ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸೇರುವ ಉಮೇದಿನಲ್ಲಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಹಿನ್ನಡೆಯಾಗಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ₹94 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿ, ವಂಚಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್ನ ಹಾಲಿ ಶಾಸಕರೂ ಆಗಿರುವ ಬಿ. ನಾಗೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿ ನೀಡಿದ್ದಾರೆ. ಇದರಿಂದಾಗಿ ಅವರ ವಿರುದ್ಧ
ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭವಾಗಲಿದೆ. ಹೀಗಾಗಿ, ಸಂಪುಟ ಸೇರುವ ಅವರ ಕನಸು ಭಗ್ನಗೊಳ್ಳುವ ಸಾಧ್ಯತೆ ಇದೆ.

ನಿಗಮವು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸಂತನಗರ ಶಾಖೆ ಸೇರಿದಂತೆ ವಿವಿಧೆಡೆಯ ಬ್ಯಾಂಕ್ ಖಾತೆಗಳಲ್ಲಿ ಇರಿಸಿದ್ದ ಹಣವನ್ನು ಎಂ.ಜಿ. ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಅದರಲ್ಲಿನ ₹94 ಕೋಟಿಯನ್ನು ಅಕ್ರಮವಾಗಿ ಹೈದರಾಬಾದ್ನ ಸಹಕಾರಿ ಬ್ಯಾಂಕ್ ಒಂದರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. 2024ರ ಫೆಬ್ರುವರಿ 26ರಿಂದ ಮೇ 9ರವರೆಗೆ ಈ ರೀತಿ ನಿಗಮದ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು.

ನಿಗಮದ ಲೆಕ್ಕಪತ್ರ ವಿಭಾಗದ ಅಧೀಕ್ಷಕ ಪಿ. ಚಂದ್ರಶೇಖರನ್ ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಸಾವಿಗೂ ಮುನ್ನ ಬರೆದಿದ್ದ ಪತ್ರದಿಂದ ಹಗರಣ ಬಹಿರಂಗವಾಗಿತ್ತು. ಬಳಿಕ ಸಿಐಡಿ ಪೊಲೀಸರು ಮತ್ತು ಸಿಬಿಐ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದವು. ಈ ಎಫ್ಐಆರ್ಗಳ ಆಧಾರದಲ್ಲಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಆರ್ಥಿಕ ಅಪರಾಧ ಪ್ರಕರಣ ವರದಿ (ಇಸಿಐಆರ್) ದಾಖಲಿಸಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಇ.ಡಿ ಅಧಿಕಾರಿಗಳು ಜುಲೈ 12ರಂದು ನಾಗೇಂದ್ರ ಅವರನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದ (ರಾಜ್ಯಪಾಲರು) ಅನುಮತಿ ಕೋರಿ ತಿಂಗಳ ಹಿಂದೆ ರಾಜಭವನಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

‘ಇ.ಡಿ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವ ಮತ್ತು ದಾಖಲೆಗಳನ್ನು ಪರಿಶೀಲಿಸಿದ ರಾಜ್ಯಪಾಲರು, ಬಿ. ನಾಗೇಂದ್ರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಶನಿವಾರ (ಏಪ್ರಿಲ್ 5) ಅನುಮತಿ ನೀಡಿದ್ದಾರೆ. ನ್ಯಾಯಾಲಯಕ್ಕೆ ಆರೋಪಪಟ್ಟಿ ಮತ್ತು ದಾಖಲೆಗಳನ್ನು ಸಲ್ಲಿಸಲು ಇ.ಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಮಂಜುನಾಥ ಗೌಡ 14 ದಿನ ಇ.ಡಿ ವಶಕ್ಕೆ

ಬೆಂಗಳೂರು/ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ (ಡಿಸಿಸಿ) ನಕಲಿ ಚಿನ್ನಾಭರಣ ಅಡವಿಟ್ಟು ₹62.77 ಕೋಟಿ ಸಾಲ ಪಡೆದಿದ್ದ ಪ್ರಕರಣದಲ್ಲಿ, ಬ್ಯಾಂಕ್ನ ಹಾಲಿ ಅಧ್ಯಕ್ಷ ಹಾಗೂ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಆರ್.ಎಂ. ಮಂಜುನಾಥಗೌಡ ಅವರನ್ನು ಇ.ಡಿ ಮಂಗಳವಾರ ತಡರಾತ್ರಿ ಬಂಧಿಸಿದೆ.

ಮಂಜುನಾಥ ಅವರನ್ನು 14 ದಿನಗಳವರೆಗೆ ಇ.ಡಿ ಬಂಧನಕ್ಕೆ ನೀಡಿ, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ.

2014ರಲ್ಲಿ ಮಂಜುನಾಥಗೌಡ ಅವರು ಬ್ಯಾಂಕ್ನ ಅಧ್ಯಕ್ಷರಾಗಿದ್ದಾಗ ಅಕ್ರಮ ನಡೆದಿತ್ತು. ಇ.ಡಿ ತನಿಖೆಗೆ, ಅವರು ಹೈಕೋರ್ಟ್ನಿಂದ ತಂದಿದ್ದ ತಡೆ ಈಚೆಗಷ್ಟೇ ತೆರವಾಗಿತ್ತು.

‘ಸತತ 11 ತಾಸಿನ ವಿಚಾರಣೆಯಲ್ಲೂ ಸಮರ್ಪಕ ಉತ್ತರ ನೀಡದ ಕಾರಣ ಅವರನ್ನು ವಶಕ್ಕೆ ಪಡೆದು, ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತರಲಾಗಿತ್ತು. ಅಲ್ಲಿಯೂ ವಿಚಾರಣೆಗೆ ಸಹಕಾರ ನೀಡದ ಕಾರಣ ತಡರಾತ್ರಿ ಅವರನ್ನು ಬಂಧಿಸಲಾಯಿತು. ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ಬ್ಯಾಂಕ್ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಂಜುನಾಥಗೌಡ ಅವರ ಅಣತಿಯಂತೆಯೇ ನಕಲಿ ಚಿನ್ನಾಭರಣಗಳನ್ನು ಅಡಮಾನ ಇರಿಸಲಾಗಿತ್ತು. ಅವರು ಸೂಚಿಸಿದ ವ್ಯಕ್ತಿಗಳಿಗೇ ಸಾಲ ನೀಡಲಾಗಿತ್ತು. ಪ್ರಕರಣ ದಾಖಲಾದ ನಂತರ ಹಲವು ದಾಖಲೆಗಳನ್ನು ಅವರು ಬದಲಿಸಿದ್ದಾರೆ. ಅಕ್ರಮದ ಬಗ್ಗೆ ವಿಚಾರಣೆಗೆ ಒಳಪಡಿಸಲು ಅವರನ್ನು ಬಂಧನಕ್ಕೆ ನೀಡಬೇಕು’ ಎಂದು ಇ.ಡಿ ನ್ಯಾಯಾಲಯವನ್ನು ಕೋರಿತ್ತು.

ಆಪ್ತರ ಮನೆಗಳಲ್ಲೂ ಶೋಧ

ಈ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಅಧಿಕಾರಿಗಳು ಶಿವಮೊಗ್ಗದ ವಿವಿಧೆಡೆ ಬುಧವಾರವೂ ಶೋಧಕಾರ್ಯ ನಡೆಸಿದರು.

ಅಚ್ಚುತರಾವ್ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್. ಸುಧೀರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು.

ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಕೃಷ್ಣಮೂರ್ತಿ ಭಟ್ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು. ಇ.ಡಿ. ಬಂಧಿಸಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರ ಆಪ್ತ ಬಳಗದಲ್ಲಿ ಈ ಇಬ್ಬರೂ ಗುರುತಿಸಿಕೊಂಡಿದ್ದಾರೆ.

ಚೆಕ್ ಬೌನ್ಸ್: ನಾಗೇಂದ್ರಗೆ 1 ವರ್ಷ ಜೈಲು

ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಶಾಸಕ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಂತೆಯೇ, ‘ಪ್ರಕರಣದ ದೂರುದಾರರಿಗೆ ₹1 ಕೋಟಿ 24 ಲಕ್ಷ ಮೊತ್ತವನ್ನು ನಾಗೇಂದ್ರ ಪಾವತಿಸಬೇಕು’ ಎಂದು ಆದೇಶಿಸಿದೆ.

ಈ ಸಂಬಂಧ, ‘ಮೆಸರ್ಸ್ ವಿಎಸ್ಎಲ್ ಸ್ಟೀಲ್ ಲಿಮಿಟೆಡ್ ಕಂಪನಿ’ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಘೋಡ್ಕೆ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ’ದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಬುಧವಾರ ಪ್ರಕಟಿಸಿದರು.

ನಾಗೇಂದ್ರ ಅವರು ಪರಿಹಾರ ರೂಪದಲ್ಲಿ ದೂರುದಾರರಿಗೆ ಒಟ್ಟು ₹1.24 ಕೋಟಿ ಹಾಗೂ ಸರ್ಕಾರಕ್ಕೆ ₹10 ಸಾವಿರ ದಂಡ ಪಾವತಿಸಲು ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.