ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗೇಂದ್ರ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ 

Published 7 ಜೂನ್ 2024, 12:27 IST
Last Updated 7 ಜೂನ್ 2024, 12:27 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹94.73 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ನಂತರ ಮುಖ್ಯಮಂತ್ರಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದರು.

ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಂಗೀಕರಿಸಿದ್ದಾರೆ. ಈ ಬಗ್ಗೆ ರಾಜಭವನದ ಪ್ರಕಟನೆ ತಿಳಿಸಿದೆ‌. 

ಏನಿದು ಹಣ ವರ್ಗಾವಣೆ ಪ್ರಕರಣ?

ವಾಲ್ಮೀಕಿ ಅಭಿವೃದ್ಧಿ ನಿಗಮದ ₹94.73 ಕೋಟಿ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪದ ಮೇಲೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಸೇರಿದಂತೆ ಬ್ಯಾಂಕಿನ ಆರು ಮಂದಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಮೇ 29ರಂದು ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿತ್ತು. ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ್ ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಅವರನ್ನು ಎಸ್‌ಐಟಿ ಬಂಧಿಸಿದೆ

ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ(ಎಫ್‌ಎಫ್‌ಸಿಸಿಎಸ್‌ಎಲ್‌) 18 ಖಾತೆಗಳಿಗೆ ₹94.73 ಕೋಟಿ ಜಮೆ ಆಗಿರುವ ಸಂಗತಿಯನ್ನು ಎಸ್‌ಐಟಿ ಪತ್ತೆ ಹಚ್ಚಿದೆ. ಹೀಗಾಗಿ, ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ್ ಅವರನ್ನು ಎಸ್‌ಐಟಿ ಬಂಧಿಸಿದೆ. ಲಭ್ಯ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಸಚಿವ ನಾಗೇಂದ್ರ ಅವರ ಆಪ್ತರು ಎನ್ನಲಾದ ನೆಕ್ಕಂಟಿ ನಾಗರಾಜ್ ಹಾಗೂ ಅವರ ಬಾಮೈದ ನಾಗೇಶ್ವರರಾವ್ ಅವರನ್ನು ಬಂಧಿಸಲಾಗಿದೆ. ‘ನೆಕ್ಕಂಟಿ ನಾಗರಾಜ್, ಈ ಮೊದಲು ಮಾಜಿ ಸಚಿವ, ಬಿಜೆಪಿಯ ಬಿ. ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದ’ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT