ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ: ಅರಣ್ಯ ಸಚಿವಾಲಯ ತಗಾದೆ

ಪರಿಸರ ಅನುಮೋದನೆ: ಕರ್ನಾಟಕದಿಂದ ಮತ್ತಷ್ಟು ವಿವರಣೆ ಕೇಳಿದ ಆರ್‌ಇಸಿ
Last Updated 27 ಜನವರಿ 2023, 22:17 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ಯೋಜನೆಯ ಭಾಗವಾದ ಕಳಸಾ ನಾಲಾ ತಿರುವು ಯೋಜನೆಗೆ 26.92 ಹೆಕ್ಟೇರ್‌ ಮೀಸಲು ಅರಣ್ಯ ಬಳಕೆಗೆ ತ್ವರಿತವಾಗಿ ಪರಿಸರ ಅನುಮೋದನೆ ನೀಡಲು ನಿರಾಕರಿಸಿರುವ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ, ಹುಲಿ ಕಾರಿಡಾರ್‌ ಹಾಗೂ ಪರಿಹಾರಾತ್ಮಕ ಹಸಿರು ಬೆಳೆಸುವ ಯೋಜನೆ ಮತ್ತಿತರ ವಿಷಯಗಳ ಕುರಿತು ವಿಸ್ತೃತ ಚರ್ಚೆ ಹಾಗೂ ವಿವರಣೆಯ ಅಗತ್ಯ ಇದೆ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಪರಿಸರ ಸಚಿವಾಲಯದ ಉಪ ಮಹಾನಿರ್ದೇಶಕ (ಕೇಂದ್ರ) ಪಿ.ಸುಬ್ರಹ್ಮಣ್ಯಂ ಅಧ್ಯಕ್ಷತೆಯಲ್ಲಿ ಜನವರಿ 20ರಂದು ನಡೆದ ಪ್ರಾದೇಶಿಕ ಉನ್ನತಾಧಿಕಾರಿ ಸಮಿತಿಯ (ಆರ್‌ಇಸಿ) ಸಭೆಯಲ್ಲಿ ಪರಿಸರ ಅನುಮೋದನೆಯ ಪ್ರಸ್ತಾವದ ಕುರಿತು ಚರ್ಚೆ ನಡೆದು, ಈ ಕಾರ್ಯಸೂಚಿಯನ್ನು ಮುಂದೂಡಲು ತೀರ್ಮಾನಿಸಲಾಯಿತು.

ಹುಲಿ ಕಾರಿಡಾರ್‌, ಶಾಸನಬದ್ಧ ಅನುಮೋದನೆಗೆ ಬೇಕಿರುವ ಮಾಹಿತಿಗಳು, ಅರಣ್ಯದ ಮೇಲಾಗುವ ಹಾನಿ ತಪ್ಪಿಸುವ ಯೋಜನೆಗಳ ಕುರಿತು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವ‌ನ್ಯಜೀವಿ) ಅವರಿಂದ ಮತ್ತಷ್ಟು ವಿವರಣೆಗಳನ್ನು ಪಡೆಯಲಾಗುತ್ತದೆ ಎಂದು ‍ಪಿ.ಸುಬ್ರಹ್ಮಣ್ಯಂ ತಿಳಿಸಿದರು.

‍ಪರಿಹಾರಾತ್ಮಕವಾಗಿ ಹಸಿರು ಬೆಳೆಸಲು ಒಣ ಪ್ರದೇಶವನ್ನು ಕರ್ನಾಟಕ ಅರಣ್ಯ ಇಲಾಖೆ ಗುರುತಿಸಿದ್ದು, ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಗಮನ ಹರಿಸಬೇಕು. ಯೋಜನಾ ಪ್ರದೇಶವು ಹುಲಿ ಕಾರಿಡಾರ್‌ನಲ್ಲಿ ಬರುತ್ತದೆ. ಅರಣ್ಯದ ಮೇಲಿನ ಹಾನಿ ತಗ್ಗಿಸುವ ಯೋಜನೆ ರೂಪಿಸುವ ವೇಳೆಯಲ್ಲಿ ಪಿಸಿಸಿಎಫ್‌ (ವನ್ಯಜೀವಿ) ಸೂಕ್ತ ಉಪಶಮನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ.

ಕಳಸಾ ನಾಲಾ ತಿರುವು ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ 33.05 ಹೆಕ್ಟೇರ್‌ ಅರಣ್ಯ ಬಳಸಲು ಒಪ್ಪಿಗೆ ನೀಡುವಂತೆ ಅರಣ್ಯ ಇಲಾಖೆ ಸಚಿವಾಲಯಕ್ಕೆ 2022ರ ಡಿಸೆಂಬರ್ 30ರಂದು ಪ್ರಸ್ತಾವನೆ ಸಲ್ಲಿಸಿತ್ತು. ಈ ವಿಷಯದ ಬಗ್ಗೆ ಇನ್ನಷ್ಟು ವಿವರಣೆ ನೀಡುವಂತೆ ಎಸಿಎಸ್‌ ಅವರಿಗೆ ಸಚಿವಾಲಯವು ಜನವರಿ 5ರಂದು ಸೂಚಿಸಿತ್ತು. ಯೋಜನೆಗೆ ಅರಣ್ಯ ಬಳಕೆ ಪ್ರಮಾಣವನ್ನು 33 ಹೆಕ್ಟೇರ್‌ನಿಂದ 26.92 ಹೆಕ್ಟೇರ್‌ಗೆ ಇಳಿಸಿ ಪರಿಷ್ಕೃತ ಪ್ರಸ್ತಾವವನ್ನು ಸಲ್ಲಿಸಲಾಗಿತ್ತು.

’ಯೋಜನೆ ಅನುಷ್ಠಾನ ಕ್ಕಾಗಿ ಅರಣ್ಯ ಪರಿವರ್ತನೆ ಕೋರಿರುವ ಖಾನಾಪುರ ತಾಲ್ಲೂಕಿನ ಅರಣ್ಯ ಪ್ರದೇಶಗಳು ಅಪರೂಪದ ವನ್ಯಜೀವಿಗಳಿಗೆ ಆಶ್ರಯತಾಣವಾಗಿದ್ದು ಇವುಗಳಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸ್ಥಾನಮಾನ ಒದಗಿಸಬೇಕು.

ಈ ಮೂಲಕ ಕಳಸಾ, ಹಳ್ತಾರ, ಸುರ್ಲಾ ನಾಲೆಗಳು ಹಾಗೂ ಮಲಪ್ರಭಾ, ಮಹದಾಯಿ ನದಿಗಳ ಜಲಾನಯನ ಪ್ರದೇಶಗಳಿಗೂ ರಕ್ಷಣೆ ದೊರೆತಂತಾಗುತ್ತದೆ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ತಿಳಿಸಿದರು.

‘ಸಮಗ್ರ ಪರಿಶೀಲನೆ ಅಗತ್ಯ’

l ಯೋಜನೆಯು ದಟ್ಟ ಅರಣ್ಯದ ಮೂಲಕ ಹಾದು ಹೋಗಲಿದೆ. ಯೋಜನೆ ಅನುಷ್ಠಾನದ ವೇಳೆ ಪರಿಸರ ನಾಶ ಆಗಲಿದೆ. ಆದರೆ, ಪರಿಹಾರಾತ್ಮಕವಾಗಿ ಹಸಿರು ಬೆಳೆಸಲು ಅಥಣಿ ತಾಲ್ಲೂಕಿನಲ್ಲಿ ಜಾಗ ಗುರುತಿಸಲಾಗಿದೆ.
ಇದು ಒಣ ಪ್ರದೇಶ. ಇಂತಹ ಪ್ರದೇಶವನ್ನು ಒಪ್ಪಲು ಸಾಧ್ಯವಿಲ್ಲ.

l ಕೆಲವು ಕಡೆಗಳಲ್ಲಿ ಅಣೆಕಟ್ಟಿನ ಎತ್ತರ 9.8 ಮೀಟರ್‌ ಇರಲಿದೆ ಎಂದು ಪರಿಷ್ಕೃತ ವಿಸ್ತೃತ ಯೋಜನಾ ವರದಿಯಲ್ಲಿ (ಡಿಪಿಆರ್‌) ತಿಳಿಸಲಾಗಿದೆ. ಇದರಿಂದಾಗಿ, ಮುಳುಗಡೆ ಪ್ರದೇಶ ಇನ್ನಷ್ಟು ಹೆಚ್ಚಾಗಲಿದೆ.

l ಯೋಜನೆ ಅನುಷ್ಠಾನಗೊಂಡ ನಂತರ ಕಳಸಾ ನಾಲೆಯಿಂದ ನೀರು ಮಲ‍ಪ್ರಭಾ ಜಲಾಶಯಕ್ಕೆ ಹೋಗಲಿದೆ. ಈ ನೀರನ್ನು ಕುಡಿಯುವ
ನೀರಿನ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ ಎಂಬುದನ್ನು ನಂಬಲು ಸಾಧ್ಯವಿಲ್ಲ.

l ಮಲಪ್ರಭಾ ಜಲಾಶಯ ಬಹುಪಯೋಗಿಯ ಯೋಜನೆ. ಜಲಾಶಯದ ನೀರನ್ನು ಕುಡಿಯುವ ನೀರಿಗೆ ಹಾಗೂ ನೀರಾವರಿ ಉದ್ದೇಶಕ್ಕೆ ಉಪಯೋಗಿಸಲಾಗುತ್ತದೆ. ಹಾಗಾಗಿ, ಇದಕ್ಕೆ ‍ಪರಿಸರ ಅನುಮೋದನೆ ಹಾಗೂ ಸಂಬಂಧಿಸಿದ ಇತರ ನಿಬಂಧನೆಗಳು ಅನ್ವಯವಾಗುತ್ತದೆ.

ಸುಹಾಸ್‌ ಜಗನ್ನಾಥ ಗೊಡ್ಸೆ, ಆರ್‌ಇಸಿ ಸದಸ್ಯ

***
ಜಲಾನಯನ ಪ್ರದೇಶದ ಸಂರಕ್ಷಣೆಗೆ ಸಂಬಂಧಪಟ್ಟ ಯಾವುದೇ ಸಲಹೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಶೀಘ್ರ ಪರಿಸರ ಅನುಮೋದನೆ ನೀಡಬೇಕು
- ರಾಕೇಶ್‌ ಸಿಂಗ್‌, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT