ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಜಮೀನು ಗುತ್ತಿಗೆ: ಕರಡು ನಿಯಮ ಪ್ರಕಟ

Published : 25 ಮೇ 2023, 1:03 IST
Last Updated : 25 ಮೇ 2023, 1:03 IST
ಫಾಲೋ ಮಾಡಿ
Comments

ಬೆಂಗಳೂರು: ಪ್ಲಾಂಟೇಷನ್‌ ಬೆಳೆಗಳನ್ನು ಅನಧಿಕೃತವಾಗಿ ಬೆಳೆಯುತ್ತಿರುವ ಸರ್ಕಾರಿ ಜಮೀನುಗಳನ್ನು ರೈತರಿಗೆ 30 ವರ್ಷಗಳವರೆಗೆ ಗುತ್ತಿಗೆಗೆ ನೀಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು–1969ಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕಂದಾಯ ಇಲಾಖೆ, ಕರಡು ನಿಯಮಗಳನ್ನು ಪ್ರಕಟಿಸಿದೆ.

ಸರ್ಕಾರಿ ಜಮೀನುಗಳನ್ನು ರೈತರಿಗೆ ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸುವುದಕ್ಕಾಗಿ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಮಸೂದೆ–2022ಕ್ಕೆ ವಿಧಾನಮಂಡಲವು 2022ರ ಡಿಸೆಂಬರ್‌ನಲ್ಲಿ ಅಂಗೀಕಾರ ನೀಡಿತ್ತು. ಈ ತಿದ್ದುಪಡಿಯನ್ನು ಅನುಷ್ಠಾನಗೊಳಿಸುವುದಕ್ಕಾಗಿ ಭೂ ಮಂಜೂರಾತಿ ನಿಯಮಗಳಿಗೂ ತಿದ್ದುಪಡಿ ತರಲಾಗುತ್ತಿದೆ.

2005ರ ಜನವರಿ 1 ಕ್ಕೂ ಮೊದಲು ರೈತರು ಅನಧಿಕೃತವಾಗಿ ಪ್ಲಾಂಟೇಷನ್‌ ಬೆಳೆಗಳನ್ನು ಬೆಳೆದಿದ್ದು, ಈಗಲೂ ಸ್ವಾಧೀನ ಹೊಂದಿರುವ ಸರ್ಕಾರಿ ಜಮೀನುಗಳನ್ನು 30 ವರ್ಷಗಳವರೆಗೆ ಗುತ್ತಿಗೆಗೆ ನೀಡಲು ಈ ನಿಯಮಗಳು ಅವಕಾಶ ಕಲ್ಪಿಸುತ್ತವೆ. ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆಗಳವರೆಗೆ ಗುತ್ತಿಗೆಗೆ ನೀಡಲು ಅವಕಾಶವಿರಲಿದೆ. ಅದಕ್ಕಿಂತ ಹೆಚ್ಚಿನ ಜಮೀನನ್ನು ಅನಧಿಕೃತವಾಗಿ ಸಾಗುವಳಿ ಮಾಡಿದ್ದರೆ, ಹೆಚ್ಚುವರಿ ವಿಸ್ತೀರ್ಣವನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕು ಎಂಬ ಅಂಶ ಕರಡು ನಿಯಮಗಳಲ್ಲಿದೆ.

ಗರಿಷ್ಠ 30 ವರ್ಷಗಳವರೆಗೆ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ನೀಡಲು ಅವಕಾಶ ಇರಲಿದೆ. ಪ್ರತಿ ಎಕರೆಗೆ ವರ್ಷಕ್ಕೆ ₹ 1,000 ದಿಂದ ₹ 3,500ದವರೆಗೂ ಗುತ್ತಿಗೆ ಶುಲ್ಕ ವಿಧಿಸಲಾಗುತ್ತದೆ. ಗುತ್ತಿಗೆಗೆ ಪಡೆದ ರೈತರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ಮಾತ್ರವೇ ಗುತ್ತಿಗೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಉಪ ಗುತ್ತಿಗೆಗೆ ನೀಡಲು ಅವಕಾಶ ಇರುವುದಿಲ್ಲ. ಗುತ್ತಿಗೆಗೆ ಪಡೆದ ಜಮೀನಿನಲ್ಲಿ ಪ್ಲಾಂಟೇಷನ್‌ ಬೆಳೆಗಳನ್ನು ಮಾತ್ರವೇ ಬೆಳೆಯಬೇಕು. ಅಂತಹ ಜಮೀನುಗಳಲ್ಲಿ ಇರುವ ಮರಗಳು ಸರ್ಕಾರದ ಸ್ವತ್ತುಗಳು ಎಂಬ ಅಂಶವೂ ಕರಡಿನಲ್ಲಿದೆ.

ಗುತ್ತಿಗೆಗೆ ಪಡೆದ ಜಮೀನುಗಳನ್ನು ಆಧಾರವಾಗಿಟ್ಟು ಯಾವುದೇ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಅವಕಾಶ ಇರುವುದಿಲ್ಲ.

ತಿದ್ದುಪಡಿ ನಿಯಮಗಳು ಜಾರಿಯಾದ ಬಳಿಕ ಅರ್ಹ ಕುಟುಂಬಗಳು ತಾಲ್ಲೂಕಿನ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ತಹಶೀಲ್ದಾರ್‌ ಅರ್ಜಿಯನ್ನು ಪರಿಶೀಲಿಸಿ, ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕು. ಜಿಲ್ಲಾಧಿಕಾರಿಯು ಅರ್ಜಿಗಳನ್ನು ಸ್ವೀಕರಿಸಿದ ದಿನದಿಂದ ಮೂರು ತಿಂಗಳೊಳಗೆ ಜಮೀನು ಮಂಜೂರು ಮಾಡುವ ಅಥವಾ ತಿರಸ್ಕರಿಸುವ ನಿರ್ಧಾರ ಕೈಗೊಳ್ಳಬೇಕು. ಜಿಲ್ಲಾಧಿಕಾರಿಯು ಭೂ ಮಂಜೂರಾತಿಗೆ ಆದೇಶ ಹೊರಡಿಸಿದಲ್ಲಿ ತಹಶೀಲ್ದಾರ್‌ ರೈತರಿಗೆ ಗುತ್ತಿಗೆ ಕರಾರು ಪತ್ರ ಮಾಡಿಕೊಡಬೇಕು ಎಂಬ ಅಂಶ ನಿಯಮಗಳಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT