ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸಾಧನೆ ವರ್ಗಾವಣೆ ಮಾತ್ರ – ಯತ್ನಾಳ

Published 30 ಆಗಸ್ಟ್ 2023, 15:54 IST
Last Updated 30 ಆಗಸ್ಟ್ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ 100 ದಿನಗಳ ಸಾಧನೆ ಎಂದರೆ ವರ್ಗಾವಣೆ ಮಾತ್ರ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ​​ ಯತ್ನಾಳ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತ ಆಗಿವೆ. ನಮ್ಮ ಅವಧಿಯ ಕಾಮಗಾರಿಗಳನ್ನೆಲ್ಲ ಸ್ಥಗಿತಗೊಳಿಸಲಾಗಿದೆ’ ಎಂದು ಅವರು ದೂರಿದರು.

‘ಅಧಿಕಾರ ಬರುವ ಪೂರ್ವದಲ್ಲಿ ಗ್ಯಾರಂಟಿಗಳೆಲ್ಲ ಉಚಿತ ಮತ್ತು ಖಚಿತ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದರು. ಆದರೆ, ಈಗ ಹಲವು ಷರತ್ತುಗಳನ್ನು ಹಾಕಿದ್ದಾರೆ. ಅವರ ಯಾವುದೇ ಯೋಜನೆಗಳೂ ಪೂರ್ಣ ಪ್ರಮಾಣದಲ್ಲಿ ಜನರಿಗೆ ಸಿಗಲ್ಲ’‌ ಎಂದರು.

‘ವಿರೋಧ ಪಕ್ಷದ ನಾಯಕನ ಆಯ್ಕೆಗೂ, ಪಕ್ಷ ಬಿಡುಗಡೆ ಮಾಡಿರುವ ಸರ್ಕಾರದ ವಿರುದ್ಧದ ಚಾರ್ಜ್‌ಶೀಟ್​ಗೂ ಸಂಬಂಧ ಇಲ್ಲ. ನೂರು ದಿನಗಳ ವೈಫಲ್ಯಗಳು ಯಾವವು ಎಂದು ಚಾರ್ಟ್‌ಶೀಟ್‌ನಲ್ಲಿದೆ. ಅದಕ್ಕೆ ಮೊದಲು ಉತ್ತರ ಕೊಡಲಿ. ನೆಪ ಹೇಳಿ ಜಾರಿಕೊಳ್ಳಬಾರದು’ ಎಂದು ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದರು.

‘ಪಕ್ಷ ಬಿಡುತ್ತೇವೆಂದು ಕೆಲವರು ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಬಿಜೆಪಿಯ ಒಳಗೇ ಇದ್ದುಕೊಂಡು ಹೇಳಿಕೆ ಕೊಡುವುದು ಸಲ್ಲದು’ ಎಂದ ಅವರು, ಕರ್ನಾಟಕದಲ್ಲಿ ಬಿಜೆಪಿ ಮುಗಿದು ಹೋಯಿತೇ? ಬಿಜೆಪಿ ಕಥೆ ಮುಗಿದು ಹೋಯಿತು ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆ ಬಾಲಿಶ. ವಿಶ್ವದಲ್ಲಿಯೇ ಅತೀ ದೊಡ್ಡ ಪಕ್ಷ ಬಿಜೆಪಿ. ಮೋದಿಯಂಥವರು ಇದ್ದಾಗಲೂ ಹೀಗೆ ಹೇಳುವುದು ಕೆಳಮಟ್ಟದ ಹೇಳಿಕೆ ಎಂದರು.

ರೇಣುಕಾಚಾರ್ಯ ಪಕ್ಷ ಬಿಡುತ್ತಾರೆಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಪಕ್ಷ ಬಿಡುವುದಿಲ್ಲ. ಅವರಿಗೆ ಯಾಕೋ ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ. ಒಳ್ಳೆಯ ದಿನ ಬರುತ್ತದೆ. ಗಡಿಬಿಡಿ ಯಾಕೆ’ ಎಂದರು.

‘ದಾವಣಗೆರೆ ಲೋಕಸಭೆಗೆ ಅಲ್ಲಿನ ಸಂಸದರು ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಾರೆ. ರೇಣುಕಾಚಾರ್ಯ ಟಿಕೆಟ್ ಕೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಇನ್ನು ಶಿವಕುಮಾರ ಉದಾಸಿ ಕೂಡಾ ನಿಲ್ಲುವುದಿಲ್ಲ ಎಂದಿದ್ದಾರೆ. ಸಹಜವಾಗಿ ಟಿಕೆಟ್ ಕೇಳಿದ್ದಾರೆ, ತಪ್ಪೇನು’ ಎಂದರು.

‘ರಾಜ್ಯ ಘಟಕದ ಅಧ್ಯಕ್ಷರು ಆದಷ್ಟು ಬೇಗ ತಮ್ಮ ಸ್ಥಾನದಿಂದ ಮುಕ್ತ ಆಗಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಹೈಕಮಾಂಡ್‌ ಅವರನ್ನು ಬಿಡುತ್ತಿಲ್ಲ. ಹೀಗಾಗಿ, ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಅವರಿಗೆ ಆಗುತ್ತಿಲ್ಲ. ಅವರು ಒಳ್ಳೆಯ ಮನುಷ್ಯ. ಸೋತಾಗ ನೂರು ಮಂದಿ ಕಲ್ಲು ಹಾಕುತ್ತಾರೆ. ಪಕ್ಷ ಗೆಲ್ಲುತ್ತಿದ್ದರೆ, ಅವರನ್ನೇ ಮುಂದುವರಿಸುತ್ತಿದ್ದರು’ ಎಂದು ಯತ್ನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT