ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಕಟ್ಟಿನ ಜಾಗಕ್ಕೆ ಆರೋಪಿ ಅಧಿಕಾರಿ?

ಎಪಿಪಿ ನೇಮಕಾತಿ ಪರೀಕ್ಷೆ ಅಕ್ರಮ
Last Updated 14 ಆಗಸ್ಟ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ನೇಮಕಾತಿ ಹಗರಣದ ಆರೋಪಿ, ಪ್ರಾಸಿಕ್ಯೂಷನ್‌ ವಿಭಾಗದ ಆಡಳಿತಾಧಿಕಾರಿ ನಾರಾಯಣಸ್ವಾಮಿ ಅವರನ್ನು ಅದೇ ವಿಭಾಗದ ಕೇಂದ್ರ ಸ್ಥಾನಿಕ ಸಹಾಯಕರಾಗಿ (ಎಚ್‌ಕ್ಯೂಎ) ಆಗಿ ನೇಮಕ ಮಾಡುವ ಪ್ರಯತ್ನ ನಡೆಯುತ್ತಿದೆ.

2013– 14ನೇ ಸಾಲಿನ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ಅಕ್ರಮ ನೇಮಕಾತಿ ಹಗರಣದಲ್ಲಿ ನಾರಾಯಣ ಸ್ವಾಮಿ 2ನೇ ಆರೋಪಿ. ಅವರ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ಶಿಫಾರಸು ಮಾಡಿದೆ. ಆದರೆ, ಅದನ್ನು ಕಡೆಗಣಿಸಿ ಆಯಕಟ್ಟಿನ ಸ್ಥಾನಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ದೇವನಹಳ್ಳಿ ಜೆಡಿಎಸ್‌ ಶಾಸಕ ನಿಸರ್ಗ ನಾರಾಯಣಸ್ವಾಮಿ, ಜುಲೈ 27ರಂದು ನಾರಾಯಣಸ್ವಾಮಿ ಅವರನ್ನುಎಚ್‌ಕ್ಯೂಎ ಆಗಿ ನೇಮಿಸುವಂತೆ ಶಿಫಾರಸು ಮಾಡಿದ್ದಾರೆ. ಅದೇ ಪತ್ರದ ಮೇಲೆ ‘ಅಗತ್ಯ ಕ್ರಮಕ್ಕಾಗಿ ಸೂಚಿಸಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಟಿಪ್ಪಣಿ ಹಾಕಿದ್ದಾರೆ. ಈ ಶಿಫಾರಸು ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಈ ಹಗರಣ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ಸದ್ಯದಲ್ಲೇ ಆರಂಭವಾಗಲಿದೆ. ಪ್ರಾಸಿಕ್ಯೂಷನ್‌ ನಿರ್ದೇಶಕರಾಗಿದ್ದ ಚಂದ್ರಶೇಖರ ಹಿರೇಮಠ ಒಂದನೇ ಆರೋಪಿ. 61 ಎಪಿಪಿಗಳೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ.

ಚಂದ್ರಶೇಖರ ಹಿರೇಮಠ ಮತ್ತು ನಾರಾಯಣಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ಕಾಯ್ದೆ 12(3) ಅಡಿ ಸರ್ಕಾರಕ್ಕೆ ಮತ್ತೊಂದು ಶಿಫಾರಸು ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಹೀಗಿದ್ದರೂ, ನಾರಾಯಣಸ್ವಾಮಿ ಅವರನ್ನು ನೇಮಿಸಲು ಒಲವು ವ್ಯಕ್ತವಾಗಿದೆ. ಮುಖ್ಯಮಂತ್ರಿ ಟಿಪ್ಪಣಿ ಗೃಹ ಇಲಾಖೆಗೆ ಹೋಗಿದೆ. ಈಹುದ್ದೆಗೆ ಮಂಗಳೂರು ಮೂಲದ ಮಹಿಳಾ ಕಾನೂನು ಅಧಿಕಾರಿಯೊಬ್ಬರ ಹೆಸರನ್ನೂ ಕಳುಹಿಸಲಾಗಿದ್ದು, ಗೃಹ ಸಚಿವ ಜಿ. ಪರಮೇಶ್ವರ ಅವರ ಪರಿಶೀಲನೆಯಲ್ಲಿದೆ.

‘ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಅಧಿಕಾರಿ, ಸಿಬ್ಬಂದಿಯನ್ನು ಬೇರೆ ಸ್ಥಳಗಳಿಗೆ ವರ್ಗಾಯಿಸಬೇಕು’ ಎಂದು ಸರ್ಕಾರದ ಆದೇಶವಿದೆ. ಹೀಗಿದ್ದರೂ, ಸರ್ಕಾರ ಇಂಥವರ ರಕ್ಷಣೆಗೆ ನಿಂತರೆ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೇ ಧಕ್ಕೆ ಬರಲಿದೆ’ ಎಂದೂ ಲೋಕಾಯುಕ್ತ ಮೂಲಗಳು ಅಭಿಪ್ರಾಯಪಟ್ಟಿವೆ.

ನ್ಯಾಯಾಂಗ ಇಲಾಖೆ ನಾಲ್ಕು ವರ್ಷಗಳ ಹಿಂದೆ 191 ಎಪಿಪಿಗಳ ನೇಮಕಾತಿಗೆ ಪರೀಕ್ಷೆ ನಡೆಸಿತ್ತು.‍ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದೂ ಆರೋಪಿಸಲಾಗಿತ್ತು.

**

ದೇವನಹಳ್ಳಿ ಶಾಸಕರ ಶಿಫಾರಸು ಪತ್ರದಲ್ಲಿ ನಾರಾಯಣಸ್ವಾಮಿ ದಕ್ಷ ಅಧಿಕಾರಿ ಎಂದು ಹೇಳಲಾಗಿದೆ. ಅವರು ಯಾವುದರಲ್ಲಿ ದಕ್ಷರು ಎಂಬುದನ್ನು ಸ್ಪಷ್ಟಪಡಿಸಲಿ

-ಎಚ್‌.ಡಿ. ರವಿ,ಎಪಿಪಿ ಅಕ್ರಮ ನೇಮಕಾತಿ ವಿರೋಧಿ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT