ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧ: ಸಿಎಂ ಬಸವರಾಜ ಬೊಮ್ಮಾಯಿ

Last Updated 15 ಸೆಪ್ಟೆಂಬರ್ 2021, 5:59 IST
ಅಕ್ಷರ ಗಾತ್ರ

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತು ಮುಕ್ತವಾಗಿ ಚರ್ಚೆ ಮಾಡಲು ಸರ್ಕಾರ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಪ್ರಸ್ತುತ ಕಾಲಕ್ಕೆ ತಕ್ಕಂತೆ ಶಿಕ್ಷಣ ಕೊಟ್ಟು ಯುವಕರಿಗೆ ಒಳ್ಳೆಯ ಭವಿಷ್ಯ ರೂಪಿಸಲು ನೀತಿ ಪೂರಕವಾಗಿದೆ. ಇದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತೇವೆ’ ಎಂದರು.

‘ನೀತಿ ಜಾರಿಗೂ ಮೊದಲು ಎಲ್ಲ ಕಡೆ ಚರ್ಚೆ ಆಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲೂ ಚರ್ಚೆ ನಡೆದಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಬಗ್ಗೆ ಇನ್ನೊಂದು ಸಮಿತಿ ಮಾಡಿ ಚರ್ಚೆ ಮಾಡುತ್ತೇವೆ. ಯಾರೂ ಕೂಡಾ ಆತಂಕಪಡುವ ಅಗತ್ಯ ಇಲ್ಲ’ ಎಂದೂ ಅವರು ಹೇಳಿದರು.

ಎಂಜಿನಿಯರ್‌ಗಳ ದಿನಾಚರಣೆ: ಅದಕ್ಕೂ ಮೊದಲು, ಎಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಕೆ.ಆರ್. ವೃತ್ತದ ಬಳಿ ಇರುವ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆಗೆ ಮುಖ್ಯಮಂತ್ರಿ ಮಾಲಾರ್ಪಣೆ ಮಾಡಿದರು. ಚಂದನ್ ಎಂಬ ಐಟಿಐ ಪದವೀಧರನಿಂದಲೂ ವಿಶ್ವೇಶ್ವರಯ್ಯ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿಸಿದರು.

‘ವಿಶ್ವೇಶ್ವರಯ್ಯ ಅವರ ಜಯಂತಿಯನ್ನು ಎಂಜಿನಿಯರ್‌ ದಿನ ಎಂದು ನಾವು ಆಚರಣೆ ಮಾಡುತ್ತೇವೆ. ನಿಜವಾಗಿ ನಾಡು ಕಟ್ಟಿದವರು ಶ್ರಮಿಕ ವರ್ಗ. ಹೊಲದಲ್ಲಿ ರೈತರು ಮತ್ತು ಕಾರ್ಮಿಕರು. ತಳಮಟ್ಟದಲ್ಲಿರುವ ದುಡಿಯುವ ವರ್ಗ. ವಿಶ್ವೇಶ್ವರಯ್ಯ ಅವರು ಈ ವರ್ಗವನ್ನು ಪ್ರತಿನಿಧಿಸುವವರು’ ಎಂದು ಮುಖ್ಯಮಂತ್ರಿ ಬಣ್ಣಿಸಿದರು.

‘ಪ್ರಗತಿಪರ ಚಿಂತನೆಯಿಂದ ನಾಡು ಕಟ್ಟಿದವರು ವಿಶ್ವೇಶ್ವರಯ್ಯ. ನಾವು ಕೂಡಾ ಅವರ ಹಾದಿಯಲ್ಲಿ ನಾಡು ಕಟ್ಟಲು ಸಂಕಲ್ಪ ಮಾಡಬೇಕು. ಕೆ.ಆರ್‌. ವೃತ್ತದಲ್ಲಿ ವಿಶ್ವೇಶ್ವರಯ್ಯ ಪ್ಲಾಜಾ ಮಾಡಿದ್ದೇವೆ. ಇನ್ನೂ 30 ವೃತ್ತಗಳಲ್ಲಿ ಬಿಬಿಎಂಪಿ ಇಂಥ ಪ್ಲಾಜಾ ಮಾಡಲಿದೆ. ಇದರಿಂದ ಬೆಂಗಳೂರಿನ ಅಂದ ಹೆಚ್ಚಲಿದೆ’ ಎಂದರು.

‘ಎಂಜಿನಿಯರ್‌ ಭವನ’ ಉದ್ಘಾಟನೆ: ಕರ್ನಾಟಕ ಎಂಜಿನಿಯರಿಂಗ್ ಸೇವಾ ಸಂಘದ ವತಿಯಿಂದ ಕೆ.ಆರ್. ವೃತ್ತದಲ್ಲಿ ನಿರ್ಮಿಸಲಾಗಿರುವ ಎಂಜಿನಿಯರ್‌ಗಳ ತರಬೇತಿ ಕೇಂದ್ರ ‘ಎಂಜಿನಿಯರ್ ಭವನ'ವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಮುಖ್ಯಮಂತ್ರಿ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT