ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಮಠ | ಅಂಗವಿಕಲರಿಗೆ ಕಲ್ಯಾಣದ ಸಂಭ್ರಮ; ಸಾರ್ಥಕ ಕ್ಷಣಗಳಿಗೆ ಭಾವುಕರಾದ ನವದಂಪತಿ

Published 21 ಜನವರಿ 2024, 7:09 IST
Last Updated 21 ಜನವರಿ 2024, 7:09 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ಪ್ರಸಿದ್ದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಅಂಗವಿಕಲರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾನುವಾರ 21 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟರು.

‘ಜೀವನ ಸಂಗಾತಿ ಜೊತೆಗೆ ಜೀವನೋಪಾಯ’ ಎನ್ನುವ ಘೋಷವಾಕ್ಯದಡಿ ಈ ಬಾರಿಯ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ನವಬದುಕಿಗೆ ಕಾಲಿಟ್ಟ ದಂಪತಿಗೆ ಬೆಂಗಳೂರಿನ ಸೆಲ್ಕೊ ಫೌಂಡೇಷನ್‌ ಸಹಯೋಗದಲ್ಲಿ ಮಠವು ಜೀವನೋಪಾಯಕ್ಕೆ ಒಂದು ಝರಾಕ್ಸ್ ಯಂತ್ರ, ಪೆಟ್ಟಿ ಶಾಪ್ (ಸಣ್ಣ ಅಂಗಡಿ) ಸೌಲಭ್ಯ ಕಲ್ಪಿಸಿದೆ. ಈ ಮೂಲಕ ಸ್ವಾಲವಂಬಿ ಬದುಕಿಗೂ ಮಠ ನೆರವಾಗಿದೆ.

ಬಿಜಕಲ್‌ನ ವಿರಕ್ತಮಠದ ಶಿವಲಿಂಗ ಸ್ವಾಮೀಜಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಘನಶ್ಯಾಮ ಬಾಂಡಗೆ, ಸೆಲ್ಕೊ ಕಂಪನಿ ವಲಯ ವ್ಯವಸ್ಥಾಪಕ ಮಂಜುನಾಥ ಭಾಗವತ್, ಜಿಲ್ಲಾ ವಿಶೇಷಚೇತನ ಹಾಗೂ ಕಲ್ಯಾಣ ಯೋಜನಾ ಅಧಿಕಾರಿ ಶ್ರೀದೇವಿ ನಿಡಗುಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶೃಂಗೇರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

'ಕಷ್ಟದ ಸಂದರ್ಭದಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಆತ್ಮಹತ್ಯೆಯ ದಾರಿ ಹಾಗೂ ಆತ್ಮ ಪರಿವರ್ತನೆಯ ದಾರಿ ಎರಡೂ ತೋಚುತ್ತವೆ. ಕಷ್ಟಕ್ಕೆ ಹೆದರಿ ಸಾಯಲೂಬಹುದು ಅಥವಾ ಸಹನೆ, ಸಹಾನುಭೂತಿ, ಸಾಹಸದಿಂದ ಇತಿಹಾಸವನ್ನೇ ಸೃಷ್ಟಿಸಲೂಬಹುದು. ದೇವರು ಕರುಣಿಸಿದ ದೇಹದ ಯಾವುದೋ ಒಂದು ಅಂಗವೈಕಲ್ಯಯಾಗಿದೆಯಂದು ಪರಿತಪಿಸಬಾರದು. ಅದು ಅಂಗವಿಕಲತೆಯೇ ಹೊರತು ಬದುಕಿನ ವಿಕಲತೆಯಲ್ಲ. ಬದುಕು ಬವಣೆಗಳ ಗೂಡಾಗದೆ ಭರವಸೆಯ ಬೆಳಕಾಗಬೇಕು. ಅಂಗವಿಕಲತೆಯು ಮನೋವಿಕಲತೆಗೆ ದಾರಿ ಮಾಡಿಕೊಡಬಾರದು. ನಾನು ಸೃಷ್ಟಿಸಿ ಸೃಜಿಸಿದ ಬದುಕನ್ನು ಕಂಡು ಭಗವಂತನೇ ಮೆಚ್ಚಿ, ನೀನು ಸೃಷ್ಠಿಸಿಕೊಂಡ ಬದುಕಿನ ಮುಂದೆ ನನ್ನದೇನು ಇಲ್ಲ ಅನ್ನುವ ಹಾಗೇ ಬದುಕಿ ಜಗತ್ತಿಗೆ ಮಾದರಿಯಾಗುವಂತೆ ಅಂಗವಿಕಲರ ಬದುಕಬೇಕು ಎನ್ನುವ ಆಶಯದಿಂದ ಅಂಗವಿಕಲರಿಗೆ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದೇವೆ’ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.

ಪ್ರತಿ ವರ್ಷ ಮುತ್ತೈದೆಯರಿಗೆ ಉಡಿ ತುಂಬಿ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ಈ ಬಾರಿ ಅಂಗವಿಕಲ‌ ಹೆಣ್ಣುಮಕ್ಕಳಿಗೆ ಮುತ್ತೈದೆ ಭಾಗ್ಯ ನೀಡಿ ಜಾತ್ರೆಯ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದರು.

ಘನಶ್ಯಾಮ ಬಾಂಡಗೆ‌ ಮಾತನಾಡಿ ಗವಿಮಠದ ಸ್ವಾಮೀಜಿಯ ಭೇಟಿಯೇ ನಮ್ಮೆಲ್ಲರ ಭಾಗ್ಯ. ಯಾರೂ ಅಂಗವಿಕಲತೆ ಬಂಡವಾಳ ಮಾಡಿಕೊಳ್ಳಬೇಡಿ, ಇದನ್ನು ಶಕ್ತಿಯಾಗಿ ಬದಲಿಸಿಕೊಳ್ಳಿ. ಕಣ್ಣಿಲ್ಲದಿದ್ದರೂ ಹೃದಯದ ಕಣ್ಣು ತೆರೆದು ನೋಡಬೇಕು. ದಾಂಪತ್ಯದ‌ ಬದುಕಿನಲ್ಲಿ ಎಲ್ಲವೂ ಸುಖವಾಗಿರುವುದಿಲ್ಲ. ಸುಖ ಹಾಗೂ ದುಖಃ ಎರಡನ್ನೂ ಸಮನಾವಾಗಿ ಸ್ಬೀಕರಿಸಬೇಕು ಎಂದರು.

ಭಾವುಕರಾದ ನವದಂಪತಿ: ತಮ್ಮ ಬದುಕಿಗೂ ಕಲ್ಯಾಣದ ಭಾಗ್ಯ ಲಭಿಸಿದ್ದಕ್ಕೆ ಅಂಗವಿಕಲ ದಂಪತಿ ಭಾವುಕರಾದರು. ಕೊಪ್ಪಳ ಹಾಗೂ ಬೇರೆ ಜಿಲ್ಲೆಗಳ ಜೋಡಿ ಇಲ್ಲಿ ಮದುವೆ ಮೂಲಕ ಒಂದಾದರು.

ಬಾಂಡಗೆ ಅವರು ತಮ್ಮ ಭಾಷಣದಲ್ಲಿ ಬುದ್ದಿಮಾಂದ್ಯ ಮಕ್ಕಳು ಹಾಗೂ ಪಾಲಕರು ಅನುಭವಿಸುವ ನೋವು ತೋಡಿಕೊಳ್ಳುವಾಗ ವೇದಿಕೆ‌ಮೇಲೆ ಕಣ್ಣೀರಾದರು. ಉಮ್ಮಳಿಸಿ‌ ಬಂದ ದುಖಃ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತರು. ಇದರಿಂದ ನವದಂಪತಿ ಕಣ್ಣಲ್ಲೂ ನೀರು‌ಬಂದವು. ಸಮಾಜಕ್ಕೆ ತುಳಿತಕ್ಕೆ ಒಳಗಾದವರು, ಅವರ ಪೋಷಕರ ನೋವಿಗೆ ಸಮಾಜ ಧ್ವನಿಯಾಗುವ ಅಗತ್ಯವಿದೆ‌ ಎಂದು ಬಾಂಡಗೆ ಹೇಳಿದರು‌.

ಸಾಮೂಹಿಕ ವಿವಾಹದ ಮೂಲಕ ಈ‌ ಬಾರಿಯ ಗವಿಮಠದ ಜಾತ್ರೆಯ ಕಾರ್ಯಕ್ರಮಗಳಿಗೆ ಚಾಲನೆ ಲಭಿಸಿತು. ಜ. 27 ಮಹಾ ರಥೋತ್ಸವ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT