ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವರ್ಷಧಾರೆ: ಜಲಮೂಲಗಳಿಗೆ ಜೀವಕಳೆ

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಏರಿಕೆ l ಉತ್ತರ ಕನ್ನಡದಲ್ಲಿ ತುಂಬಿ ಹರಿಯುತ್ತಿರುವ ನದಿಗಳು
Published 8 ಜೂನ್ 2024, 23:37 IST
Last Updated 8 ಜೂನ್ 2024, 23:37 IST
ಅಕ್ಷರ ಗಾತ್ರ

ಹುಬ್ಬಳ್ಳಿ/ ವಿಜಯಪುರ/ಕಲಬುರಗಿ: ರಾಜ್ಯದಲ್ಲಿ ವರ್ಷಧಾರೆ ಮುಂದುವರಿದಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಕರಾವಳಿಗೆ ಮುಂಗಾರು ಪ್ರವೇಶಿಸಿದೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಜಲಮೂಲಗಳು ಜೀವಕಳೆ ಪಡೆದುಕೊಳ್ಳುತ್ತಿವೆ.

ವಿಜಯನಗರ, ಬೆಳಗಾವಿ, ಬಾಗಲಕೋಟೆ ಗದಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಶನಿವಾರವೂ ಉತ್ತಮ ಮಳೆಯಾಯಿತು. ಹುಬ್ಬಳ್ಳಿ ನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಆರಂಭವಾದ ಮಳೆ ರಾತ್ರಿಯೂ ಮುಂದುವರೆಯಿತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನೆಲ್ಲೆಡೆ ಸುರಿದ ಮಳೆಯಿಂದ ಬತ್ತಿದ್ದ ಜಲಮೂಲಗಳು ಜೀವಕಳೆ ಪಡೆದಿವೆ. ತಾಲ್ಲೂಕಿನ ಹುಲೇಕಲ್, ಸೋಂದಾ, ಭೈರುಂಬೆ, ಬನವಾಸಿ, ಬಂಡಲ, ಹೆಗಡೆಕಟ್ಟಾ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ. ಇದರಿಂದ ಶಾಲ್ಮಲಾ, ವರದಾ ಹಾಗೂ ಅಘನಾಶಿನಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. 

ಕೋಡಿ ಬಿದ್ದ ಕೆರೆ: ರಭಸದಿಂದ ಸುರಿದ ಮಳೆಗೆ ಶಿರಸಿ ತಾಲ್ಲೂಕಿನ ಹನುಮಂತಿ ಬಳಿಯ ಕೆರೆ ಕೋಡಿ ಬಿದ್ದಿದೆ. ಕೆರೆ ದಂಡೆಯ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ಭಟ್ಕಳ ತಾಲ್ಲೂಕಿನ ಬದ್ರಿಯಾ ಕಾಲೊನಿಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಭಟ್ಕಳದ ಜಂಬರಮಠದಲ್ಲಿ ಈಶ್ವರ ನಾಯ್ಕ ಅವರ ಮನೆ ಕಾಂಪೌಂಡ್‌ ಕುಸಿದಿದೆ.

ಕುಮಟಾ ತಾಲ್ಲೂಕಿನಲ್ಲಿ ನಿರಂತರ ಮಳೆಯಾಗುತ್ತಿದೆ. ಪಟ್ಟಣದ ಸಸಿಹಿತ್ಲುವಿನಲ್ಲಿ ಇಪ್ಪತ್ತು ಮನೆಗಳು ಜಲಾವೃತಗೊಂಡಿದ್ದು, 15 ಮನೆಗಳಿಗೆ ನೀರು ನುಗ್ಗಿದೆ ಎಂದು ತಹಶೀಲ್ದಾರ್ ಪ್ರವೀಣ ಕರಾಂಡೆ ತಿಳಿಸಿದ್ದಾರೆ. ತುರ್ತುಪರಿಹಾರ ಕ್ರಮಗಳಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಕಾಗಾಲದಲ್ಲಿ ಲೀಲಾ ಪಟಗಾರ ಎನ್ನುವವರ ಮನೆಯ ಚಾವಣಿ ಕುಸಿದಿದೆ. ಎಂದು ಮಾಹಿತಿ ನೀಡಿದರು.

ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು, ಮೂಡಲಗಿ, ಸವದತ್ತಿ ಹಾಗೂ ಬೈಲಹೊಂಗಲ ಭಾಗದಲ್ಲಿಯೂ ಉತ್ತಮ‌ ಮಳೆ ಆಗಿದೆ. ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ನರಗುಂದ ಭಾಗದಲ್ಲಿಯೂ ಮಳೆಯಾಗಿದೆ. 

ತುಂಗಭದ್ರಾಗೆ ಒಳಹರಿವು ಹೆಚ್ಚಳ: ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಎರಡು ಮನೆಗಳು ಕುಸಿದಿವೆ. ತುಂಗಭದ್ರಾ ಜಲಾಶಯದ ಒಳಹರಿವು ಏರುತ್ತಿದೆ. ಶನಿವಾರ 1,550 ಕ್ಯೂಸೆಕ್‌ ನೀರು ಹರಿದಿದೆ. 105.78 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 3.94 ಟಿಎಂಸಿ ಅಡಿಯಷ್ಟು ನೀರಿದೆ.

ಡೋಣಿ ನದಿಗೆ ಪ್ರವಾಹ: ವಿಜಯಪುರ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಮತ್ತು ಶನಿವಾರ ಧಾರಾಕಾರ ಮಳೆಯಾಗಿದೆ. ತಾಳಿಕೋಟೆ ಪಟ್ಟಣದ ಬಳಿ ಡೋಣಿ ನದಿಯಲ್ಲಿ ಪ್ರವಾಹ ಬಂದಿದೆ. ಸೇತುವೆ ಮುಳುಗಿದ್ದು, ವಿಜಯಪುರ ಮಾರ್ಗದಲ್ಲಿ ಶುಕ್ರವಾರ ಕೆಲವೊತ್ತು ಸಂಪರ್ಕ ಕಡಿತವಾಗಿತ್ತು. ಶನಿವಾರ ಸಹಜ ಸ್ಥಿತಿಗೆ ಮರಳಿತು.

‘ಕಲ್ಯಾಣ’ದಲ್ಲಿ ಮುಂದುವರಿದ ಮಳೆ (ಕಲಬುರಗಿ ವರದಿ): ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯು ಮುಂದುವರಿದಿದ್ದು,
ರೈತರಲ್ಲಿ ಹರ್ಷ ತಂದಿದೆ. 

ಕಲಬುರಗಿ ಜಿಲ್ಲೆಯಾದ್ಯಂತ ಐದು ದಿನಗಳಿಂದ ಮಳೆಯಾಗುತ್ತಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಗೆ ಕೃಷಿಕರು ರೈತ ಸಂಪರ್ಕ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಬೀದರ್‌ ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆಯಾಗಿದೆ. ಬೀದರ್‌ ತಾಲ್ಲೂಕಿನಲ್ಲಿ ಸತತ ಐದನೇ ದಿನವೂ ಮಳೆಯಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ನಗರ, ಕುಷ್ಟಗಿ, ಯಲಬುರ್ಗಾ, ಮುನಿರಾಬಾದ್‌ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಕೊಪ್ಪಳ ತಾಲ್ಲೂಕಿನ ಹ್ಯಾಟಿ ಗ್ರಾಮದಲ್ಲಿ ಕೃಷಿ ಹೊಂಡ ಕೊಚ್ಚಿಕೊಂಡು ಹೋಗಿದೆ. ಯಾದಗಿರಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಕೊಡಗಿನಲ್ಲಿ ಬಿರುಸು (ಮಡಿಕೇರಿ ವರದಿ): ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದೆ. ಮಡಿಕೇರಿಯಲ್ಲಿ ಎರಡೂವರೆ ಗಂಟೆ ಬಿರುಸಿನ ಮಳೆಯಾಗಿದೆ. ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ನಾಪೋಕ್ಲು, ವಿರಾಜಪೇಟೆ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಿದೆ.

ಕರಾವಳಿಯಲ್ಲಿ ಮುಂಗಾರು ಚುರುಕು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದೆ. ಮಂಗಳೂರಿನಲ್ಲಿ ಉತ್ತಮ ಮಳೆಯಾಗಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು. ವಾಹನ ಸವಾರರಿಗೆ ಸಮಸ್ಯೆಯಾಯಿತು. ಉಡುಪಿ ಜಿಲ್ಲೆಯಲ್ಲಿ ಬೈಂದೂರು, ಹೆಬ್ರಿ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಮುನ್ಸೂಚನೆ: ಇದೇ 9ರಂದು ಗಂಟೆಗೆ 45 ಕಿ.ಮೀ.ಯಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT