ಬೆಂಗಳೂರು: ‘ಕರ್ನಾಟಕದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದರಿಂದ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ತ್ವರಿತವಾಗಿ ಹಣ ಬಿಡುಗಡೆ ಮಾಡಬೇಕು’ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಒತ್ತಾಯಿಸಿದರು.
ದಕ್ಷಿಣದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಮೈಸೂರಿನ ಚಾಮುಂಡೇಶ್ವರಿ ದೇವಿ ಬೆಟ್ಟ ಅಭಿವೃದ್ಧಿಪಡಿಸಲು ‘ಪ್ರಸಾದ್’ ಯೋಜನೆಯಡಿ ಬಿಡುಗಡೆ ಮಾಡಬೇಕಿದ್ದ ಮೊದಲ ಕಂತು ₹45.17 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ. ಸ್ವದೇಶಿ ದರ್ಶನ 2.0 ಕಾರ್ಯಕ್ರಮಗಳ ಅಡಿಯಲ್ಲಿ ಮೈಸೂರು ಮತ್ತು ಹಂಪಿ ಯೋಜನೆಗಳಿಗೆ ಅನುಮೋದಿಸಿದ್ದ ₹46.17 ಕೋಟಿಯೂ ಬಿಡುಗಡೆ ಆಗಿಲ್ಲ’ ಎಂದರು.
‘ಗೋಲ್ಡನ್ ಚಾರಿಯಟ್ ರೈಲು ಯೋಜನೆಯನ್ನು ಮತ್ತೆ ಆರಂಭಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ. ಭಾರತ್ ಗೌರವ ರೈಲ್ವೆ ನೀತಿಯಂತೆ ಗೋಲ್ಡನ್ ಚಾರಿಯಟ್ ಪ್ರವಾಸ ನೀತಿಯನ್ನು ಬದಲಿಸಿ, ಶುಲ್ಕ ಕಡಿತಗೊಳಿಸುವ ಮೂಲಕ ಈ ಯೋಜನೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು. ಬೇರೆ ಬೇರೆ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ಪಾರಂಪರಿಕ ತಾಣಗಳು ಮತ್ತು ಪರಿಸರ ಪ್ರವಾಸಿ ತಾಣಗಳನ್ನು ಈ ಪ್ರವಾಸ ಯೋಜನೆಗೆ ಜೋಡಿಸಬೇಕು’ ಎಂದು ಒತ್ತಾಯಿಸಿದರು.
‘ಡೆಕ್ಕನ್ ಸುಲ್ತಾನೇಟ್‌ನ ಕೋಟೆಗಳು, ಶ್ರೀರಂಗಪಟ್ಟಣದ ಸ್ಮಾರಕಗಳು, ಐಹೊಳೆ-ಬಾದಾಮಿಯ ಶಿಲ್ಪಕಲೆ, ಹಿರೆಬೆಣಕಲ್‌ನ ಮೆಗಾಲಿಟಿಕ್ ಸೈಟ್ ಮತ್ತು ಬೀದರ್‌ನ ಕರೇಜ್ ವ್ಯವಸ್ಥೆ ಹಾಗೂ ಲಕ್ಕುಂಡಿಯ ಪಾರಂಪರಿಕ ಶಿಲ್ಪಕಲಾ ವೈಭವಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗಳಿಗೆ ಸೇರಬೇಕೆನ್ನುವುದು ಕರ್ನಾಟಕದ ಬಯಕೆ. ಇದಕ್ಕೆ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು’ ಎಂದೂ ಮನವಿ ಮಾಡಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಗಜೇಂದ್ರ ಸಿಂಗ್ ಶೆಖಾವತ್ ವಹಿಸಿದ್ದರು. ಕೇಂದ್ರ ಪ್ರವಾಸೋದ್ಯಮ ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ ಸುರೇಶ್ ಗೋಪಿ, ಆಂಧ್ರಪ್ರದೇಶ ಮತ್ತು ಪುದುಚೇರಿಗಳ ಪ್ರವಾಸೋದ್ಯಮ ಸಚಿವರು, ದಕ್ಷಿಣದ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಕೇಂದ್ರದಿಂದ ಹಣ ಬಿಡುಗಡೆ ವಿಳಂಬದಿಂದ ಮಹತ್ವದ ಯೋಜನೆಗಳನ್ನು ಪೂರ್ಣಗೊಳಿಸಲು ಅಡ್ಡಿಯಾಗುತ್ತಿದೆ. ಇದರಿಂದಾಗಿ ರಾಜ್ಯ ಸರ್ಕಾರ ಪೇಚಿಗೆ ಸಿಲುಕುವಂತಾಗಿದೆಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.