ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಗುರುದ್ವಾರದಲ್ಲಿ ಕಳೆಗಟ್ಟಿದ ಸಂಭ್ರಮ, ಇಂದು ಬೃಹತ್ ಮೆರವಣಿಗೆ

Last Updated 12 ನವೆಂಬರ್ 2019, 6:34 IST
ಅಕ್ಷರ ಗಾತ್ರ

ಬೀದರ್‌: ಗುರುನಾನಕ್‌ ದೇವ ಅವರ 550ನೇ ಜಯಂತಿ ಅಂಗವಾಗಿ ಇಲ್ಲಿನ ಗುರುದ್ವಾರದಲ್ಲಿ ವಾರದಿಂದ ಕಾರ್ಯಕ್ರಮ ನಡೆಯುತ್ತಿದೆ. ಅದರಂತೆ ಮಂಗಳವಾರವು ಕೀರ್ತನೆ, ಗ್ರಂಥ ಪಠಣ ಕಾರ್ಯಕ್ರಮಗಳು ನಡೆದವು.

ಸೋಮವಾರ ಕೀರ್ತನೆ, ಭಜನೆ ಹಾಗೂ ಪ್ರಾರ್ಥನೆ ನೆರವೇರಿದವು. ದೇಶದ ವಿವಿಧೆಡೆಯಿಂದ ಬಂದಿರುವ ಸಾವಿರಾರು ಭಕ್ತರು ಗುರುಗ್ರಂಥ ಸಾಹೀಬ್‌ ದರ್ಶನ ಪಡೆಯುತ್ತಿದ್ದಾರೆ. ವಾರದ ಅವಧಿಯಲ್ಲಿ ಗುರುದ್ವಾರಕ್ಕೆ ಸುಮಾರು ಒಂದೂವರೆ ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.

ಗುರುನಾನಕ್‌ರ ಜಯಂತಿ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರಿಗೆ ಗುರುನಾನಕ್‌ ಪ್ರಬಂಧಕ ಕಮಿಟಿಯು ಗುರುನಾನಕ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಂಗಲು ವ್ಯವಸ್ಥೆ ಮಾಡಿದೆ. ನಗರದ ಎಲ್ಲ ಲಾಡ್ಜ್‌ಗಳು ಭರ್ತಿಯಾಗಿವೆ. ಕೆಲವರು ಹೈದರಾಬಾದ್‌ ಹಾಗೂ ಜಹೀರಾಬಾದ್‌ನ ಲಾಡ್ಜ್‌ಗಳಲ್ಲಿ ಉಳಿದುಕೊಂಡಿದ್ದಾರೆ.ಯಾತ್ರಿ ನಿವಾಸದಲ್ಲಿ 266 ಕೊಠಡಿಗಳು ಒಂದು ತಿಂಗಳ ಹಿಂದೆಯೇ ಬುಕ್‌ ಆಗಿದ್ದು, ಆವರಣದಲ್ಲಿ ಎರಡು ಕಡೆ ತಾತ್ಕಾಲಿಕ ಟೆಂಟ್‌ಹೌಸ್‌ ನಿರ್ಮಿಸಲಾಗಿದೆ.

ಬ್ಯಾಗ್‌ಗಳನ್ನು ಇಡಲು ಕೌಂಟರ್‌ ತೆರೆಯಲಾಗಿದ್ದು, ಪಾದರಕ್ಷೆಗಳನ್ನು ಇಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಗುರುದ್ವಾರ, ಗುರುನಾನಕ್‌ ಝೀರಾ ಹಾಗೂ ಯಾತ್ರಿ ನಿವಾಸವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದ್ದು, ಪ್ರವೇಶ ದ್ವಾರದಲ್ಲಿ ಗುರುನಾನಕ್‌ರ 550ನೇ ಜಯಂತಿಯ ಲೋಗೊ ಅಳವಡಿಸಲಾಗಿದೆ.

ಮಂಗಳವಾರಬೃಹತ್ ಮೆರವಣಿಗೆ

ಬೀದರ್‌ನ ಗುರುದ್ವಾರದಲ್ಲಿ ಗುರುನಾನಕ್‌ ದೇವ ಜಯಂತಿ ಅಂಗವಾಗಿ ಮಂಗಳವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಸುಕಿನ 2 ಗಂಟೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಬೆಳಗಿನ ಜಾವ ದೆಹಲಿ ಕೀರ್ತನಕಾರ ಚಮನ್‌ಜೀತಸಿಂಗ್ ಲಾಲ್, ಗುರುನಾಮಸಿಂಗ್, ಬೀದರ್‌ನ ಹಜೂರಿ ರಾಗಿ, ಸುಖಮನಿ ಸಾಹೇಬ್‍ಜಿ ಅವರು ಪಂಜವಾಣಿ ಕುರಿತು ಕೀರ್ತನೆ ಹಾಡಿದರು. ಬೆಳಗ್ಗೆ 9.30ಕ್ಕೆ ಅಖಂಡ ಗ್ರಂಥ ಪಠಣ ಕಾರ್ಯಕ್ರಮ ನಡೆಯಿತು.

ಗುರುದ್ವಾರ ಶ್ರೀನಾನಕ್‌ ಝೀರಾ ಸಾಹೀಬ್ ಆವರಣದಿಂದ ಮಧ್ಯಾಹ್ನ 3.30ಕ್ಕೆ ಮೆರವಣಿಗೆ ಆರಂಭವಾಗಿ ಗುರುನಾನಕ್‌ ಗೇಟ್‌, ಉದಗಿರಿ ರಸ್ತೆ, ಮಡಿವಾಳ ವೃತ್ತ, ರೋಟರಿ ವೃತ್ತ, ಅಂಬೇಡ್ಕರ್‌ ವೃತ್ತ, ಹರಳಯ್ಯ ವೃತ್ತ, ಮತ್ತೆ ರೋಟರಿ ವೃತ್ತ ಮಾರ್ಗವಾಗಿ ಗುರುದ್ವಾರಕ್ಕೆ ತೆರಳಲಿದೆ. ಮೆರವಣಿಗೆಯಲ್ಲಿ ಸುಮಾರು 45 ಸಾವಿರದಿಂದ 50 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.ರಾತ್ರಿ 9 ಗಂಟೆ ನಂತರ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಎಂದು ಗುರುದ್ವಾರ ಶ್ರೀ ನಾನಕ್ ಝೀರಾ ಸಾಹೀಬ್ ಪ್ರಬಂಧಕ ಕಮಿಟಿ ತಿಳಿಸಿದೆ.

ಗುರುದ್ವಾರ ಶ್ರೀ ಗುರುನಾನಕ್‌ ಝೀರಾ ಸಾಹೀಬ್ ಆವರಣದಲ್ಲಿ ಸೋಮವಾರ ಕೀರ್ತನೆ ಕಾರ್ಯಕ್ರಮ ನಡೆಯಿತು. ರಾಜೇಂದ್ರಸಿಂಗ್, ಗ್ಯಾನಿ ಜನಬೀರ್‌ಸಿಂಗ್, ಹಜೂರ್‌ಸಾಹೇಬ, ಬಾಬಾ ಭಟ್ನಾಸಿಂಗ್, ಜಬ್ಬೀರ್‌ ಸಿಂಗ್, ಪುತನಾಸಾಹೇಬ್, ರಣಜೀತ್‌ಸಿಂಗ್ ಖಾಲ್ಸಾ, ಬಾಂಗ್ಲಾಸಾಹೇಬ, ರವೀಂದ್ರ ಸಿಂಗ್, ಚಮನ್‌ಜೀತ್‌ಸಿಂಗ್, ಅಮೃತ್‌ಸಿಂಗ್ ಪಟಿಯಾಲಾ, ಜಸ್ಬೀರ್‌ಸಿಂಗ್, ಗುರುಪ್ರೀತಸಿಂಗ್ ಶಿಮ್‌ವಾಲೆ, ಜೀವನ್‌ಸಿಂಗ್ ಲೂಧಿಯಾನಾ, ಲಾಲ್‌ಸಿಂಗ್ ಫಖರ್, ಗುರುನಾಮ ಸಿಂಗ್, ಅಮನ್‌ದೀಪ್‌ಸಿಂಗ್, ಸತೀಂದ್ರಪಾಲ್ ಅಮೃತಸರ್, ಅಮೃತ್‌ಸಿಂಗ್‌ ಠಾಣಾ, ಗುಲಾಮ್ ಹೈದರ್‌ ಖಾದ್ರಿ ಹಫೀಜ್‌ ಅಬ್ದುರ್‌ ರೆಹಮಾನ್‌ ಸರದಿಯಂತೆ ಕಾರ್ಯಕ್ರಮ ನೀಡಿದರು.
ಸರ್ವಧರ್ಮ ಸಮ್ಮೇಳನದಲ್ಲಿ ಬೆಲ್ದಾಳ ಸಿದ್ದರಾಮ ಶರಣರು, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಗುಲಾಂ ಹೈದರ್ ಖಾದ್ರಿ, ಹಾಜಿ ಅಬ್ದುಲ್ ರೆಹಮಾನ್, ಭಾಯಿ ಜೋತಿಂದ್ರ ಸಿಂಗ್, ಗ್ಯಾನಿ ಜಂಗಬೀರ್‌ಸಿಂಗ್, ಹಜೂರ್ ಸಾಹೀಬ್ ನಾಂದೇಡ್, ಗ್ಯಾನಿ ರಂಜೀತ್ ಸಿಂಗ್, ಗ್ಯಾನಿಭಾಯಿ ರಾಜೇಂದ್ರಸಿಂಗ್ ದೆಹಲಿ ಪಾಲ್ಗೊಂಡಿದ್ದರು.

ಬಂದ ಭಕ್ತರಿಗೆಲ್ಲ ಪ್ರಸಾದ

ಗುರುಗ್ರಂಥ ಸಾಹೀಬ್ ದರ್ಶನಕ್ಕೆ ಬರುತ್ತಿರುವ ಎಲ್ಲ ಭಕ್ತರಿಗೆ ಎರಡು ಲಂಗರ್‌(ದಾಸೋಹ ಸ್ಥಳ)ಗಳಲ್ಲಿ ಪ್ರಸಾದ ವಿತರಿಸಲಾಗುತ್ತಿದೆ. ಬೇಳೆ ಸಾರು, ಚಪಾತಿ, ಫಲಾವ್‌, ಅನ್ನ, ಸೀರಾವನ್ನು ನೀಡಲಾಗುತ್ತಿದ್ದರೆ, ಕೆಲ ಭಕ್ತರೇ ಪ್ರತ್ಯೇಕವಾಗಿ ಉಪಾಹಾರ ಸಿದ್ಧಪಡಿಸಿ ಭಕ್ತರಿಗೆ ನೀಡುತ್ತಿದ್ದಾರೆ. ಸೀರಾ, ಮಿರ್ಚಿ ಭಜ್ಜಿ, ಆಲೂವಡಾ, ಉದ್ದಿನವಡಾ, ಹುಗ್ಗಿ, ಜಿಲೇಬಿ, ನ್ಯೂಡಲ್ಸ್‌ ತಯಾರಿಸಿ ಹಂಚುತ್ತಿದ್ದಾರೆ.
ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗಾಗಿ ಗುರುದ್ವಾರದ ಗೇಟ್‌ ಬಳಿ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಕೆಲವರು ಈ ವಾಹನದ ಮೂಲಕ ಗುರುಗ್ರಂಥ ಸಾಹೀಬ್‌ ದರ್ಶನ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT