ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ

Published 6 ಜೂನ್ 2024, 10:19 IST
Last Updated 7 ಜೂನ್ 2024, 0:13 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹94.73 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾದ ಪ್ರಕರಣದ ಬಿಸಿ ಏರುತ್ತಿದ್ದು, ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಗುರುವಾರ ರಾಜೀನಾಮೆ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ, ಶೇ 40ರ ಕಮಿಷನ್ ಆರೋಪ ಹೊರಿಸಿ ‘ಪೇ ಸಿಎಂ’ ಅಭಿಯಾನವನ್ನೇ ಕಾಂಗ್ರೆಸ್ ಪಕ್ಷ ನಡೆಸಿತ್ತು. ಅದನ್ನು ಆಧರಿಸಿಯೇ ಚುನಾವಣೆಯಲ್ಲಿ ಗೆದ್ದಿತ್ತು.  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಒಂದು ವರ್ಷದ ಸಂಭ್ರಮದಲ್ಲಿ ಇರುವ ಹೊತ್ತಿನಲ್ಲೇ ಸಚಿವರ ರಾಜೀನಾಮೆಯ ವಿದ್ಯಮಾನ ನಡೆದಿದೆ.

ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಶಿವಮೊಗ್ಗದ ತಮ್ಮ ಮನೆಯಲ್ಲಿ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮುನ್ನ ಅವರು ಬರೆದಿಟ್ಟಿದ್ದ ಪತ್ರದಲ್ಲಿ, ‘ನನ್ನ ಮೇಲೆ ಒತ್ತಡ ಹಾಕಿದ್ದ ಮೇಲಧಿಕಾರಿಗಳು ನಿಗಮದ ₹187 ಕೋಟಿಯನ್ನು ವರ್ಗಾವಣೆ ಮಾಡಿಸಿದ್ದರು. ‌ಹಣ ವರ್ಗಾವಣೆ ಮಾಡಲು ಸಚಿವರ ಸೂಚನೆಯಿದೆ ಎಂದು ಮೇಲಧಿಕಾರಿಗಳು ನನಗೆ ಹೇಳಿದ್ದರು’ ಎಂದೂ ಬರೆದಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ಕೋಲಾಹಲ ಎಬ್ಬಿಸಿದ್ದರಿಂದ, ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ಎಸ್ಐಟಿಯು ನಾಗೇಂದ್ರ ಆಪ್ತರಿಬ್ಬರನ್ನು ಬುಧವಾರ ಬಂಧಿಸಿತ್ತು. 

ಈ ಬೆನ್ನಲ್ಲೇ, ತಮ್ಮ ನಿವಾಸ ‘ಕಾವೇರಿ’ಗೆ ನಾಗೇಂದ್ರ ಅವರನ್ನು ಬುಧವಾರ ರಾತ್ರಿ ಕರೆಸಿ
ಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಕರಣದ ಕುರಿತಂತೆ ಮಾಹಿತಿ ಪಡೆದಿದ್ದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಗೃಹ ಸಚಿವ ಜಿ. ಪರಮೇಶ್ವರ
ಕೂಡಾ ಇದ್ದರು. 

ಗುರುವಾರ ಬೆಳಗ್ಗಿನಿಂದ ಯಾರ ಕಣ್ಣಿಗೂ ಬೀಳದ ನಾಗೇಂದ್ರ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಆಗ ಸಂಜೆ ಬಂದು ಭೇಟಿ ಮಾಡುವಂತೆ ನಾಗೇಂದ್ರ ಅವರಿಗೆ ಸಿದ್ದರಾಮಯ್ಯ ಸೂಚಿಸಿದ್ದರು. ‌ಮುಖ್ಯಮಂತ್ರಿ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿದ ನಾಗೇಂದ್ರ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ರಾಜೀನಾಮೆ ನೀಡುವುದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ, ‘ಇಡೀ
ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಯಾರ ಒತ್ತಡವೂ ಇಲ್ಲದೆ, ಸ್ವ ಇಚ್ಛೆಯಿಂದ ರಾಜೀನಾಮೆ ನೀಡಲು ನಿರ್ಧರಿಸಿ, ಮುಖ್ಯಮಂತ್ರಿ ಬಳಿ ಸಮಯ ಕೇಳಿದಾಗ ಸಂಜೆ 7.30ಕ್ಕೆ ಬರಲು ಹೇಳಿದರು. ಯಾರಿಗೂ ಮುಜುಗರ ಆಗಬಾರದೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ತೀರ್ಮಾನ ತೆಗೆದುಕೊಂಡೆ’ ಎಂದರು.

‘ಕಳೆದ ಹತ್ತು ದಿನಗಳಿಂದ ಈ ಪ್ರಕರಣವನ್ನು ಮಾಧ್ಯಮಗಳು ಅನೇಕ ರೀತಿಯಲ್ಲಿ ಚಿತ್ರಿಸಿವೆ. ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷದ ಮೇಲೆ ಕೆಸರೆರಚುವ ಕೆಲಸ ಮಾಡಿದ್ದಾರೆ. ಆ ಕಾರಣಕ್ಕೆ ನಾನು ಕೂಡ ಈ ನಿರ್ಧಾರವನ್ನು ಕೈಗೊಳ್ಳಬೇಕಾಯಿತು’ ಎಂದು ಹೇಳಿದರು.

‘ಈ ಪ್ರಕರಣದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಕೆಲವರನ್ಶು ವಿಶೇಷ ತನಿಖಾ ತಂಡದವರು ವಶಕ್ಕೆ ತೆಗೆದುಕೊಂಡು ತನಿಖೆ ಮಾಡುತ್ತಿದ್ದಾರೆ. ಪಕ್ಷದ ನಾಯಕರು, ಮುಖ್ಯಮಂತ್ರಿ ಜೊತೆ ಮಾತನಾಡಿದಾಗ, ರಾಜೀನಾಮೆ ನೀಡುವಂತೆ ಯಾರೂ ನನ್ನ ಮೇಲೆ ಒತ್ತಡ ಹಾಕಿಲ್ಲ. ನನ್ಮ ಆತ್ಮಸಾಕ್ಷಿಯಾಗಿ, ರಾಜ್ಯದ ಜನತೆಯ ಕೂಡ ದಿಕ್ಕು ತಪ್ಪಬಾರದು, ಮುಖ್ಯಮಂತ್ರಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನಿರ್ಧಾರಕ್ಕೆ ಬಂದೆ’ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ‘ಈ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ತನಿಖೆ ನಡೆಯುತ್ತಿ ದ್ದಾಗ ನಾನು ಸಚಿವ ಸ್ಥಾನದಲ್ಲಿದ್ದರೆ ತೊಂದರೆ ಆಗಬಹುದೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.

‘ಈ ಇಡೀ ಪ್ರಕರಣದಲ್ಲಿ ನಿಮ್ಮ ಅಳಿಯನ ಪಾತ್ರ ಇದೆ’ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ, ‘ಈ ರೀತಿ ಊಹಾಪೋಹ ಹಬ್ಬಿಸುತ್ತಿದ್ದಾರೆ. ರಾಜಕೀಯ ಎಂದ ಮೇಲೆ ಅನೇಕ ಆರೋಪಗಳನ್ನು ಮಾಡುತ್ತಾರೆ’ ಎಂದರು.

‘ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದರೆ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುತ್ತಾರಾ’ ಎಂಬ ಪ್ರಶ್ನೆಗೆ, ‘ಅದು ಮುಖ್ಯಮಂತ್ರಿ ಮತ್ತು ವರಿಷ್ಠರಿಗೆ ಬಿಟ್ಟಿದ್ದು. ಅವರು ತೀರ್ಮಾನ ಮಾಡಲಿ. ಆ ರೀತಿ ಭರವಸೆಯನ್ನು ಯಾರೂ ನೀಡಿಲ್ಲ’ ಎಂದೂ ಹೇಳಿದರು.

ಭ್ರಷ್ಟ ಸಚಿವ ನಾಗೇಂದ್ರ ಅವರನ್ನು ರಕ್ಷಣೆ ಮಾಡುವ ಭಂಡತನ ಪ್ರದರ್ಶಿಸಿದ್ದ ಸಿ.ಎಂ, ಡಿ.ಸಿ.ಎಂ, ಒತ್ತಡಕ್ಕೆ ಮಣಿದು ವಿಧಿ ಇಲ್ಲದೇ ರಾಜೀನಾಮೆ ಪಡೆದಿದ್ದಾರೆ
ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಿಬಿಐ ಸೇರಿದಂತೆ ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ನಾಗೇಂದ್ರ ಹೇಳಿದ್ದಾರೆ. ರಾಜೀನಾಮೆ ನೀಡುವಂತೆ ನಾವು ಅವರಿಗೆ ಹೇಳಿರಲಿಲ್ಲ
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
ಕಳೆದ ಮಾರ್ಚ್ ತಿಂಗಳಲ್ಲೆ ಹಗರಣ ನಡೆದಿದೆ. ಸಿ.ಎಂ, ಡಿ.ಸಿ.ಎಂ ಸೇರಿ ಇದನ್ನು ಮುಚ್ಚಿಟ್ಟಿದ್ದಾರೆ.  ಈಗ ಹೊರಬರದೇ ಇದ್ದಿದ್ದರೆ ಮುಚ್ಚಿ ಹಾಕುತ್ತಿದ್ದರು
ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ
ಏನಿದು ಹಣ ವರ್ಗಾವಣೆ ಪ್ರಕರಣ?
ವಾಲ್ಮೀಕಿ ಅಭಿವೃದ್ಧಿ ನಿಗಮದ ₹94.73 ಕೋಟಿ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪದ ಮೇಲೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಿಇಒ ಸೇರಿದಂತೆ ಬ್ಯಾಂಕಿನ ಆರು ಮಂದಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ಮೇ 29ರಂದು ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಿತ್ತು. ಪ್ರಕರಣ ದಲ್ಲಿ ಭಾಗಿಯಾದ ಆರೋಪದಲ್ಲಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ್ ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರ್ಗಣ್ಣನವರ ಅವರನ್ನು ಎಸ್‌ಐಟಿ ಬಂಧಿಸಿದೆ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ(ಎಫ್‌ಎಫ್‌ಸಿಸಿಎಸ್‌ಎಲ್‌) 18 ಖಾತೆಗಳಿಗೆ ₹94.73 ಕೋಟಿ ಜಮೆ ಆಗಿರುವ ಸಂಗತಿಯನ್ನು ಎಸ್‌ಐಟಿ ಪತ್ತೆ ಹಚ್ಚಿದೆ. ಹೀಗಾಗಿ, ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ್ ಅವರನ್ನು ಎಸ್‌ಐಟಿ ಬಂಧಿಸಿದೆ. ಲಭ್ಯ ಸಾಕ್ಷ್ಯಾಧಾರಗಳನ್ನು ಆಧರಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಸಚಿವ ನಾಗೇಂದ್ರ ಅವರ ಆಪ್ತರು ಎನ್ನಲಾದ ನೆಕ್ಕಂಟಿ ನಾಗರಾಜ್ ಹಾಗೂ ಅವರ ಬಾಮೈದ ನಾಗೇಶ್ವರರಾವ್ ಅವರನ್ನು ಬಂಧಿಸಲಾಗಿದೆ. ‘ನೆಕ್ಕಂಟಿ ನಾಗರಾಜ್, ಈ ಮೊದಲು ಮಾಜಿ ಸಚಿವ, ಬಿಜೆಪಿಯ ಬಿ. ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದ’ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT