ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಗರದೆಲ್ಲೆಡೆ ರಾಷ್ಟ್ರಪಿತನ ಸ್ಮರಣೆ

ಲಾಲ್ ಬಹದ್ದೂರ್‌ ಶಾಸ್ತ್ರಿಗೂ ನಮನ
Last Updated 3 ಅಕ್ಟೋಬರ್ 2021, 6:41 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಗಳನ್ನುನಗರದ ವಿವಿಧೆಡೆ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ಮಹಾನ್‌ ಚೇತನಗಳ ಜನ್ಮದಿನದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳು ಸಾಂಸ್ಕೃತಿಕ ಹಾಗೂ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಗಾಂಧಿ ಹಾಗೂ ಶಾಸ್ತ್ರಿಯವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನೂ ಸ್ಮರಿಸಲಾಯಿತು.

ಗಾಂಧಿ ಸಂಸ್ಮರಣೆಯ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಗಾಂಧಿ ತತ್ವಗಳನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಾಕೃತಿಗಳನ್ನು ವೀಕ್ಷಿಸಿದರು.

ಮಲ್ಲೇಶ್ವರ ಆಟದ ಮೈದಾನದ ಸಮೀಪ ಏರ್ಪಡಿಸಿದ್ದ ಒಂದು ದಿನದ ಖಾದಿ ಮೇಳಕ್ಕೆಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು. ಬೂಸ ಫ್ಯಾಕ್ಟರಿ ಸಮೀಪ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲೂ ಪಾಲ್ಗೊಂಡರು. ಸುಬೇದಾರ್ ಪಾಳ್ಯ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಪೂಜೆ ಮಾಡಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಣನಕುಂಟೆ ವಾರ್ಡ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಮೂಲ್‌ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್‌ ಹಾಗೂ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಲಕ್ಷ್ಮಣ ಅವರು ಕೋವಿಡ್‌ ಸೇನಾನಿಗಳನ್ನು ಸನ್ಮಾನಿಸಿದರು.

ಬಿಬಿಎಂಪಿ ವತಿಯಿಂದ ಎಂ.ಜಿ.ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬೆಂಗಳೂರು ರಾಷ್ಟ್ರಪಿತ ಮಹಾತ್ಮಗಾಂಧಿ ಚಿಂತನ ವೇದಿಕೆಯು ಆಯೋಜಿಸಿದ್ದ ಸಮಾರಂಭದಲ್ಲಿ ಗಾಂಧಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಮಕ್ಕಳ ಕೂಟದ ವತಿಯಿಂದ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಸಂಸ್ಮರಣಾ ದಿನ ಆಚರಿಸಲಾಯಿತು. ಗಾಂಧಿ ಪಾರ್ಕ್‌ ನಡಿಗೆದಾರರ ಕೂಟವು ಭಾರತ್‌ ನಗರ 2ನೇ ಹಂತದಲ್ಲಿರುವ ಗಾಂಧಿ ಉದ್ಯಾನದಲ್ಲಿ ಗಾಂಧಿ ಸಂಸ್ಕೃತಿ ಹಬ್ಬ ಆಯೋಜಿಸಿತ್ತು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ (ಒಬಿಸಿ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿಗಳನ್ನು ನೆಡಲಾಯಿತು. ಚಾಲುಕ್ಯ ಡಾ.ರಾಜ್‌ಕುಮಾರ್‌ ಟ್ರಸ್ಟ್‌ ವತಿಯಿಂದ ಮಹಾಲಕ್ಷ್ಮಿ ಬಡಾವಣೆಯ ಕುರುಬರಹಳ್ಳಿ ವೃತ್ತದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜೊತೆಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಸರ್ವಜ್ಞನಗರ ವಾರ್ಡ್‌ನ ಹಲವು ಭಾಗಗಳಲ್ಲಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡರು. ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಅವರು ಮಹಾತ್ಮ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಸವೇಶ್ವರ ನಗರದ ಒಕ್ಕಲಿಗರ ವೇದಿಕೆ ವತಿಯಿಂದ ಹಾವನೂರು ವೃತ್ತದಲ್ಲಿ ಗಾಂಧಿ ಮತ್ತು ಶಾಸ್ತ್ರಿ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT