ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು, ಸಭೆಯಲ್ಲಿ ವಿಶ್ವದ ವಿವಿಧ ನಾಯಕರು ಪಾಲ್ಗೊಂಡಿದ್ದಾರೆ. ಜಿ20 ಸಮಾವೇಶಕ್ಕೆ ಗಣ್ಯರು ಆಗಮಿಸುವ ವೇಳೆ ದೆಹಲಿಯ ಕೊಳಗೇರಿಗಳು, ಬೀದಿನಾಯಿಗಳು ಕಾಣಬಾರದೆಂದು ರಸ್ತೆ ಬದಿಗಳಲ್ಲಿ ಹಸಿರು ಹೊದಿಕೆಯಿಂದ ಮುಚ್ಚಲಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿರುವ ಕಾಂಗ್ರೆಸ್, ಜಿ20 ಸಮಾವೇಶಕ್ಕೆ ಬರುತ್ತಿರುವ ವಿದೇಶಿ ಗಣ್ಯರಿಗೆ ಮೋದಿ ಅವರ ಅಭಿವೃದ್ಧಿಯ ಅಚ್ಚೆ ದಿನಗಳನ್ನು ಮುಚ್ಚಿಡಲು ಪರದೆ ಹಾಕಲಾಗಿದೆ ಎಂದು ಟೀಕಿಸಿದೆ.
ಬಡವರನ್ನು, ಬಡತನವನ್ನು ನೋಡದಿದ್ದರೆ ಆಯ್ತು ಬಡತನ ನಿರ್ಮೂಲನೆ ಮಾಡಿದಂತಾಗುತ್ತದೆ ಎಂಬುದು ‘ಬಡ ತಾಯಿಯ ಮಗನ’ (ನರೇಂದ್ರ ಮೋದಿ) ನಂಬಿಕೆಯಾಗಿದೆ. ದೆಹಲಿಯ ಕೊಳಗೇರಿಗಳಿಗೆ ಪರದೆ ಹಾಕಿರುವ ಕೇಂದ್ರ ಸರ್ಕಾರ ಜಿ20 ಸಮಾವೇಶಕ್ಕಾಗಿ, ದೆಹಲಿಯ ಸುಂದರೀಕರಣಕ್ಕೆ ಬರೋಬ್ಬರಿ ₹4,200 ಕೋಟಿ ಖರ್ಚು ಮಾಡಿದೆ ಎಂದು ವಾಗ್ದಾಳಿ ನಡೆಸಿದೆ.
ಜಿ20 ಸಮಾವೇಶಕ್ಕಾಗಿ ಬಜೆಟ್‌ನಲ್ಲಿ ಮೀಸಲಿಟ್ಟ ಮೊತ್ತ ₹990 ಕೋಟಿ. ಅತಿಥಿ ಸತ್ಕಾರಕ್ಕಾಗಿ ₹2,700 ಕೋಟಿ ಖರ್ಚು ಮಾಡಿದೆ. ಈ ಎಲ್ಲಾ ಖರ್ಚಿನಲ್ಲಿ ಬಡವರನ್ನು ಮುಚ್ಚಿಡುವ ಬದಲು ಬಡತನವನ್ನೇ ನಿರ್ಮೂಲನೆ ಮಾಡಬಹುದಿತ್ತಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.