ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಜೆಟೆಡ್‌ ಪ್ರೊಬೇಷನರಿ: 276 ಹುದ್ದೆ ಭರ್ತಿಗೆ ಸಿದ್ಧತೆ

Published 9 ಡಿಸೆಂಬರ್ 2023, 23:59 IST
Last Updated 9 ಡಿಸೆಂಬರ್ 2023, 23:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್‌ (ಕರ್ನಾಟಕ ನಾಗರಿಕ ಸೇವೆ) ಸೇರಿದಂತೆ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ವೃಂದದ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಒಟ್ಟು 276 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಪೈಕಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿನ (ಸೇವೆಗಳು–2) ಸಹಾಯಕ ಆಯುಕ್ತ (ಕಿರಿಯ ಶ್ರೇಣಿ) 20 ಹುದ್ದೆಗಳು ಸೇರಿ ಒಟ್ಟು 105 ಹುದ್ದೆಗಳು ಗ್ರೂಪ್‌ ‘ಎ’ನಲ್ಲಿವೆ. ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ್‌ (ಗ್ರೇಡ್– 2) 26 ಹುದ್ದೆಗಳು ಸೇರಿ ಒಟ್ಟು 171 ಹುದ್ದೆಗಳು ಗ್ರೂಪ್‌ ‘ಬಿ’ ವೃಂದಕ್ಕೆ ಸೇರಿವೆ.

ಎಲ್ಲ ಇಲಾಖೆಗಳಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಖಾಲಿ ಹುದ್ದೆಗಳ ಮಾಹಿತಿಯನ್ನು ಸಂಗ್ರಹಿಸಿದೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸದ್ಯದಲ್ಲೇ ನೇಮಕಾತಿ ಪ್ರಾಧಿಕಾರವಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಪ್ರಸ್ತಾವ ಸಲ್ಲಿಕೆ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

2017ನೇ ಸಾಲಿನಲ್ಲಿ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ 106 ಹುದ್ದೆಗಳಿಗೆ ನೇಮಕಾತಿ ನಡೆದಿತ್ತು. ಆ ಸಾಲಿನ ನೇಮಕಾತಿಯಲ್ಲಿ ಸಹಾಯಕ ಆಯುಕ್ತ ಮತ್ತು ಡಿವೈಎಸ್‌ಪಿ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ನಂತರ ಸರ್ಕಾರ ಹೊಸತಾಗಿ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಹೀಗಾಗಿ, 4 ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೇಮಕಾತಿ ಅಧಿಸೂಚನೆಯ ನಿರೀಕ್ಷೆಯಲ್ಲಿದ್ದಾರೆ.

‘ಕೋವಿಡ್‌– 19  ಸಾಂಕ್ರಾಮಿಕ ರೋಗ ಹಾಗೂ ಇತರ ಆಡಳಿತಾತ್ಮಕ ಕಾರಣಗಳಿಂದಾಗಿ ಸುಮಾರು ನಾಲ್ಕು ವರ್ಷಗಳಿಂದ ಯಾವುದೇ ಗೆಜೆಡೆಟ್‌ ಪ್ರೊಬೇಷನರಿ ಹುದ್ದೆ ಭರ್ತಿ ಮಾಡಲು ಸಾಧ್ಯವಾಗಿಲ್ಲ’ ಎಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಚ್.ಎಸ್‌. ಗೋಪಿನಾಥ್‌ ಅವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಈ ಮಧ್ಯೆ, ಹುದ್ದೆಗಳ ಭರ್ತಿಗೆ ಹೊರಡಿಸುವ ಅಧಿಸೂಚನೆಯಲ್ಲಿ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಒಂದು ಬಾರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಿ ಅವಕಾಶ ಕಲ್ಪಿಸಬೇಕು ಎಂದು ಹುದ್ದೆ ಆಕಾಂಕ್ಷಿಗಳು ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT