ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎಡಿಬಿ ಪ್ರಕರಣಗಳ ಸಮಗ್ರ ವರದಿ ಕೊಡಿ: ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ಸೂಚನೆ

ಅಧಿಕಾರಿಗಳಿಗೆ ಜುಲೈ 17ರ ಗಡುವುದು ವಿಧಿಸಿದ ಸಚಿವ ಎಂ.ಬಿ. ಪಾಟೀಲ
Published 27 ಜೂನ್ 2023, 23:33 IST
Last Updated 27 ಜೂನ್ 2023, 23:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಪ್ರದೇಶ ಕೈಗಾರಿಕಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಹಂಚಿಕೆಯಾಗಿರುವ ನಿವೇಶನಗಳಿಗೆ ಸಂಬಂಧಿಸಿದ ಕೋರ್ಟ್ ಪ್ರಕರಣಗಳ ಸಮಗ್ರ ಮಾಹಿತಿಯನ್ನು ಜುಲೈ 17ರ ವೇಳೆಗೆ ಸಲ್ಲಿಸಬೇಕು’ ಎಂದು ಇಲಾಖೆಯ ಅಧಿಕಾರಿಗಳಿಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದ್ದಾರೆ.

ಇಲಾಖೆಯ ಅಧಿಕಾರಿಗಳ ಜೊತೆ ಮಂಗಳವಾರ ‌ಸಭೆ ನಡೆಸಿದ ಅವರು, ‘ಕೆಐಎಡಿಬಿ ನಿವೇಶನ ಹಂಚಿಕೆ ಸಂಬಂಧ ಕಳೆದ 4-5 ವರ್ಷಗಳಲ್ಲಿ 1,748 ಮೊಕದ್ದಮೆಗಳು ದಾಖಲಾಗಿವೆ. ಈ ಪೈಕಿ 921 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. 762 ಪ್ರಕರಣಗಳಲ್ಲಿ ಸರ್ಕಾರದ ಪರ ಆದೇಶ ಬಂದಿದೆ. ಆದರೆ, ಸರ್ಕಾರದ ಹಿತಾಸಕ್ತಿ ಇರುವ ಕೆಲವು ಪ್ರಕರಣಗಳಲ್ಲಿ ಮೇಲ್ಮನವಿಯನ್ನೇ ಸಲ್ಲಿಸಿಲ್ಲ’ ಎಂದರು.

‘ಎಲ್ಲ ಪ್ರಕರಣಗಳನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಯ ಗಮನಕ್ಕೆ ತಂದು, ಸಲಹೆ ಪಡೆಯಬೇಕು. ಜೊತೆಗೆ ಅಡ್ವೊಕೇಟ್‌ ಜನರಲ್ ಅವರ ಅಭಿಪ್ರಾಯವನ್ನೂ ಪಡೆಯಬೇಕು. ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 10 ವರ್ಷಗಳ ಹಿಂದೆಯೇ 92 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿದ್ದರೂ ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಈ ಪ್ರಕರಣವನ್ನು ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

‘ಕೈಗಾರಿಕೆಗಳ ಬಳಕೆಗೆಂದು ಸರ್ಕಾರದ ಬಳಿ ಈಗ 11 ಸಾವಿರ ಎಕರೆ ಭೂಮಿಯಿದೆ. ಅದರ ಮೌಲ್ಯ ₹ 8 ಸಾವಿರ ಕೋಟಿಯಿಂದ ₹ 10 ಸಾವಿರ ಕೋಟಿ ಆಗುತ್ತದೆ. ಎಲ್ಲೆಂದರಲ್ಲಿ ಕೈಗಾರಿಕಾ ಪ್ರದೇಶಗಳನ್ನು ಮಾಡುವ ಬದಲು ಬೇಡಿಕೆ ಆಧರಿಸಿ ಮಾಡಬೇಕು. ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಒಂದು ನಿರ್ದಿಷ್ಟ ಮಾದರಿಯ ಉದ್ಯಮಗಳಿಗೆ ಮೀಸಲಿಟ್ಟಿರುವ ಜಾಗಗಳಲ್ಲಿ ಅಂಥ ಉದ್ದಿಮೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದಿದ್ದರೆ, ಆ ಜಾಗವನ್ನು ಉಳಿದ ಉದ್ದಿಮೆಗಳಿಗೂ ಒದಗಿಸುವ ನೀತಿ ಅಳವಡಿಸಿಕೊಳ್ಳಲಾಗುವುದು’ ಎಂದು ವಿವರಿಸಿದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್‌ ಕೃಷ್ಣ, ಕೆಐಎಡಿಬಿ ಆಯುಕ್ತ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT