ಪ್ರಕ್ರಿಯೆಗಳನ್ನು ವೀಕ್ಷಿಸಿದರು.

ಎಫ್‌ಸಿಐ ಕರ್ನಾಟಕದ ಪ್ರಧಾನ ವ್ಯವಸ್ಥಾಪಕ ರಾಜು, ಉಪ ಪ್ರಧಾನ ವ್ಯವಸ್ಥಾಪಕ ಕಮಲಾಕರ್‌, ಜಿಲ್ಲಾ ವ್ಯವಸ್ಥಾಪಕ ಭಾಸ್ಕರ್‌, ಗುಣಮಟ್ಟ ವಿಶ್ಲೇಷಕ ಜನಾರ್ದನ ಹಾಗೂ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT