ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಂತರವೂ ’ಗ್ಯಾರಂಟಿ’ ಮುಂದುವರಿಕೆ: ಸಲೀಂ ಅಹಮದ್‌

Published 29 ಆಗಸ್ಟ್ 2023, 19:15 IST
Last Updated 29 ಆಗಸ್ಟ್ 2023, 19:15 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಗಾಗಿ ‘ಗ್ಯಾರಂಟಿ’ ಯೋಜನೆಗಳನ್ನು ಮಾಡಿಲ್ಲ. 2024ರ ಲೋಕಸಭಾ ಚುನಾವಣೆ ನಂತರವೂ ಯೋಜನೆಗಳು ಮುಂದುವರಿಯಲಿವೆ ಎಂದು ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಹೇಳಿದರು.

ಕಾಂಗ್ರೆಸ್‌ ಚುನಾವಣೆಗೂ ಮೊದಲು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಕಾಲಮಿತಿಯ ಒಳಗೆ ಜಾರಿಗೊಳಿಸುತ್ತಿದೆ. ಈಗಾಗಲೇ ಮೂರು ಗ್ಯಾರಂಟಿಗಳು ಜಾರಿಯಾಗಿವೆ. ಗೃಹಲಕ್ಷ್ಮಿಗೆ ಆ.30ರಂದು ಚಾಲನೆ ದೊರೆಯಲಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ 100 ದಿನಗಳಲ್ಲೇ ನುಡಿದಂತೆ ನಡೆದಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

40 ಪರ್ಸೆಂಟ್‌ ಕಮಿಷನ್‌ ಸೇರಿದಂತೆ ಕಾಂಗ್ರೆಸ್‌ ಆದೇಶಿಸಿರುವ ತನಿಖೆಗಳ ಬಗ್ಗೆ ಬಿಜೆಪಿ ನಾಯಕರಿಗೆ ಭಯವಿದೆ. ಅದಕ್ಕಾಗಿಯೇ ತನಿಖೆಗೆ ವಿರೋಧಿಸುತ್ತಿದ್ದಾರೆ. ಟೀಕೆ ಮಾಡುತ್ತಿದ್ದಾರೆ. ಅವರು ಸರಿಯಾಗಿ ನಡೆದುಕೊಂಡಿದ್ದರೆ ಭಯಪಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.  

ಕಾಂಗ್ರೆಸ್‌ ಪಕ್ಷಕ್ಕೆ ಯಾರನ್ನೂ ಕರೆಯುತ್ತಿಲ್ಲ. ಬಿಜೆಪಿ, ಜೆಡಿಎಸ್‌ ನಾಯಕರೇ ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಬರುತ್ತಿದ್ದಾರೆ. ಬೇರೆ ಪಕ್ಷದ ಕೆಲ ನಾಯಕರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ. ಶಾಸಕರು, ಮಾಜಿ ಶಾಸಕರ ಸೇರ್ಪಡೆ ಕುರಿತು ದೆಹಲಿ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನೂರು ದಿನಗಳ‌ ದೋಷಾರೋಪಪಟ್ಟಿ ಬಿಡುಗಡೆ ಮಾಡುವ ಮೊದಲು ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡಲಿ. ಕಾಂಗ್ರೆಸ್‌ ಈಗಾಗಲೇ ಲೋಕಸಭಾ ಚುನಾವಣೆಯ ಸಿದ್ಧತೆ ನಡೆಸಿದೆ. ಪ್ರತಿ‌‌ ಲೋಕಸಭೆ ಕ್ಷೇತ್ರಕ್ಕೆ‌ ಒಬ್ಬ ಸಚಿವರು ಹಾಗೂ ಮುಖಂಡರಿಗೆ ಉಸ್ತುವಾರಿ ನೀಡಲಾಗುತ್ತದೆ. ಅವರು ನೀಡುವ ವರದಿ ಆಧಾರದಲ್ಲಿ ಅಭ್ಯರ್ಥಿ ಆಯ್ಕೆ‌ ನಡೆಯಲಿದೆ ಎಂದು ಹೇಳಿದರು.

ಮೋದಿಗೆ ‘ಸುಳ್ಳಿನ ಆಸ್ಕರ್‌’:  

ಪ್ರಧಾನಿ ಮೋದಿ ಅವರು ಒಂಬತ್ತು ವರ್ಷ ಅಧಿಕಾರ ನಡೆಸಿದರೂ ವಿದೇಶದಿಂದ ಕಪ್ಪು ಹಣ ತರಲಿಲ್ಲ, ಎರಡು ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ರೈತರ ಆದಾಯ ದ್ವಿಗುಣ ಮಾಡಲಿಲ್ಲ. ಸುಳ್ಳಿಗೆ ಆಸ್ಕರ್‌ ಪ್ರಶಸ್ತಿ ಇಟ್ಟರೆ ಅದು ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT