ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11,170 ಗ್ರಾ.ಪಂ. ಸಿಬ್ಬಂದಿಗೆ ಸೇವಾ ಭದ್ರತೆ

ನೀರಗಂಟಿ, ಜವಾನ, ಸ್ವಚ್ಛತಾಗಾರರಿಗೆ ಜಿ.ಪಂ. ಅನುಮೋದನೆ ನೀಡಲು ನಿರ್ಧಾರ
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಹಾವೇರಿ: ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ 11,170 ಸಿಬ್ಬಂದಿಗೆ ಸೇವಾ ಭದ್ರತೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. 

2017ಕ್ಕೂ ಮುಂಚಿತವಾಗಿ ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ನೀರಗಂಟಿ, ಜವಾನ, ಸ್ವಚ್ಛತಾಗಾರರ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆಯ ತೊಡಕು ನಿವಾರಿಸಿ ‍ಸಭಾನಡಾವಳಿ, ವೇತನ ಪಾವತಿ, ಹಾಜರಾತಿ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿಯಿಂದ ಘಟನೋತ್ತರವಾಗಿ ಅನುಮೋದನೆ ನೀಡಲು ಕರ್ನಾಟಕ ಪಂಚಾಯತ್‌ ರಾಜ್‌ ಆಯುಕ್ತಾಲಯದ ನಿರ್ದೇಶಕರು ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದ್ದಾರೆ. 

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2017ರ ಅಕ್ಟೋಬರ್‌ 31ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ಕರವಸೂಲಿಗಾರರು–940, ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌– 1,231, ನೀರಗಂಟಿ– 12,348, ಸ್ವಚ್ಛತಾಗಾರರು– 2,847, ಜವಾನ– 1,306 ಸೇರಿ ಒಟ್ಟು 18,672 ಸಿಬ್ಬಂದಿಗೆ ನಾನಾ ಕಾರಣಗಳಿಂದ ಜಿಲ್ಲಾ ಪಂಚಾಯಿತಿ ಅನುಮೋದನೆ ಸಿಕ್ಕಿರಲಿಲ್ಲ. ಇವರಲ್ಲಿ 11,543 ಸಿಬ್ಬಂದಿ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲದ ಕಾರಣಕ್ಕೆ ಅನುಮೋದನೆ ಬಾಕಿ ಉಳಿದಿತ್ತು. 

ಹಲವು ಸೌಲಭ್ಯ:

‘ಜಿಲ್ಲಾ ಪಂಚಾಯಿತಿ ಅನುಮೋದನೆ ನೀಡುವುದರಿಂದ ಕನಿಷ್ಠ ವೇತನ, ಸೇವಾ ಭದ್ರತೆ, ಅನುಕಂಪದ ಮೇಲೆ ಕುಟುಂಬಸ್ಥರನ್ನು ಕೆಲಸಕ್ಕೆ ನೇಮಕ, ಪಿಂಚಣಿ ಸೌಲಭ್ಯ, ಸಕಾಲದಲ್ಲಿ ವೇತನ, ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯಾರ್ಹತೆ ಗಳಿಸಿದರೆ ಕೆಲಸದಲ್ಲಿ ಬಡ್ತಿ ಸೇರಿ ಹಲವು ಸೌಲಭ್ಯಗಳು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಿಗಲಿವೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ನಾಡಗೌಡ ತಿಳಿಸಿದರು. 

ವೇತನಕ್ಕೆ ಪರದಾಟ:

‘ಗ್ರಾಮ ಪಂಚಾಯಿತಿ ವತಿಯಿಂದ ನೇಮಕಗೊಂಡ ನೀರಗಂಟಿ, ಜವಾನ, ಸ್ವಚ್ಛತಾಗಾರರಿಗೆ ಗ್ರಾಮ ಪಂಚಾಯಿತಿ ಆಂತರಿಕ ಸಂಪನ್ಮೂಲದಿಂದ ವೇತನ ನೀಡಲಾಗುತ್ತಿತ್ತು. ಕೆಲವೊಮ್ಮೆ ಹಣದ ಕೊರತೆಯಿಂದ ವೇತನ ಕೊಡುವುದು ಮೂರ್ನಾಲ್ಕು ತಿಂಗಳು ವಿಳಂಬವಾಗುತ್ತಿತ್ತು. ಇದರಿಂದ ಜೀವನ ನಿರ್ವಹಣೆಗೂ ತೊಡಕಾಗಿತ್ತು. ಈಗ ಸರ್ಕಾರ ಸೇವಾ ಭದ್ರತೆ ನೀಡಿರುವುದರಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂದಾನಪ್ಪ ಹೆಬಸೂರು ತಿಳಿಸಿದರು. 

‘ಕೆಲಸದ ಅವಶ್ಯವಿದ್ದಾಗ ಗ್ರಾಮ ಪಂಚಾಯಿತಿಯವರು ನಮ್ಮನ್ನು ನೇಮಿಸಿದ್ದರು. ಆದರೆ, ಕನಿಷ್ಠ ವಿದ್ಯಾರ್ಹತೆಯ ನೆಪವೊಡ್ಡಿ ಜಿಲ್ಲಾ ಪಂಚಾಯಿತಿಯವರು ಅನುಮೋದನೆ ನೀಡಲು ಹಿಂದೇಟು ಹಾಕಿದ್ದರು. ಇದರಿಂದ ಕನಿಷ್ಠ ವೇತನ, ಸೇವಾ ಭದ್ರತೆ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದೆವು. ಗ್ರಾಮಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಅವರು ಮನಬಂದಂತೆ ದುಡಿಸಿಕೊಳ್ಳುತ್ತಿದ್ದರು, ಬೇಡವಾದಾಗ ಕೆಲಸದಿಂದ ವಜಾ ಮಾಡುತ್ತಿದ್ದರು, ರಜೆ ಕೊಡದಂತೆ ಕಿರುಕುಳ ನೀಡುತ್ತಿದ್ದರು. ಈಗ ಸರ್ಕಾರದ ಆದೇಶದಿಂದ ನಮಗೆ ನೆಮ್ಮದಿ ಸಿಕ್ಕಂತಾಗಿದೆ‘ ಎಂದು ಜವಾನ ಮತ್ತು ಸ್ವಚ್ಛತಾಗಾರರು ತಿಳಿಸಿದರು.

ಹಾವೇರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 264 ಸಿಬ್ಬಂದಿಗಳ ಹುದ್ದೆಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

– ಅಕ್ಷಯ ಶ್ರೀಧರ್ ಸಿಇಒ ಹಾವೇರಿ ಜಿಲ್ಲಾ ಪಂಚಾಯಿತಿ

ಗ್ರಾಮ ಪಂಚಾಯಿತಿಯಿಂದ ನೇಮಕಗೊಂಡ ಸಿಬ್ಬಂದಿಗೆ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಿದ್ದೆವು. ನಮ್ಮ ಹೋರಾಟಕ್ಕೆ ಜಯ ಸಂದಿದೆ

– ಎಂ.ಬಿ.ನಾಡಗೌಡ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ

ಅನುಮೋದನೆಗೆ ಬಾಕಿ ಇರುವ ಗ್ರಾ.ಪಂ. ಸಿಬ್ಬಂದಿ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT